Wednesday, April 6, 2011

Saturday, January 22, 2011

ಎಪ್ಪತ್ತೈದು ಎಂ. ಎಂ. ಸಾಕಾಗಲ್ಲ..


ಸರ್ ಈ ಬುಕ್ ತಗೊಳ್ಳಿ ಎಂದು ಬೆನ್ನು ಬೀಳುವ ಭೂತಗಳು, ಬೇಡಪ್ಪಾ e ಬುಕ್ ಇದೆ ಎನ್ನುವ ನಾವುಗಳು, ನೋಡಿದರೆ ನೋಡುತ್ತಲೇ ಇರಬೇಕು ಎನ್ನಿಸುವ ಶಿಲ್ಪ, ಆನೆ ಒಂಟೆ ಕುದುರೆ ಕೆತ್ತನೆಗಳ ಸಾಲು, ಸ್ವಾಗತಕ್ಕೆ ಗಣೇಶ, ಪೂಜೆಗೆ ಶಿವ, ವಿಷ್ಣು, ಚಾವಣಿಯಲ್ಲಿ ಬ್ರಹ್ಮ. ಜಕಣನ ಕಲ್ಪನೆಯ ಸಾಕಾರ, ಹೊಯ್ಸಳರ ಸಾಮ್ರಾಜ್ಯದ ಮೇರು ಕೊಡುಗೆ, 'ಹೌ ಇಸ್ ದಿಸ್ ಪಾಸಿಬಲ್' ಎಂದು ಉದ್ಗರಿಸುವ ವಿದೇಶಿಗಳು, ಕಡಲೆ ಬೀಜ ತಿಂದು ಸಿಪ್ಪೆ ಒಗೆಯಲು ಪಕ್ಕದಲ್ಲಿ ನೋಡುವ ಸ್ವದೇಶಿಯರು..

ಇದು ಹಳೇಬೀಡು, ಹಾಸನ ಜಿಲ್ಲೆ, ಕರ್ನಾಟಕ

ಹಸಿರು ಪರಿಧಿಯಲ್ಲಿ ಕಂಗೊಳಿಸುವ ಸೌಂದರ್ಯ, ಕೆತ್ತನೆಯಲ್ಲೇ ಜೀವನವನ್ನು ಕಳೆದ ಶಿಲ್ಪಿಗಳ ಬದುಕು ತೋರಿಸುವ ಸೂಕ್ಷ್ಮಗಳು, ಹೊಯ್ಸಳೇಶ್ವರನ ಪಕ್ಕದಲ್ಲಿ ಇನ್ನೂ ಅಪೂರ್ಣವೇ ಇರುವ ನಂದಿ, ಕರ್ನಾಟಕ ಸರ್ಕಾರದ ವಸ್ತು ಸಂಗ್ರಹಾಲಯ, ಹಿಂದೂ ಪುರಾಣಗಳ ಶಿಲಾಚಿತ್ರಗಳು, ದಶಾವತಾರದ ಶಿಲಾಸಾಹಿತ್ಯಗಳು, ವಿಷ್ಣುವರ್ಧನನ ಜೈನಾಶ್ರಾಯಕ್ಕೆ ಸಾಕ್ಷಿಯಾಗಿ ನಿಂತ ಜಿನನ ಪುತ್ಥಳಿ, ಕಲ್ಲಿನ ಕಂಬ-ಬಾಗಿಲುಗಳು, ಥರ್ಮಾಕಾಲ್ ನಲ್ಲಿ ಮಾಡಲೂ ಕಷ್ಟವಾಗುವ ರಚನೆಗಳು, ಹೊರತಾಗಿ ಒಂದೇ ರೀತಿಯ ಎರಡು ಪ್ಪ್ರತಿಮೆಗಳು ಹುಡುಕಿದರೂ ಕಾಣಸಿಗದ ಶಿಲ್ಪಕಲೆಯ ತವರೂರು

ಇದು ಹಳೇಬೀಡು, ಹಾಸನ ಜಿಲ್ಲೆ, ಕರ್ನಾಟಕ

ನೀರವ ರಾತ್ರಿಯಲ್ಲಿ ಮನೆಗಳಲ್ಲೆಲ್ಲಾ ದೀಪ ಆರಿಸಿ ಮಲಗಿಯಾಗಿದೆ. ಆದರೆ ಬೀದಿ ದೀಪಗಳಿಗೆ ನಿದ್ದೆಯಿಲ್ಲ. ಇನ್ನೂ ಯಾರೋ ಬರಬಹುದೆಂಬ ಮನಸ್ಥಿತಿಯಲ್ಲಿ ಉದ್ದಕ್ಕೆ ಎದ್ದು ನಿಂತೇ ಇವೆ. ಕೆಲವು ದೂರದ ಫ್ಯಾಕ್ಟರಿಗಳಲ್ಲಿ ಇನ್ನೂ ಗರ ಗರ ಸದ್ದಿನ ಮಷಿನುಗಳು ರಾತ್ರಿ ಪಾಳಿಗೆ ಕಾದು ಕುಳಿತಿವೆ. ಸುತ್ತಲೂ ಹರಡಿ ಬಿದ್ದಿರುವ ಕೆರೆಯೂ ಸ್ತಬ್ಧ. ಕೆರೆಗೆ ಗೊತ್ತಿಲ್ಲ. ಮೇಲಿರುವ ಮೇಘವೇ ನಾಳೆ ಮಳೆಯಾಗಿ ತನ್ನ ಮೇಲೆ ಬೀಳಬಹುದು. ಮೋಡಗಳಿಗೂ ಗೊತ್ತಿಲ್ಲ. ತಾವು ಇಲ್ಲೇ ನಿರಾಗಬಹುದು. ಆದರೂ ನಾಳೆಯ ನಂಬಿಕೆಯಲ್ಲಿ ಮುಂದಿನ ಪ್ರಯಾಣಕ್ಕಾಗಿ ಬೀದಿ ದಿಪದಲ್ಲೇ ತಯಾರಿ ನಡೆಸಿವೆ.

ಇದು ರಾತ್ರಿ. ಮಡಿವಾಳ ಕೆರೆ ಪರಿಸರ, ಬೆಂಗಳೂರು.

ಪಕ್ಕದಲ್ಲೇ ಜಗದ್ವಿಖ್ಯಾತ ಶಿಲ್ಪಕಲಾ ತೊಟ್ಟಿಲು, ದಿನಂಪ್ರತಿ ಬರುವ ದೇಶ ವಿದೇಶಿಗರು , ಆದರೆ ಇದ್ಯಾವುದರ ಪರಿವೆಯೇ ಇಲ್ಲದೆ ದೈನಿಕದಲ್ಲಿ ತೊಡಗಿದ ಊರ ಜನರು ಈ ನದಿ ದಡದಲ್ಲಿ, ಶಾಲೆಯ ಮುಖ ಕಾಣದ ಚಿಟ್ಟೆ ಹಿಡಿಯುವ ಹುಡುಗರು, ತಂಗಿ ತಮ್ಮನ ಸ್ನಾನ ಮಾಡಿಸುವುದೇ ಆಟ ಮಾಡಿಕೊಂಡಿರುವ ಪುಟಾಣಿ ಹೆಣ್ಣುಮಕ್ಕಳು, ಪದೇ ಪದೇ ನಿರಿಗೆ ಜಿಗಿದು ದಣಿವಾರಿಸುವ ಯತ್ನದಲ್ಲಿ ಯುವಕರು, ತಮ್ಮ ತಮ್ಮ ಗಂಡಂದಿರ ಮಕ್ಕಳ ಬಟ್ಟೆ ತೊಳೆದು ತೊಳೆದು ತೇಯ್ದು ಹೋಗುತ್ತಿರುವ ಹೆಂಗಳೆಯರು..

ಇದು ಹೇಮಾವತಿ ನದೀತಟ, ಬೇಲೂರು

ನದೀ ತೀರದ ಅರ್ಧ ದಾರಿ, ದೂರದಲ್ಲಿ ತೀರದ ಹಂಗೇ ಇರದ ಭೂಭಾಗ , ಅಲ್ಲಿ ಬೆಳೆದ ತೆಂಗಿನಮರ, ಆಗಾಗ ಹಾರಿ ಬರುವ ಬಾನಾಡಿಗಳೇ ಸಂವಹನಾ ಕೊಂಡಿಗಳು.. ಈ ದಾರಿ ಆ ದ್ವೀಪವನ್ನು ಎಂದು ಸೇರುವುದೋ ಅಥವಾ ದ್ವೀಪವೇ ಈ ದಾರಿಯನ್ನು ಸೇರುವುದೋ ತಿಳಿಯದ ಗೊಂದಲ.. ದೂರದಲ್ಲಿ ಆಡುವ ಮಕ್ಕಳು, ರಸ್ತೆಯ ಮೇಲೆ ಬರುವ ಹೊಗೆ ಉಗುಳುವ ವಿಕಾರ ಧ್ವನಿಯ ವಾಹನಗಳು..

ಇದು ಹೇಮಾವತಿ, ಬೇಲೂರು

ಬಾನಿನಲ್ಲಿ ರಂಗು, ಓಕುಳಿ, ಬೆಳಕಿನಿಂದ ಕತ್ತಲೆಯೆಡೆಗೆ ಚಲಿಸಿದರೂ ಆ ಗೋಧೂಳಿ ಮನಮೋಹಕ.. ಹೇಮಾವತಿಗೆ ಅರಿಶಿನ ಕುಂಕುಮಗಳ ಸಂಭ್ರಮ.. ಬಾನಿಗೆ ಚೆಲ್ಲಾಟ.. ಮನೆಯ ಗೋಡೆಯ ಮೇಲೆ ಬಣ್ಣಗಳಿಂದ ಗೀಚಿ , ಅಪ್ಪನ ಭಯದಿಂದ ಓಡಿಹೋದ ಮಗುವಿನಂತೆ, ಕೆಂಪು ಸೂರ್ಯ ಸೀದಾ ಸಾದಾ ಬಿಳಿಯ ಮೋಡಗಳ ಮೇಲೆ ಬಣ್ಣ ಹಾಕಿ ಮೆಲ್ಲಗೆ ನೀರಿನಲ್ಲಿ ಜಾರಿಕೊಂಡ...

ಇದು ಗೋಧೂಳಿ, ಹೇಮಾವತಿ ಬೇಲೂರು

ಅನನ್ಯ ವನರಾಶಿ, ದರ್ಪ ಗಾಂಭೀರ್ಯಗಳ ಕಾಳಿ, ಕಾಳಿಯ ಸೊಕ್ಕು ಮುರಿಯಲು ನಿಂತ ಹೆಬ್ಬಂಡೆಗಳು, ಅವುಗಳಿಗೆ ಸವಾಲು ಹಾಕಿ ಕಾಳಿ ನಿರ್ಮಿಸಿದ ಒಡಕುಗಳು, ಎಲ್ಲವನ್ನೂ ಮೀರಿ ನಿಂತ ಮಾನವ ನಿರ್ಮಿತ ಸೂಪಾ ಡ್ಯಾಮ್ , ಬೆಳಗ್ಗೆ ಎಷ್ಟು ಬೇಗ ಎದ್ದು ಹುಡುಕಿದರೂ ಕಣ್ಣಿಗೆ ಬಿಲದ ಪ್ರಾಣಿಗಳು, ದೂರದಲ್ಲಿ ಜೋಡಿಯಾಗಿ ಕುಳಿತ ಹಾರ್ನ್ ಬಿಲ್ಲುಗಳು, ಜನರ ಸಾಗಾಣಿಕೆಗೆ ಸಿದ್ಧವಾಗಿರುವ ತೆಪ್ಪಗಳು, ಹೆದರಿಕೆ ಹುಟ್ಟಿಸುವ ರಾಫ್ಟ್ಗಳು, ಮಜಾ ಕೊಡುವ ಕಯಾಕಿಂಗ್ ಬೋಟುಗಳು..

ಇದು ದಾಂಡೇಲಿ , ಉತ್ತರಕನ್ನಡ, ಕರ್ನಾಟಕ

ಸಾಲಿನಲ್ಲಿ ನಿಲ್ಲಿಸಿದ ಕಾರುಗಳ ಕಾರುಭಾರು, ಸೈಕಲ್ ಹೋಗಲೂ ಜಾಗ ಬಿಡದಷ್ಟು ಜನ ಸಂದಣಿ, ರಾತ್ರಿ ೯ ಆಗುತ್ತಲೇ ಖಾಲಿ ಹೊಡೆಯುವ ಅಂಗಡಿಗಳು, ಪಕ್ಕದಲ್ಲೇ ಇರುವ ಪೋಲಿಸ್ ಠಾಣೆಯ ಮುಂದಿರುವ ವಾಹನಗಳ ಮೇಲೆ ಸದಾ ತಿರುಗುವ ಕೆಂಪು ದೀಪಗಳು, ಒಂದು ತುದಿಗೆ ಮೇನ್ ರೋಡು, ಇನ್ನೊಂದು ಬದಿಗೆ ದುರ್ಗದ ಬೈಲು, ಬೆಂಗಳೂರಿನ ಎಂ .ಜಿ ರೋಡಿಗೆ ಹೋಲಿಸುವ ಹುಬ್ಬಳಿಯ ರಸ್ತೆ..

ಇದು ಕೊಪ್ಪಿಕರ್ ರೋಡ್, ಹುಬ್ಬಳ್ಳಿ

ವರ್ಣನೆ ಬೇಕಿರದ ಚಿತ್ರ, ಸಂಭ್ರಮ ಸಡಗರದ ನಾಡಹಬ್ಬ, ಬೆಟ್ಟದಲ್ಲಿ ಕಾಯುವ ಚಾಮುಂಡಿ, ರಾಜರು, ದರ್ಬಾರು, ಸಿಂಹಾಸನ, ಆನೆ, ಸಾಂಸ್ಕೃತಿಕ ಸಭೆ, ನೃತ್ಯ, ಸಂಗೀತ, ವೈಭವ , ಜನಸ್ತೋಮ, ಗಜಿಬಿಜಿ, ವಸ್ತು ಪ್ರದರ್ಶನ, ಕಾರಂಜಿ, ಕಹಳೆ, ಸ್ತಬ್ಧಚಿತ್ರ, ನಂದೀಕೊಲು, ತಟ್ಟೆ ಇಡ್ಲಿ, ಮಲ್ಲಿಗೆ, ಸಾಹಿತ್ಯ, ಮೈಸೂರ್ ಮಾಕು, ಇವುಗಳ ಮಧ್ಯೆ ಸಂಜೆ ಏಳಕ್ಕೆ ಜಗಮಗಿಸುವ ನಾಡಹಿರಿಮೆಯ ಲಾಂಛನ...

ಇದು ಅಂಬಾವಿಲಾಸ, ಮೈಸೂರು ಅರಮನೆ, ದಸರಾ

ಹಿಂದೂ, ಮುಸ್ಲಿಂ, ರಜಪುತ್, ಇಂಗ್ಲೆಂಡಿನ ಗೋಥಿಕ್ ಕಲೆಗಳ ಮಿಶ್ರಣದ ವಾಸ್ತುಶಾಸ್ತ್ರ.. ೨೦೧೨ ಕ್ಕೆ ನೂರು ವರ್ಷಗಳ ಸಂಭ್ರಮ, ಒಡೆಯರ ಸಂಸ್ಥಾನದ ಏರಿಳಿತಗಳ ಕಂಡ ಅರಮನೆಗೆ ಈಗ ಕರ್ನಾಟಕ ಸರ್ಕಾರದ ಕಾವಲು, ಮೈದಾನ ವೀಕ್ಷಣೆಗಾಗಿ ನಿರ್ಮಿತ 'ಗೊಂಬೆ ತೊಟ್ಟಿ' , ರಾಜರ ದರ್ಬಾರು ನಡೆಯುವ 'ಅಂಬಾವಿಲಾಸ', ಕೇವಲ ವಿವಾಹ ಮಹೋತ್ಸವಗಳಿಗಾಗಿಯೇ ಮೀಸಲಿಟ್ಟ 'ಕಲ್ಯಾಣ ಮಂಟಪ' , ಎಲ್ಲಾ ಕಡೆ ಸುಂದರ ಚಿತ್ರಗಳು, ಚಿತ್ತಾರಗಳು

ಇದು ಮೈಸೂರು ಅರಮನೆ, ಕರ್ನಾಟಕ

ಗೋದಾವರಿಯ ಉಗಮ, ಶೂರ್ಪನಖಿ ರಾಮನಿಂದ ಮೂಗು ಕೊಯ್ಯಿಸಿಕೊಂಡ ಸ್ಥಳ , ಸೀತಾರಾಮರ ಪಂಚವಟೀ, ಅಜಂತಾ ಎಲ್ಲೋರಾ ಗುಹಾಂತರ ದೇವಾಲಯಗಳು, ಔರಂಗಾಬಾದಿನ ಕೋಟೆ, ಕೈಗೆ ಸಿಗುವ ಹತ್ತಿಯ ಚೀಲಗಳಂತ ಮೋಡಗಳು, ಮೈದಾನದಂತ ಪ್ರದೇಶದಲ್ಲಿ ಸಾಲಾಗಿ ಕುಳಿತ ಬೆಟ್ಟಗಳು, ಚಾರಣಯೋಗ್ಯ ಘಟ್ಟಗಳು, ತಿರುವು ಮುರುವು ಹಾವಿನಂತ ಕಪ್ಪು ರಸ್ತೆಗಳು

ಇದು ಮಾಲ್ಸ್ಹೆಜ್ ಘಾಟ್ , ನಾಸಿಕ್ , ಮಹಾರಾಷ್ಟ್ರ

ಕಣ್ಣು ಹಾಯಿಸಿದವರೆಗೂ ಕಾಣುವ ಅರಣ್ಯ, ಅಲ್ಲೊಂದು ಇಲ್ಲೊಂದು ಓಡಾಡುವ ಜೀಪುಗಳು, ಜನರ ಮುಖವೇ ಸಿಗದಂತ ಒಂಟಿ ಪ್ರದೇಶ, ರಾತ್ರಿ ವಸತಿಗೊಂದು ಬಿದಿರ ಗೂಡು, ಕೈ ಅದ್ದಿದರೆ ಮರಗಟ್ಟಿ ಹೋಗುವಂತ ತಂಪಿನ ನೀರು, ಕ್ಯಾಂಪ್ ಫೈರ್ ಜೊತೆ ತಿಂದ ಈರುಳ್ಳಿ ಬೋಂಡಾ, ಆಕ್ಟಿಂಗ್ ಮಾಡಿ ಸಿನೆಮಾ ಹೆಸರು ಹುಡುಕಿದ ಬಗೆ, ತಲೆ ತಿನ್ನುವ ಪ್ರಶ್ನೆಗಳು, ಎಂದೂ ವರ್ಕ್ ಆಗದ ಪ್ಲಾನುಗಳು, ಕಳ್ಳ ಪೊಲೀಸ ಆಟ..

ಇದು ನಾಗ ಝರಿ ಕಣಿವೆ, ದಾಂಡೇಲಿ ಅರಣ್ಯ, ಉತ್ತರ ಕನ್ನಡ

ಬಣ್ಣಗಳು, ಮೋಹಕತೆ, ಮಾದಕತೆ, ರೋಮಾಂಚನ, ಆತ್ಮೀಯತೆ, ಭಾವುಕತೆ, ಸೌಹಾರ್ದತೆ, ಎಲ್ಲಾ ಭಾವಗಳು ಮೇಳೈಸಿದ ಅನುಭೂತಿ, ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಹೆಮ್ಮೆ,

ಇದು ಮೈಸೂರು ಅರಮನೆ, ಕರ್ನಾಟಕ

ಒಳಗೆ ಹೋಗಲು ಭಯ, ನಿಶ್ಶಬ್ದ, ಚಪ್ಪಲಿ ಹಾಕಿಕೊಂಡು ಹೋಗುವುದೋ ಬಿಡುವುದೋ ಎಂಬ ಸಂದಿಗ್ಧತೆ, ಉದ್ದಉದ್ದದ ಹಾಲ್ ಗಳು, ತೂಗು ಹಾಕಿದ ಕ್ರಿಸ್ತ ಪಟಗಳು, ಅಲ್ಲಲ್ಲಿ ಹಚ್ಚಿಟ್ಟ ಮೊಂಬತ್ತಿಗಳು, ಬೆಂಚಿನ ಮೇಲೆ ಕುಳಿದು ತದೇಕ ದೃಷ್ಟಿಯಿಂದ ಏನನ್ನೋ ನೋಡುತ್ತಿರುವ ಆರ್ದ್ರ ಮುಖಗಳು, ನೆಲೆಮಾಲಿಗೆಯಲ್ಲಿ ದೀನನಾಗಿ ಪ್ರಾರ್ಥಿಸುತ್ತಿರುವ ವಯೋವೃದ್ಧ, ಸುಂದರ ಕ್ಯಾಥೊಲಿಕ್ ಕೆತ್ತನೆಗಳು...

ಇದು ಫಿಲೋಮಿನಾ ಚರ್ಚ್ , ಮೈಸೂರು, ಕರ್ನಾಟಕ

ಕಾಳಿಯಂತ ಕಾಳಿಗೇ ಡ್ಯಾಮು ಕಟ್ಟಿದ ಮನುಷ್ಯರನ್ನು ಕಂಡ ಕಾಳಿ ತೆಪ್ಪಗಾಗಿದ್ದು ಇಲ್ಲಿ, ಶಾಂತ ಕಪ್ಪು ನೀರು ಇಲ್ಲಿಯ ಅರಣ್ಯ ವಾಸಿಗಳ ಜೀವನಾಧಾರ, ಸರಕಾರದ ಆಣತಿಯ ಮೇರೆಗೆ ಕಾಡಿನಂಚಿನಲ್ಲಿದ್ದ ಹಲವು ಬುಡಕಟ್ಟುಗಳನ್ನು ಸಿಟಿಗೆ ಸಾಗಿಸಲಾಗಿದೆ, ಸಾಗಿಸಲಾಗುತ್ತಿದೆ. ಅವರಿಗೋಸ್ಕರ ಮಾತ್ರವೇ ಬೆಳೆ ಬೆಳೆಯುತ್ತಿದ್ದ ಅವರು ನಗರದ ವ್ಯಾವಹಾರಿಕ ಬದುಕಿಗೆ ಹೊಂದಿಕೊಳ್ಳಲು ಹೆಣಗುತ್ತಿದ್ದಾರೆ. ದ್ಯೋಗವನ್ನರಸಿ ಮೂಲದಿಂದ ಹೊರ ನಡೆಯುತ್ತಿದ್ದಾರೆ. ಜೊತೆಗೆ ಅವರ ಸಂಸ್ಕೃತಿಯೂ ನಾಶದಂಚಿನಲ್ಲಿದೆ..

ಇದು ದಾಂಡೇಲಿ ಅರಣ್ಯ ಪ್ರದೇಶ , ಉತ್ತರಕನ್ನಡ

ಎಲ್ಲರಿಗೂ ಆತುರ, ಯಾರೂ ಕಾಯಲು ಸಿದ್ಧವಿಲ್ಲ .. ಒಬ್ಬರಿಗೆ ಮನೆಗೆ ಬೇಗ ಹೋಗುವ ಚಿಂತೆಯಾದರೆ ಇನ್ನು ಕೆಲವರಿಗೆ ರಾತ್ರಿ ಪಾಳಿಯ ಆಫೀಸು ಮುಟ್ಟುವ ಕಾತುರ. ಆಟೋದವರಿಗೆ ಗಿರಾಕಿಗಳ ಚಿಂತೆ, ಟ್ರಾಫಿಕ್ ಪೋಲಿಸ್ರಿಗೆ ಯಾರನ್ನಾದರೂ ಹಿಡಿದು ಕೈಲಾದಷ್ಟು ವಸೂಲಿ ಮಾಡುವ ಚಿಂತೆ, ರೊಯ್ಯ ರೊಯ್ಯನೆ ಅತ್ತಿಂದಿತ್ತ ಓಡಾಡುವ ವಾಹನಗಳ ಕಂಡು ರಸ್ತೆ ಗಾಬರಿ ಬಿದ್ದಿದೆ.. ಫ್ಲೈ ಓವರ್ ಗಳಿರಲಿ, ಅಂಡರ್ ಪಾಸುಗಳಿರಲಿ, ರಸ್ತೆ ಮಾಡಿದಷ್ಟೂ ನಮ್ಮಲ್ಲಿ ತುಂಬಲು ವಾಹನಗಳಿವೆ..

ಇದು ಸರ್ಜಾಪುರ ಜಂಕ್ಷನ್, ಹೊರ ವರ್ತುಲ ರಸ್ತೆ, ಬೆಂಗಳೂರು

ಸರ್ ಪೇಪರ್ನವರಾ?' 'ಅಲ್ಲ' 'ಮತ್ಯಾಕೆ ಫೋಟೋ ತೆಗೀತಿದ್ದೀರಾ?' ' ಸುಮ್ನೆ..' ' ಸುಮ್ನೆ ಅಂದರೆ?' ' ಇದೊಂಥರಾ ಹವ್ಯಾಸ' ' ಏನ್ ಮಾಡ್ತೀರ ಫೋಟೋನಾ?' ' ಏನೂ ಮಾಡೋದಿಲ್ಲಾ.. ಸುಮ್ನೆ ಇಂಟರ್ ನೆಟ್ ನಲ್ಲಿ ಹಾಕ್ತೀನಿ' ' ನನ್ದೊಂದ್ ತಗೀರಿ ಸರ್' 'ಸರಿ' 'ಎಲ್ಲಿ ತೋರ್ಸಿ' 'ನೋಡಿ ಸರ್ ನಿಮ್ ಫೋಟೋ' ' ಚೆನ್ನಾಗಿದೆ.. ಇದನ್ ಪ್ರಿಂಟ್ ಹಾಕಿ ಕಳಿಸ್ತೀರಾ ಸರ್?' '??!!'

ಇದು ಸರ್ಜಾಪುರ ಫ್ಲೈ ಓವರ್,ಬೆಂಗಳೂರು

ಏಕಶಿಲಾ ಬೆಟ್ಟದ ಒಂದು ಬದಿಗೆ ಕೊರಕಲು, ಅಲ್ಲಿ ಹರಿಯುವ ಕಾಳಿ, ಮಳೆ ನೀರಿನ ಕೊಯ್ಲು ಎಂಬ ವಿಜ್ಞಾನದ ಹೆಸರನ್ನು ಪ್ರಕೃತಿ ತನಗೆ ಬೇಕಾದ ಹಾಗೆ ನಿರ್ಮಿಸಿಕೊಂಡ ಪ್ರದೇಶ,ವಿವಿಧ ರೀತಿಯ ಕಲ್ಲುಗಳ ವರ್ಣನೆಯ ಫಲಕಗಳು.. ಇಲ್ಲಿ ಸತ್ತವರ ಸಂಖ್ಯೆ ಹನ್ನೆರಡು.. ನಿದ್ರೆಗೆ ಅತ್ಯ್ತುತ್ತಮ ಹೊರಾಂಗಣ

ಇದು ಸಿಂಥೇರಿ ರಾಕ್ಸ್, ಉತ್ತರ ಕನ್ನಡ

ಚಪ್ಪಲಿಯನ್ನು ಹೊರಗೆ ನಿಟ್ಟು ಪ್ರಾಂಗಣಕ್ಕೆ ಕಾಲಿಡುತ್ತಿದ್ದಂತೆಯೇ ಕೈಮುಗಿದು ನಿಂತ ಗರುಡ, ದ್ವಾರದಲ್ಲಿ ಹೊಯ್ಸಳ ಸಂಕೇತಗಳು,ಛಾವಣಿಗೆ ಅಂಟಿಕೊಂಡ ಶಾಂತಲೆಯ ಬಿಂಬ ಮೂಡಿಸುವ ದರ್ಪಣ ಸುಂದರಿ, ಸಾಲಾಗಿ ನೇತಾಡುವ ಹಲವಾರು ಶಿಲಾಬಾಲಿಕೆಯರು, ಸಣ್ಣ ಸಣ್ಣ ಕಿಟಕಿಗಳಿಂದ ಒಳನುಗ್ಗುವ ಸೂರ್ಯಕಿರಣ, ಕತ್ತಲೆಯಲ್ಲೂ ಹೊಳೆಯುವ ಚನ್ನಕೇಶವ, ಕಂಬಕ್ಕೊರಗಿ ನಿಂತ ಪರಿಮಾಣ ಸುಂದರಿ, ತಾಂತ್ರಿಕತೆಯ ಸಾರುವ ಕಂಬಗಳು, ವಿಷ್ಣುವರ್ಧನನ ಕಲಾಪ್ರೇಮ, ಹೊರಾಂಗಣದಲ್ಲಿ ಹಳ್ಳಿ ತಂತಿವಾದ್ಯಗಳಿಂದ ಹೊರಹೊಮ್ಮುವ ಸುಂದರ ಹಾಡು - 'ಮಳೆ ನಿಂತು ಹೋದ ಮೇಲೆ..'

ಇದು ಬೇಲೂರು, ಹಾಸನ ಜಿಲ್ಲೆ, ಕರ್ನಾಟಕ

ಪಾಯ ತೊಡದೆಯೇ ದೇವಲೋಕದಿಂದ ಹಾಗೇ ತಂದಿಟ್ಟಂತೆ ಕಟ್ಟಿದ ದೇಗುಲ, ಕಟ್ಟು ಕಥೆಯೋ ಅಥವಾ ನೈಜತೆಯೋ ಗೊತ್ತಾಗದಂತೆ ಕಿವಿಗೆ ಬೀಳುವ ಹಾಗಂತೆ ಹೀಗಂತೆಗಳು, ಬೆತ್ತಲೆ ನಿಂತ ಶಿಲಾಬಾಲಿಕೆಯರ ಕಂಡು ನಾಚುವ ಶಾಲಾ ಪ್ರವಾಸಕ್ಕೆ ಬಂದ ಪುಟಾಣಿಗಳು, ಹೊಯ್ಸಳರ ಪ್ರತಿನಿಧಿಯಂತೆ ಮಾತಾಡುವ ಗೈಡುಗಳು, ಗಡ್ಡ ಬಿಟ್ಟು ಸುತ್ತುವ ಬೈರಾಗಿಗಳು, ಚಪ್ಪಲಿ ಕಾಯುವ ಕಾಯಕದಲ್ಲೇ ಜೀವನ ಸಾಗಿಸುವ ಕುಟುಂಬಗಳು, ತಮ್ಮ ನೋಟವನ್ನು ಕೇವಲ ಕ್ಯಾಮರಾ ವ್ಯೂ ಗೆ ಸೀಮಿತಗೊಳಿಸಿದ ಫೋಟೋಗ್ರಾಫರ್ಗಳು...

ಇದು ಬೇಲೂರು, ಹಾಸನ ಜಿಲ್ಲೆ, ಕರ್ನಾಟಕ

ರಾತ್ರಿ ೯ ಗಂಟೆಗೂ ವ್ಯಾಪಾರ ನಡೆಸುತ್ತಲೇ ಇರುವ ಗಂಡುಭೂಮಿಯ ಅಂಗಡಿಗಳು, ಫೋಟೋ ತೆಗೆಯಲು ಬಂದವರನ್ನು ಕುತೂಹಲ ಭರಿತ ಹೆದರಿಕೆಯಿಂದ ನೋಡುವ ರಸ್ತೆ ಬದಿಯ ಹೂ ಮಾರುವವರು, ಗಿಜಿಗುಟ್ಟುವ ಕೊಪ್ಪಿಕರ ರಸ್ತೆಯಲ್ಲಿ ಅಲ್ಲಲ್ಲಿ ಚದುರಿಬಿದ್ದ ಕನಸಿನ ತುಣುಕುಗಳು, ಬಣ್ಣ ಬಣ್ಣದ ಬೆಳಕು ಬೀರುವ ಆಟಿಕೆಗಳು, ನಾಳೆಯ ಗುರಿ ಕಾಣದ ತಳ್ಳು ಗಾಡಿಯ ಚಕ್ರಗಳು, ಇವುಗಳನ್ನು ದಿನವೂ ಒಂದೇ ರೀತಿ ನೋಡುವ ಕುದುರೆಯ ಮೇಲೆ ಖಡ್ಗ ಹಿಡಿದ ಚೆನ್ನಮ್ಮ...

ಇದು ರಾಣಿ ಚೆನ್ನಮ್ಮ ಸರ್ಕಲ್ , ಹಬ್ಬಳ್ಳಿ, ಕರ್ನಾಟಕ

ಹದಿನೈದು ರೂಪಾಯಿಗೆ ಸಿಗುವ ಮಸಾಲೆ ದೋಸೆ, ಪಾವ್ ಬಾಜಿ, ಅದರ ಇನ್ನೊಂದು ಪಕ್ಕದಲ್ಲಿ ಚಪ್ಪಲಿ ಅಂಗಡಿ,ಬಣ್ಣದ ಪರ್ಸು , ಓದುವ ಪೀಪಿಯ ಮಾರಾಟಗಾರರು, ಸೈಕಲ್ ಮೇಲೆ ಮೂಟೆ ಹೇರಿಕೊಂಡು ಬರುವ ಚಾದರದವರು, ಎಂದೂ ಮುಂದೆ ಹೋಗದ ಅಂಗಡಿಗಳಿಗೂ ಚಕ್ರಗಳು, ವಯಸ್ಸಾದ ರಾಜಸ್ಥಾನಿಗಳು ನಡೆಸುವ ಚಾಟ್ ಸೆಂಟರ್ಗಳು, ಮಾರಾಟದ ವಸ್ತುಗಳನ್ನೇ ತನ್ನ ಮಾಲೆಯಾಗಿ ಧರಿಸಿದ ಪೇಟೆಯ ದೃಶ್ಯ, ಸಂತೆಯಂತೆ ಕಾಣುವ ಪ್ರತಿದಿನದ ಸಂಜೆ..

ಇದು ದುರ್ಗದ ಬೈಲು, ಹುಬ್ಬಳ್ಳಿ, ಕರ್ನಾಟಕ

ಸಂಜೆಯಾಗುತ್ತಲೇ ಗಿಜಿಗುಟ್ಟುವ ಫ್ಲೋರುಗಳು, ಹೆಚ್ಚಿನವರು ಟೈಮ್ ಪಾಸುಗಳು, ಕೆಲವರು ಆಹಾರಾರ್ಥಿಗಳು, ಮತ್ತೆ ಕೆಲವು ಗ್ರಾಹಕರು,ಇನ್ನುಳಿದವರು ದಾರಿ ತಪ್ಪಿ ಬಂದವರು !!, ಹೊರಕಟ್ಟೆಗಳಲ್ಲಿ ಕುಳಿತು ಗಹನ ವಿಚಾರಕ್ಕೆ ತೊಡಗಿದ ಜೋಡಿಗಳು, ಮ್ಯಾಕ್ ಡೊನಾಲ್ಡ್ ನಲ್ಲಿ ತಿಂದ ಹೊಟ್ಟೆಯ ಪರಿ ಮತ್ತು ಲ್ಯಾಂಡ್ ಮಾರ್ಕಿನ ಮೂಲೆಗಳಲ್ಲಿ ಕೂತು ಓದುತ್ತಿರುವ ತಲೆ, ಇದನ್ನು ನೋಡಿ ನಗುತ್ತಲಿರುವ ಸಿನಿಮಾ ಪೋಸ್ಟರುಗಳಲ್ಲಿನ ಬಣ್ಣದ ಮುಖಗಳು, ಬ್ಲಾಕ್ ಅಂಡ್ ವೈಟ್ ಬದುಕಿನ ಕಲರ್ಫುಲ್ ಚಿತ್ರಗಳು..

ಇದು ಫೋರಂ ಮಾಲ್ , ಬೆಂಗಳೂರು

ಹತ್ತುವವರು ಹಲವರು, ಇಳಿಯುವವರು ಹಲವರು, ಇಬ್ಬರನ್ನೂ ನೋಡುತ್ತಿರುವವರು - ಮೇಲೆ ನಿಂತವರು ಮತ್ತು ಕೆಳಗೆ ನಿಂತವರು .... ಸಂಬಂಧವೇ ಇಲ್ಲದಂತೆ ನಗುವ ಹೆಣ್ಣುಮಕ್ಕಳು, ಅವರ ಹಿಂದೆ ಕುರಿಗಳಂತೆ ಕಾಣುವ ಗಂಡು ಮಕ್ಕಳು, ಪಿ.ವಿ.ಆರ್. ನ ಸೀಟಿನಡಿಯಲ್ಲಿ ಬಿದ್ದ ಅನಾಥ ಪಾಪ್ ಕಾರ್ನ್ ಕವರ್ರುಗಳು, ಸಾಮ್ಸಂಗ್ ಗೆಲಾಕ್ಸಿಯ ತಿರುಗಾ ಮುರುಗಾ ಮಾಡಿ ನೋಡುತ್ತಿರುವ ಟೆಕ್ಕಿಗಳು.. ಸಂಜೆಯ ಲೈಮ್ ಲೈಟಿನಲ್ಲಿ ಆಗ ತಾನೇ ಮೂಡಿದ ಅರ್ಥವಾಗದ ನವ್ಯ ಕವಿತೆ..

ಇದು ಫೋರಂ ಮಾಲ್ , ಬೆಂಗಳೂರು

ಒಂದು ಪೆನ್ನಿಗೆ ಒಂದೂವರೆ ಸಾವಿರವಂತೆ, ಟೀ ಶರ್ಟಿನ ಮೇಲೆ ಬರೆದ ಬರಹ ಡಬ್ಬಲ್ ಮೀನಿಂಗಂತೆ, ಇಲ್ಲಿ ವಾಚ್ ರಿಪೇರಿ ಮಾಡಲ್ವಂತೆ, ಅವನು ಆಗಲೇ ಹತ್ತು ಬಾರಿ ಸಾರಿ ಹೇಳಿದ್ದಾನಂತೆ, ಮ್ಯಾಕ್ ವೆಜ್ಜಿಗೆ ಫ್ರೆಂಚ್ ಪ್ರೈಸ್ ಫ್ರೀ ಅಂತೆ, ಗುಜಾರೀಶ್ ಸಿನೆಮಾ ಸರಿ ಇಲ್ವಂತೆ, ಹೊರಗಡೆ ಇದು ಇಪ್ಪತ್ತು ರೂಪಾಯಿಗೆ ಸಿಗುತ್ತಂತೆ, ಹೆಲ್ಮೆಟ್ ಗೆ ಬೀಗ ಹಾಕೋದು ಮರ್ತೊಯ್ತಂತೆ, ನಾಳೆ ರಜೆಯಂತೆ, ಇವನು ಪೇಪರ್ ಹಾಕಿದನಂತೆ.. ಅಹುದೇ?

ಇದು ಫೋರಂ ಮಾಲ್, ಬೆಂಗಳೂರು.

Saturday, December 11, 2010

ಮಹಾಪ್ರಯಾಣ- ಮೈಸೂರ್ ಬಸ್ಸಿನಲ್ಲಿ ಕ್ಯಾಚ್ ಕ್ಯಾಚ್..

http://enoondu.blogspot.com/

ಐದೂವರೆಗೆಲ್ಲಾ ಮೆಜೆಸ್ಟಿಕ್ ನಲ್ಲಿ ಇರ್ತೇನೆ ಎಂದು ಫೋನು ಮಾಡಿದವರಿಗೆಲ್ಲಾ ಭರವಸೆ ಕೊಟ್ಟು, ನಾಲ್ಕೂವರೆಗೆ ಆಫೀಸು ಬಿಡುವಾಗಲೇ ಗೊತ್ತಾಗಿತ್ತು - ಐದೂ ವರೆಗೆ ಸಾಧ್ಯವೇ ಇಲ್ಲ ಎಂದು. ಶುಕ್ರವಾರ, ಸಂಜೆ ಹೊತ್ತು , ದಸರಾ ಬೇರೆ.. ವಿನ್ನಿಗೆ ಫೋನಾಯಿಸಿದೆ.

"ಲೇ ಮೈಸೂರಿಗೆ ಬಸ್ ಸಿಗದೇ ಇದ್ರೆ ಏನೋ ಮಾಡೋದು?" ಅಂದೆ.

ಬಯ್ದ- "ರಿಸರ್ವೇಶನ್ ಮಾಡಬೇಕಿತ್ತು.. ನಾ ಮೊದ್ಲೇ ಹೇಳ್ದೆ.. ಈಗ ಹೊರಟ ಮೇಲೆ ಆಗೋಯ್ತು.. ನಡ್ಕೊಂಡಾದ್ರೂ ಮೈಸೂರಿಗೆ ಹೋಗೋದೆ" ಅಂದ.

"ಎಲ್ಲಿದ್ದೀಯಾ" ಕೇಳಿದೆ.. ಅವನು ನಾಲ್ಕೂ- ನಾಲ್ಕೂ ವರೆಗೆಲ್ಲಾ ಹೊರಡೋ ಪ್ಲಾನ್ ಮಾಡಿದ್ದ. ನಾನೇ ಕೆಲಸ ಅದೂ ಇದೂ ಎಂದು ಐದೂವರೆಗೆ ಮುಂದೂಡಿದ್ದೆ.

"ಮತ್ತೀಕೆರೆಲ್ಲಿ" ಅಂದ..

"ಥೂ ನಿನ್ನ.. ನಾನೇ ಲೇಟು ಅಂದ್ರೆ ನೀ ಇನ್ನೂ ಮತ್ತೀಕೆರೆಲ್ಲಿ ಇದ್ದೀಯಾ .. ಕೆರೆಲ್ಲಿ ಬಿದ್ ಸಾಯಿ " ಎಂದು ಫೋನಿಟ್ಟೆ.

ಫೋರಂ ವರೆಗೆ ಆಫೀಸು ಬಸ್ಸಲ್ಲೇ ಬಂದು ಅಲ್ಲಿಂದ ಬಿ.ಎಂ.ಟಿ.ಸಿ ವೋಲ್ವೋ ಹತ್ತಿ ಮೆಜೆಸ್ಟಿಕ್ ತಲುಪೋ ಹೊತ್ತಿಗೆ ಆರುಗಂಟೆ. ಸ್ವಲ್ಪ ಕತ್ತಲಾಗಿತ್ತು. ಮೆಜೆಸ್ಟಿಕ್ಕಿನ ನಿಲ್ದಾಣದ ಮೇಲೆ ಹಾರುತ್ತಿದ್ದ ದಸರಾ ಜಾಹೀರಾತಿನ ಬಲೂನನ್ನು ನೋಡಿ ಫೋಟೊ ತೆಗೆಯಲು ಇಲ್ಲಿಂದಲೇ ಶುರು ಮಾಡೋಣ ಅನಿಸಿದರೂ ಜನ ಜಾಸ್ತಿ ಅಂತ ಬಿಟ್ಟೆ.

ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡಿನ ಮೈಸೂರು-ಬೆಂಗಳೂರು ರಿಸರ್ವೇಶನ್ ಕೌಂಟರ್ ಮುಂದಿನ ಕ್ಯೂದಲ್ಲಿ ವಿನ್ನಿ ನಿಂತಿದ್ದ. ಸಚಿನ್ ಅವನ ಪಕ್ಕ ನಿಂತು ಎನೋ ಮಾತಾಡುತ್ತಿದ್ದ.

"ಮೈಸೂರಿಗೆಲ್ಲಾ ರಿಸರ್ವೇಶನ್ ಬೇಕಾಗಲ್ಲ.. ಈಗದು ಹೆಚ್ಚು ಕಡಿಮೆ ಬೆಂಗಳೂರಿಗೇ ಸೇರಿ ಹೋಗಿದೆ" ಎಂದು ಅವರಿಬ್ಬರನ್ನೂ ಕ್ಯೂನಿಂದ ಎಳೆದು, ಮುಂದೆ ನಿಂತಿದ್ದ ಹಸಿರು ಬಣ್ಣದ ಶೀತಲ್ ಬಸ್ಸಿನಲ್ಲಿ ಕೊನೆಯ ಸೀಟಿನ ಮುಂದಿನ ಮೂವರ ಸೀಟಿನಲ್ಲಿ ತಳವೂರುವ ಹೊತ್ತಿಗೆ ಅರೂವರೆ. ಇದು ಆರಂಭ. ಏನು ಎತ್ತ ಎಲ್ಲಿ ಯಾವಾಗ ಎಂದು ಏನನ್ನೂ ಯೋಚಿಸದೆ ಮೂವರೂ ಮೈಸೂರಿಗೆ ಅದರಲ್ಲೂ ದಸರಾಗೆ ಹೊರಟದ್ದು ಅಲ್ಲಿಗೆ ನಿಜವಾಯಿತು.. ಹಿಂದಿನ ವಾರವಷ್ಟೇ ಬೇಲೂರು ಹಳೆಬೀಡನ್ನು ಒಂಟಿಯಾಗಿ ( ಒಂಟಿ ಸಲಗದಂತೆ ) ಸಂದರ್ಶಿಸಿ ಬಂದಿದ್ದ ನಾನು ಹೋಗುವುದು ಬೇಡ ಎಂದೇ ಅಂದುಕೊಂಡಿದ್ದೆ. ಮೊದಲು ವಿನ್ನಿ ಸಹ ’ಹೂಂ’ ಅಂದಿರಲಿಲ್ಲ. ಸಚಿನ್ ಮಾತ್ರ ’ಹೋಗೋಣ ಬನ್ರೋ.. ಹೋಗೋಣ ಬನ್ರೋ..’ ಅಂತಲೇ ಇದ್ದ.ಯಾವುದೋ ಮುಹೂರ್ತದಲ್ಲಿ ’ಹೂಂ’ ಅಂದದ್ದೇ ಈ ಹೊತ್ತಿನ ಈ ಮಹಾಪ್ರಯಾಣಕ್ಕೆ ಕಾರಣವಾಗಿತ್ತು.

***
ಹಿಂದಿನ ಸೀಟಿನಲ್ಲಿ ಯಾರೋ ಲೇಯ್ಸ್ ತಿನ್ನುತ್ತಿದ್ದರು ಎನ್ನುವುದು ಇಡೀ ಬಸ್ಸಿಗೆ ಗೊತ್ತಾಗುತ್ತಿದ್ದುದು ಅದರ ವಾಸನೆ (ಪರಿಮಳ?)ಯಿಂದ. "ಲೇಸಾಗಿ ಕಾಯುವ ನಮ್ಮಾದಿಕೇಶವರಾಯ" ಎಂದು ಪನ್ (pun) ಮಾಡಿದೆ. ನನ್ನ ಮತ್ತು ವಿನ್ನಿಯ ಮಧ್ಯೆ ಕೊತ ಸಚಿನ್ನನನ್ನು ಯಾವುದೋ ಸಬೂಬು ನೀಡಿ ದಾರಿ ಬದಿಯ ಸೀಟಿಗೆ ವರ್ಗಾಯಿಸಲಾಯಿತು. ಯಾವುದೋ ಹಳೇ ಚಡ್ಡಿ ದೋಸ್ತರುಗಳು ಸಿಕ್ಕಾಗ ಮಾತಾಡುವಂತೆ ನಾನು ವಿನ್ನಿ ಮಾತಾಡುತ್ತಾ ಕೂತದ್ದು ಸಚಿನ್ನನ ಗಮನಕ್ಕೆ ಬರದಿದ್ದರೂ, ಅವನ ಗುಣ ಗೊತ್ತಿದ್ದ ನಮ್ಗೆ ಆಶ್ಛರ್ಯವೆನಿಸಲಿಲ್ಲ. ಅವನು ತನ್ನಷ್ಟಕ್ಕೆ ತಾನು ಫೋನು ತೆಗೆದು "ವಿ ಜಸ್ಟ್ ಲೆಫ್ಟ್.. ಹೆವೀ ಟ್ರಾಫಿಕ್ ಹಿಯರ್.." ಅಂತ ಮೈಸೂರಿಗೆ ಇಂಗ್ಲಿಷ್ ಒಯ್ಯುವ ದೂತನಂತೆ ಮಾತಾಡುತ್ತಿದ್ದ. ಫೋನಿಟ್ಟ ಮೇಲೆ ವಿನ್ನಿ ಕೇಳಿದ ’ಈ ಮೇಲ್ ಕಳಿಸಬಹುದಿತ್ತು’ .. ಅದಕೆ ಸಚಿನ್ ’ಕಳುಹಿಸಿಯೇ ಬಂದಿದ್ದೇನೆ’ ಅಂದ. ನಾವು ಸುಮ್ಮನೆ ಮುಖ ಮುಖ ನೋಡಿಕೊಂಡೆವು.ಸಚಿನ್ನನೇ ಟಿಕೆಟ್ ತೆಗೆಸಿದ.. ಬರುವಾಗ ತನ್ನದು ಎಂದು ವಿನ್ನಿ ಆಗಲೇ ಡಿಕ್ಲೇರ್ ಮಾಡಿದ. ಮಧ್ಯಾಹ್ನದಿಂದ ಏನೂ ತಿನ್ನದ ನನಗೆ ಹಸಿವಾಗತೊಡಗಿತ್ತು. ಅದೇ ಯೋಚನೆಯಲ್ಲಿ ಕಿಟಕಿಯ ಹೊರಗೆ ಇಣುಕಿದೆ.

ಜಯಂತ ಕಾಯ್ಕಿಣಿ, ಯೋಗರಾಜ ಭಟ್ಟ, ಜಾಕಿ ಜಾಕಿ.. ಇತ್ಯಾದಿಗಳ ಬಗ್ಗೆ ಮಾತಾಡುತ್ತಿರುವಾಗಲೇ ಬಸ್ಸು ಚಾಮರಾಜ ಪೇಟೆ ಮಾರ್ಗವಾಗಿ ಮೈಸೂರು ರೋಡಿಗೆ ಚಕ್ರಾರ್ಪಣೆ ಮಾಡಿತ್ತು. ಸಚಿನ್ ಮಾತ್ರ ತನ್ನ ಕಿವಿಗೆ ear phone ಸಿಕ್ಕಿಸಿಕೊಂಡು ಹಾಡು ಕೇಳತೊಡಗಿದ್ದ. ಆರ್ಯ-2 ಚಿತ್ರದ ಯಾವುದೋ ಹಾಡಿದ್ದರೆ ಬ್ಲೂಟೂತಿನಲ್ಲಿ ಟ್ರಾನ್ಸ್ ಫರ್ ಮಾಡ್ರೋ ಅಂದ.. ನಾವಿಬ್ಬರೂ ಇಲ್ಲ ಅಂದೆವು. ಮತ್ತೆ ear-phoneನಲ್ಲಿ ತಲ್ಲೀನನಾದ. ಹಿಂದಿನವಾರದ ಶ್ರವಣಬೆಳಗೊಳ, ಬೇಲೂರು, ಹಳೆಬೀಡೀನ ಕಥಾನಕದ ವರ್ಣನೆಯ ಸಂದರ್ಭದಲ್ಲಿ ಒಂದು ಬೋರ್ಡು ಕಂಡೆ. ಈ ಮಹಾನಗರ ಪಾಲಿಕೆಯವರು ಚಿತ್ರ ಬಿಡಿಸಿಟ್ಟಿದ್ದಾರಲ್ಲ.. ಅದರಲ್ಲಿ.. ಬೇಲೂರು ಶಿಲ್ಪದ ಚಿತ್ರದ ಮೇಲೆ ದೊಡ್ಡದಾಗಿ ’ಬೇಲೂರು ಶಿಲಾಬಾಲಕಿ’ ಎಂದು ಬರೆದಿತ್ತು. .. ವಿನ್ನಿ ಶಾಲಾಬಾಲಕಿ ಎಂದು ಬರೆದಿಲ್ಲವಲ್ಲ ಎಂದು ಪನ್ ಮಾಡಿದ. ಸಚಿನ್ನನೂ ನಕ್ಕ. ಬಾಲಕಿಗೂ ಬಾಲಿಕೆಗೂ ಜಾಸ್ತಿ ವ್ಯತ್ಯಾಸವಿರದಿದ್ದರೂ ಬೋರ್ಡಿನ ತಲೆಬರಹ ವಿಚಿತ್ರವಾಗಿ ಕಂಡಿತ್ತು. ಇದೇ ತರಹ ಕಿಸಿಪಿಸಿ ಮಾಡುತ್ತಿರುವಾಗಲೇ ನನಗೊಂದು ವಿಚಿತ್ರ ಪ್ರಶ್ನೆ ಹೊಳೆದಿತ್ತು.

"ಏಲ್ಲಾ ಕಡೆ ’ಶ್ರೀ ದುರ್ಗಾಪರಮೇಶ್ವರಿ’ , ’ಶ್ರೀ ಚಾಮುಂಡೇಶ್ವರಿ’ ಅಂತೆಲ್ಲಾ ಬರೆದಿರ್ತಾರಲ್ಲ.. ಅದು ’ಶ್ರೀಮತಿ ದುರ್ಗಾಪರಮೇಶ್ವರಿ’ ಯಾಕಲ್ಲ?!" ಎಂದು ಕೇಳಿದೆ.

ವಿನ್ನಿ ದಿಗ್ಭ್ರಮೆಯಾದಂತೆ ಮುಖ ಮಾಡಿದ. ಆಮೇಲೆ ’ಥೂ.. ’ ಎಂದು ಉಗಿದ.. ’ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ’ ಎಂದು ತಪ್ಪಿಸಿಕೊಂಡ. ಸಚಿನ್ ಮಂದಹಾಸ ಬೀರುತ್ತಿದ್ದ.

ಇದಾದ ಮೇಲೆ ನಾನೇ ಬರೆದ ಒಂದು ಹಾಡೀನ ತರಹದ ರಚನೆಯೊಂದನ್ನು ಓದಿ ಕೇಳಿಸಿದೆ. ವಿನ್ನಿ ಚೆನ್ನಾಗಿದೆ ಅಂದ. ಸಚಿನ್ ಪ್ರತಿಕ್ರಿಯೆ ಇರಲಿಲ್ಲ. ಮತ್ತೆ ’ಕರೆಂಟು ಹೋಗಿದೆ !’ ಕವನ ಓದಲು ಕೊಟ್ಟೆ. ವಿನ್ನಿಗೆ ಇಷ್ಟವಾಯಿತು ಅಂತ ಕಣುತ್ತದೆ. ’ಇಂತದ್ನೆಲ್ಲಾ ಬಿಟ್ಟು ಬ್ಲಾಗಲ್ಲಿ ಏನೇನೋ ತುಂಬಿಸಿಟ್ಟಿದ್ದೀಯಾ’ ಎಂದ. ಕೊನೆಯಲ್ಲಿದ್ದ ’ಕರೆಂಟು ಹೋಗಿದೆ! ಎಲ್ಲಿಗೆ?’ ಎಂಬ ಪ್ರಶ್ನೆ ಆ ಕ್ಷಣಕ್ಕೆ ಇಬ್ಬರಿಗೂ ಕಾಡಿದ್ದನ್ನು ಅವರವರ ಮುಖದಲ್ಲಿ ಕಂಡ ನನಗೆ ಖುಷಿಯಾಯಿತು.

ಹೀಗೆ ಸಾಹಿತ್ಯದ ಚರ್ಚೆ ಮಾಡುತ್ತಲೇ ಬ್ಯಾಗ್ನಲ್ಲಿದ್ದ ಸುರೇಂದ್ರನಾಥರು ನೆನಪಾದರು. ಹೊಸ ವಿನ್ಯಾಸದ ಛಂದ ಪ್ರಕಾಶನದ ಕಟ್ಟುಕಥೆಗಳು ಎಂಬ ಚಂದದ ಪುಸ್ತಕದಲ್ಲಿ ಸುರೇಂದ್ರನಾಥರು ವಿಡಂಬನಾತ್ಮಕವಾಗಿ ನ್ಯೂನ್ಯತೆಗಳನ್ನೇ ದೊಡ್ಡದು ಮಾಡಿ ಹೆಣೆದಿದ್ದ ಕಥೆಗಳವು. ನಾನು ಪುಸ್ತಕ ತೆಗೆದು ಓದಲು ಶುರುಮಾಡಿಬಿಟ್ಟೆ.. ದೊಡ್ಡ ಧ್ವನಿಯಲ್ಲಿ... ಇಬ್ಬರೂ ಕೇಳುತ್ತಿದ್ದರು. ಅದರಲ್ಲಿನ ರಾಮ,ಪರ್ಣಕುಟೀರದ ಸೀತೆ, ಅನುಜ ಲಕ್ಷ್ಮಣ, ಬೇಕೆಂದರೂ ಬೀಳಲಾಗದ ಬಾತರೂಮ್ನಲ್ಲಿ ಬಿದ್ದ ಕಮಲಮ್ಮ, ಗೋಡೆಗೆ ತಾಗಿನಿಂತ ಪೀತಾಂಬರಧಾರಿ ನೀಲಿಬಣ್ಣದ ಕೊಲ್ಲೂರಯ್ಯ ಇತ್ಯದಿಗಳ ಸಂದರ್ಭದಲ್ಲಿ ಪುಸ್ತಕ ಮುಚ್ಚಿಟ್ಟು, ನಕ್ಕು, ಪುನಃ ಮುಂದುವರೆಸುತ್ತಿದ್ದೆವು. ಜೋರಾಗಿ ಓದಲಾಗದ ಶಬ್ದಗಳನ್ನು ಮನಸಲ್ಲೇ ಓದಿದರೂ, ಒಮ್ಮೊಮ್ಮೆ ಅದರ ಅರ್ಥ ವ್ಯಾಪ್ತಿಗೆ ಅದೇ ಶಬ್ದ ಬೇಕಾದಾಗ ಅವರಿಗೇ ಓದಲು ಕೊಡುತ್ತಿದ್ದೆ. ಕಥೆಯ ಕೊನೆಯ ಪುಟದಲ್ಲಿದ್ದಾಗ ಡ್ರೈವರ್ ಲೈಟ್ ಆರಿಸಿದ. ಮೊಬೈಲ್ ಬೆಳಕು ಬಿಟ್ಟೂ ಓದಿ ಮುಗಿಸಿದರೂ ಮುಗಿಸಿದ ಸ್ವಲ್ಪ ಸಮಯದವರೆಗೂ ಕಥೆಯ ಗುಂಗಿನಲ್ಲಿ ನಗುತ್ತಲೇ ಇದ್ದೆವು.

***

ಎರಡು ಕಿವಿಗೆರಡು ear phone ಸಿಕ್ಕಿಸಿ ಕೊತಾಗ ಹಸಿವಾದದ್ದು ನೆನಪಾಯಿತು. ಅಷ್ಟರಲ್ಲಿ ’ನಮ್ಮ ಕಾಲೇಜು ನಮ್ಮ ಕಾಲೇಜು’ ಎಂದು ಸಚಿನ್ ಎದ್ದೆದ್ದು ಆರ್.ವಿ. ಕಾಲೆಜು ಬೋರ್ಡ್ ನೋಡತೊಡಗಿದ. ಇನ್ನೂ ಹಾಗೇ ಇದೆ - ನೀಲಿ ಬಣ್ಣದ ಬೋರ್ಡು.. ಮಧ್ಯದಲ್ಲಿ ಕೆಂಬಣ್ಣದ G .. ಖುಷಿಯಾಯಿತೋ ಬೇಜಾರಾಯಿತೋ ತಿಳಿಯದ ಹಾಗೆ ಮುಖ ಮಡಿ ನಾವು ಸುಮ್ಮನಾದೆವು. ಬ್ಲೂ ಟೂತಿನಿಂದ ಕೆಲ ಹಾಡುಗಳ ಬದಲಾವಣೆ ನಡೆಯಿತು. ಹಸಿವು ಜೋರಾಗುತ್ತಿತ್ತು.. ಹಿಂದಿನ ಸಲವೊಮ್ಮೆ ಶ್ರೀನಿಧಿ ಜೊತೆಗೆ ಬಂದಿದ್ದಾಗ ಮದ್ದೂರಿನಲ್ಲಿ ತಿಂಡಿಗೆ ನಿಲ್ಲಿಸದ್ದು ನೆನಪಾಗಿ, ಅದನ್ನು ಹೇಳಿ ಹಸಿವಾದವರಿಗೆಲ್ಲಾ ಖುಷಿ ಸುದ್ದಿ ಕೊಟ್ಟೆ. ಹೀಗಾಗಿ ಮದ್ದೂರಿಗಾಗಿ ಕಾಯುತ್ತಾ ಹಸಿವನ್ನು ಮರೆಯುತ್ತಾ ಕತ್ತಲ ಗಾಳಿಗೆ ಮುಖವೊಡ್ಡಿ ಕುಳಿತೆವು.. ನನ್ನ ಕಿವಿಯಲ್ಲಿ ಕಾಯ್ಕಿಣಿ ಹಾಡು..

ಪ್ರೀತಿ ಸುಂದರ ಪ್ರೀತಿ ಸಂಭ್ರಮ ನವಿರು ನೆನಪುಗಳ ಕರೆಯೋಲೆ
ಪ್ರೀತಿ ಚಂಚಲ ಪ್ರೀತಿ ವಂಚನೆ ಕಣ್ಣ ಹನಿಗಳೇ ಜಪಮಾಲೆ..

***

’ಕ್ಯಾಚ್ ಹಾಕಿ ಕ್ಯಾಚ್ ಹಾಕಿ’

ಇದೇನಪ್ಪಾ ಇದ್ಯಾರು ಬಸ್ ನಲ್ಲಿ ಕ್ರಿಕೆಟ್ ಆಡ್ತಾ ಇರೋದು ಅಂತ ಕತ್ತು ತಿರುಗಿಸಿದರೆ ವಿನ್ನಿ. ಒಂಥರಾ ಮುಖ ಮಾಡಿ ಕಣ್ಣಗಲಿಸಿ ’ಅಲ್ನೋಡ್ರೋ ಅಲ್ನೋಡ್ರೋ’ ಎಂದು ಒದರುತ್ತಿದ್ದ. ಏನಪ್ಪಾ ಇದು ಅಂತ ನೋಡಿದರೆ ಪಕ್ಕದ ಸೀಟಿನಲ್ಲಿ ಯುವ ಜೋಡಿ.. ಸೊಂಟಕ್ಕೆ ಸೊಂಟ ಜೋಡಿಸಿ ಗುಸು ಗುಸುವಿನಲ್ಲಿ ಮಗ್ನ.. ಇದನ್ನು ನೋಡಿಯೇ ನಾಚಿಕೆ ಭರಿತ ಉನ್ಮಾದದಲ್ಲಿ ಕ್ಯಾಚ್ ಕ್ಯಾಚ್ ಅಂತ ಕೂಗಿಕೊಂಡಿದ್ದ ನಮ್ಮ ’ಸಂತ’ ವಿನ್ನಿ. ಕೂಗು ನಾವು ಮೂವರನ್ನು ದಾಟಿ ಮುಂದೆ ಹೋಗದಿದ್ದರೂ ಸ್ವಲ್ಪ ಜೋರಾಗಿಯೇ ಇತ್ತು.. ಮುಂದಿನ ಸೀಟಿನಲ್ಲೂ ಅದೇ ಹಣೆಬರಹ.. ಅವರ ಭಂಗಿ ನೋಡಿ ಅಸಹ್ಯದ ಭಾವನೆ ಹುಟ್ಟಿ ಕಣ್ಣನ್ನು ವಿನ್ನಿ ಕಡೆ ತಿರುಗಿಸಿದೆ.. ಇನ್ನೂ ಅಸಹ್ಯ ಅನಿಸ್ತು.. ಜೊಲ್ಲು ಸುರಿಸುವುದೊಂದು ಬಾಕಿ.. ಕಾಲೇಜಿನಲ್ಲೆಲ್ಲಾ ಈ ರೀತಿಯ ವಿಚಾರಗಳಲ್ಲಿ ಆಸಕ್ತಿ ತೋರಿಸದಿದ್ದರೂ, ಅವನ ಮನಸ್ಸು ಮಾತ್ರ ಒಮ್ಮೊಮ್ಮೆ ಅತಿಯೋಗಿಯಂತೆಯೂ ಇನ್ನೊಮ್ಮೆ ಅತಿಭೋಗಿಯಂತೆಯೂ ಫೋಸು ಕೊಡುತ್ತಾ ಯಾರಿಗೂ ಅರ್ಥವಾಗದ ರೀತಿಯಲ್ಲಿ ಒದ್ದಾಡುತ್ತಿತ್ತು ಎಂಬುದು ಗೊತ್ತಾಗುತ್ತಿತ್ತು. ಆದರೆ ಅದರ ಪರಿಸ್ಥಿತಿ ಈಗ ಈ ಮಟ್ಟಕ್ಕೆ ತಲುಪಿದೆ ಎನ್ನುವುದು ಕಳವಳಕ್ಕೆ ಕಾರಣವಾದ ವಿಚಾರ. ಸಚಿನ್ ಮಾತ್ರ ’ಛೆ ಛೆ ಇವರಿಗೆ ಸ್ವಲ್ಪನೂ ನಾಚಿಕೆ ಇಲ್ಲಾ. ಪಬ್ಲಿಕ್ ಪ್ಲೇಸ್ನಲ್ಲಿ.. ಈ ತರಹ.. ’ ಅನ್ನುತ್ತಲೇ ಆಗಾಗ ಅವರ ಕಡೆ ಕಣ್ಣು ಹರಿಬಿಡುತ್ತಿದ್ದ.. ನಾನು ಇದೆಲ್ಲಾ ಕಾಮನ್ನು ಎಂಬಂತೆ ಫೋಸು ಕೊಡುತ್ತಾ ಮನಸ್ಸಲ್ಲೇ ಸಂಡಿಗೆ(??) ಮೆಲ್ಲುತ್ತಿದ್ದೆ.. (ಇತ್ತೀಚಿಗೆ ವಿನ್ನಿ ಹೇಳಿದ್ದು.. - ’ನನಗೆ ಕರಿದ ಪದಾರ್ಥ ತಿಂದ್ರೆ ಆಗಲ್ಲ.. ಅದ್ಕೇ ಮನಸ್ಸಲ್ಲಿ ಮಂಡಿಗೆ ಮಾತ್ರ ತಿನ್ನೋದು’ ). ಇದು ಸ್ವಲ್ಪ ಅತಿರೇಕಕ್ಕೆ ಹೋಗುತ್ತಿದೆ ಎಂದೆನಿಸಿದಾಗ ಮತ್ತೆ ಅತ್ತ ಕಣ್ಣುಹಾಯಿಸುವುದಿಲ್ಲ (ಅಂದರೆ ಬೇರೆಯವರಿಗೆ ಗೊತ್ತಾಗುವ ಹಾಗೆ ಆ ಕಡೆ ನೋಡುವುದಿಲ್ಲ) ಎಂದು ತೀರ್ಮಾನಕ್ಕೆ ಬಂದು ಗಪ್ಪಾದೆವು. ಆದರೂ ವಿನ್ನಿ ಆಗಾಗ ಕ್ಯಾಚ್ ಹಾಕು ಕ್ಯಾಚ್ ಹಾಕು ಅನ್ನುತ್ತಲೇ ಇದ್ದ..

ಬಸ್ ಹೋಗ್ತಾ ಹೋಗ್ತಾ ತೂಕಡಿಸುತ್ತಿದ್ದೆವು.. ಕಿವಿಯಲ್ಲಿ ಗುಂಯ್ ಗುಡುವ ಗಾಯಕರು ಆಗಾಗ ಬದಲಾಗುತ್ತಲೇ ಇದ್ದರು. ಯಾವುದೋ ಬ್ರಿಡ್ಜ್ ಇರಬೇಕು.. ಕತ್ತಲಲ್ಲಿ ಕಾಣಲಿಲ್ಲ.. ಬಸ್ ಒಮ್ಮೆಲೇ ಗಡ ಗಡ ಗಡ ನಡುಗತೊಡಗಿತು.. ’ಯಾವನ್ ಲೇ ಅಂವ್.. ಸೈಲೆಂಟ್ ಮೋಡ್ ಇಡು ಅಂದ್ರೆ ವೈಬ್ರೇಶನ್ನಲ್ಲಿಟ್ಟಾಂವ? ’ ಎಂದು ಹುಬ್ಬಳ್ಳಿ ಭಾಷೆಯಲ್ಲಿ ವಿನ್ನಿಗೆ ಮಾತ್ರ ಕೇಳುವ ಹಾಗೆ ಕೂಗಿದೆ.. ವಿನ್ನಿ ಗಹಗಹಿಸಿ ನಗತೊಡಗಿದ.. ನಾನು ಮಾಡಿದ ಪನ್ನಿಗೆ ನನಗೂ ನಗು ಬಂತು.. ಸಚಿನ್ ಎಂದಿನಂತೆ ’ಏನಾಯ್ತು ಏನಾಯ್ತು ’ ಕೇಳಿದ.. ವಿನ್ನಿ ಅವನಿಗೂ ಹೇಳಿ ನಕ್ಕ.. ಸಚಿನ್ನನೂ ಸಹ. ನಮ್ಮ ಹಸಿವಿನ ಬಗ್ಗೆ ಈಗಾಗಲೇ ಹೇಳಿದ್ದೆ.. ಅದು ಮತ್ತೆ ನೆನಪಿಗೆ ಬಂದಿದ್ದು ಇಪ್ಪತ್ನಾಲ್ಕು ಗಂಟೆ ಮದ್ದೂರ್ ಕಾಫಿ ಡೇ ನೋಡಿದಾಗ. ಅಂದರೆ ಮದ್ದೂರ್ ಬಂತು.. ಈಗ ಡ್ರೈವರ್ ಬಸ್ ನಿಲ್ಲಿಸ್ತಾನೆ..ಮೋಸ ಮಾದಲಿಲ್ಲ.. ನಿಲ್ಲಿಸಿದ. ಎದ್ನೋ ಬಿದ್ನೋ ಎಂದು ಓಡಿ ಹೋಗಿ ನಾನು ವಿನ್ನಿ ಎರಡೆರಡು ಪ್ಲೇಟ್ ಇಡ್ಲಿ ವಡೆ ಮುಕ್ಕಿದೆವು. ಸಚಿನ್ ಕುರ್ಕುರೆ, ಜೊತೆಗೆ ಮಿನರ್ಲ್ ವಟರ್ ಇಳಿಸಿದ. ಒಂಥರಾ ತೃಪ್ತಿ.. ಬಸ್ ಸ್ಟಾಂಡಿನ ಇನ್ನೋದಂಚಿನ ಮೂತ್ರಾಲಯ ತಲುಪುವ ಹೊತ್ತಿಗೆ ಸರಿಯಾಗಿ ಕರೆಂಟು ಹೋಯಿತು.. ಕರೆಂಟು ಎಲ್ಲಿಗೆ ಹೋಗುತ್ತದೆ ಎಂಬ ಪ್ರಶ್ನೆ ಮತ್ತೆ ಮೂಡಿತು.. ಅಲ್ಲಿ ಸರದಿ ಪ್ರಕಾರ ಒಂದೊಂದು ರೂಪಾಯಿ ಕೊಟ್ಟು ನಮ್ಮ ನಮ್ಮ ಜಲಬಾಧೆ ತೀರಿಸುವಷ್ಟರಲ್ಲಿ ಸಚಿನ್ ಫೋನಾಅಯಿಸಿದ.. ’ಬಸ್ ಹೊರಡ್ತಾ ಇದೆ.. ಬರ್ರೋ’.. ಓಡಿದೆವು.

"ಯೆಸ್ ಯೆಸ್"

ಬಸ್ ಹತ್ತಿದವನೇ ಮತ್ತೆ ವಿನ್ನಿ ಕೂಗಿಕೊಂಡ.. ಏನಾಯ್ತು?

"ಆ ಹುಡ್ಗಿ ಚೆನ್ನಾಗಿಲ್ಲ.. ಯೆಸ್ ಯೆಸ್.."

ಇದೊಂಥರಾ ಕಾಯಿಲೆ ಅಂದುಕೊಂಡು ಅವನನ್ನು ಸುಮ್ಮನಿರಿಸಿದೆ. ಸಚಿನ್ ಈಗ ನಗತೊಡಗಿದ್ದ. ಸ್ವಲ್ಪ ಹೊತ್ತಿಗೆ ಮುಂಚೆ ಕ್ಯಾಚ್ ಕ್ಯಾಚ್ ಅಂತ ಕೂಗಿದವ ಈಗ ಚೆನ್ನಾಗಿಲ್ಲ.. ಯೆಸ್ ಯೆಸ್ ಅಂತಿದ್ದಾನೆ. ಅನಂತನಾಗ್ ಒಮ್ಮೆ ಹೇಳಿದ್ದು - ’ಅತೀ ಹೆಚ್ಚಿನ ಖುಷಿ ಮತ್ತು ಅತೀ ಹೆಚ್ಚಿನ ದುಃಖ ಎರಡೂ ಮನುಷ್ಯನನ್ನು ಒಂದೇ ರೀತಿಯ ವೈರಾಗ್ಯ ಸ್ಥಿತಿಗೆ ಕೊಂಡೊಯ್ಯುತ್ತದೆ’ - ಇವನ ಅರಚಾಟವನ್ನು ನೋಡಿದರೆ ಎರಡರಲ್ಲಿ ಒಂದಾಗಿರುವುದು ಸ್ಪಷ್ಟವಾಗಿತ್ತು.. ನಮ್ಮೆಲ್ಲಾ ಈ ಗೌಜಿಗಳ ಪಕ್ಕದ ಸೀಟಿನಲ್ಲಿ ಸರಸ-ವಿರಸ-ಸಲ್ಲಾಪಗಳು ಮಾತ್ರ ಅವಿರತವಾಗಿ ನಡೆದೇ ಇತ್ತು . ಕಿಡಕಿ ಪಕ್ಕದ ನನ್ನ ಸೀಟಿಗೆ ಸಚಿನ್ ಆಕ್ರಮಣ ಮಾಡಿದ್ದರಿಂದ, ಮಧ್ಯದ ವಿನ್ನಿ ಮದ್ಯ ಕುಡಿದಂತೆ ಆಡುತ್ತಿದ್ದರಿಂದ, ದಾರಿ ಬದಿಯ ಸೀಟಿನ ನನಗೆ ನಡೆಯುತ್ತಿರುವ ಘಟನೆಗಳು ಇನ್ನೂ ಹತ್ತಿರವಾಗಿದ್ದವು.. !!

****

ಕಿವಿಗೆ ear-phone ಸಿಕ್ಕಿಸಿಕೊಂಡೇ ಅಮ್ಮನ ಜೊತೆ ಮಾತಾಡಿದೆ.. ಅಪ್ಪ ಏನೋ ಹೇಳುತ್ತಿರುವಾಗಲೇ ಬ್ಯಾಲೆನ್ಸ್ ಮುಗಿದು ಕರೆ ಕತ್ತರಿಸಿತು.. ಈಗ ರಜನೀಕಾಂತ ಪ್ರವೇಶ ಮಾಡಿದ.. ವಿನ್ನಿ Airtel Mobile Internet ನಲ್ಲಿ email ಓಪನ್ ಮಾಡಿ ರಜನೀಕಾಂತನ ಪ್ರವರಗಳನ್ನು ಓದತೊಡಗಿದ..ನೂರಕ್ಕೂ ಹೆಚ್ಚಿನ ಪನ್ ಗಳು ನಡೆದವು.. ಓದಿದ್ದೇ ಆದರೂ ಕಿಸ ಕಿಸ ನಗುತ್ತಿದ್ದೆವು.. ಅಲ್ಲೆಲ್ಲೂ ಇರದ ಆಫೀಸಿನ ಊಟದ ಸಮಯದ ಒಂದು ನನಗೆ ನೆನಪಾಯಿತು..

Once Rajanikanth's daughter lost veriginity.. and Rajanikanth found it and put it back

ಹ ಹಹ್ ಅಹಾ ಹ್ಹಹಹ ಹಹಹಹ್ಹ ಅಹ್ಹ ಹಹ ಎಂದು ಮೂವರೂ ಮುಂದಿನ ಸೀಟಿನ ಸರಳು ಹಿಡಿದು ನಕ್ಕೆವು.. ಸಚಿನ್ ನಕ್ಕೂ ನಕ್ಕೂ ಒಂದು ಚಪ್ಪಾಳೆಯನ್ನೂ ಹೊಡೆದ. ಕ್ಯಾಚ್ ಕ್ಯಾಚ್ ವಿನ್ನಿಗೆ ಈಗ ನಿಜಕ್ಕೂ ಕ್ರಿಕೆಟ್ ನೆನಪಾಯಿತು. ಯುವರಾಜನ ಆರಕ್ಕೆ ಆರು ಸಿಕ್ಸರ್ ಹೊಡೆದ ವಿಡಿಯೋವನ್ನು ಕಾಮೆಂಟರಿ ಸಮೆತ ಮೊಬೈಲಿನಲ್ಲಿ ಪ್ಲೇ ಮಾಡಿದ.. ಪಬ್ಲಿಕ್ ಪ್ಲೇಸ್ ನಲ್ಲಿ ಗಲಾಟೆ ಮಾಡಬಾರದು ಎಂದು Volume ಕಡಿಮೆ ಮಾಡಲು ಹೇಳಿದೆ. ’ಪಬ್ಲಿಕ್ ಪ್ಲೇಸ್ ನಲ್ಲಿ ಏನೆನೆಲ್ಲಾ ಮಾಡಬಹುದು!! ಇದೆಲ್ಲಾ ಏನು ಮಹಾ?’ ಎಂದ. ಮತ್ತೆ ನೆನಪಾಗಿ ಈಗ ಪಕ್ಕದ ಸೀಟು ನೋಡಿದ್ದು ನಾನು.

ಮೈಸೂರು ದೀಪಾಲಂಕೃತವಾದದ್ದು ಶ್ರೀರಂಗಪಟ್ಟಣದ ದ್ವಾರದಿಂದಲೇ ಗೊತ್ತಾಗುತ್ತಿತ್ತು. 40 w ಬಲ್ಬುಗಳನ್ನು ಸಾಲಾಗಿ ಹಾರದಂತೆ ಪೋಣಿಸಿ ತೂಗು ಬಿಟ್ಟಿದ್ದರು.. ದಾರಿಯುದ್ದಕ್ಕೂ ಮರಗಳ ಮೇಲೆ ಕೆಂಪು ಹಸಿರು ನೀಲಿ ಬಣ್ಣದ ದೀಪಗಳು.. ಒಂಥರಾ ಖುಷಿ.. ಸಂಭ್ರಮ.. ನಾಡ ಹಿರಿಮೆಯ ದಸರಾ ಮೂವರಿಗೂ ಮೊದಲನೆಯ ಅನುಭವ.. ರಾತ್ರಿ ಒಂಭತ್ತೂವಎಯೋ ಹತ್ತೋ ಆಗಿರಬೇಕು.. ಬಸ್ ಇಳಿದೆವು.. ಸಾಮಾಜಿಕ ಕಳಕಳಿ ಮೆರೆಯುವ ಯತ್ನದಲ್ಲಿ ಖಾಲಿ ಕುರ್ಕುರೆ ಕವರ್ರು, ಖಾಲಿ ಬಾಟಲಿಗಳನ್ನೆಲ್ಲಾ ಬಸ್ ನಲ್ಲಿ ಬಿಸಾಕದೆ ಕೈಯಲ್ಲೇ ಹಿಡಿದುಕೊಂಡು ಏನ್ಮಾಡೋದು ಅಂತ ಹಿಂದೆ ಮುಂದೆ ನೋಡುತ್ತಿದ್ದೆ.. ವಿನ್ನಿ ಮತ್ತೆ ’ಯೆಸ್ ಯೆಸ್’ ಅಂದ.. ಈಗೇನಾಯ್ತು ಕೇಳಿದ್ದಕ್ಕೆ ’ಅವಳು ನಿಜವಾಗಿ ಚೆನ್ನಾಗಿಲ್ಲ, ಪಾಪ ಅವಳ ಹುಡುಗ’ ಎಂದು ಪರಿತಾಪ ಪಟ್ಟ.. ’ಥೂ ಇವನ’ ಎಂದುಕೊಂಡೆ, ಸಚಿನ್ ಫೋನ್ ನಲ್ಲಿ ಬಿಜಿ.. ಸುರೇಶ್ ಹೆಬ್ಳೀಕರ್ ಜೊತೆಗೆ...


Sunday, October 3, 2010

ಡೈರಿ ಮಿಲ್ಕು, ಕ್ಲಾಸ್ ರೂಮು ಮತ್ತು ಗೊತ್ತಿಲ್ಲದವನು

ದೃಶ್ಯ ೧

’ಇದು ಶುದ್ಧ ಸುಳ್ಳು’
’ಯಾಕೆ’
’ಯಾಕೋ ಹಾಗನಿಸ್ತು’
’ಮತ್ತೆ ಹಾಗಾದ್ರೆ ನೀನು ..’
’ನಾನಲ್ಲ’
’ಮತ್ಯಾರು?’
’ಗೊತ್ತಿಲ್ಲ’

ದೃಶ್ಯ ೨

’ಅದರರ್ಥ ಅವನಿಗೆ
ನಾ ಬೇಕಾಗಿಲ್ಲ’
’ಪರಿಚಯವೇ ಆಗಿಲ್ಲ ಅಂತಿ..?’
’ಹೂಂ’
’ಡೈರಿ ಮಿಲ್ಕ್ ಯಾಕೆ ಕೊಟ್ಟ?’
’ದೇವ್ರಿಗೇ ಗೊತ್ತು’
’ಯಾವ್ ದೇವ್ರು?’
’ಸಾಕ್ ಸುಮ್ನಿರೇ.. ತಮಾಷಿ ಮಾಡ್ಬೇಡ’

ದೃಶ್ಯ ೩

’ಯಾಕೇ?’
’ಮೂರನೇ ಪೀರಿಯಡ್ ಬಂಕಾ?’
’ಇಲ್ಲ ..ಹೋಗ್ಬೇಕು’
’ಮತ್ತಿನ್ನೂ ಇಲ್ಲೇ ಕೂತಿದ್ದೀಯಾ?’
’ನಿಂಗೇನು?’
’ಯಾಕೇ.. ಅವನು ಬಂದಿಲ್ವಾ?’
’ಬಂದಿದ್ದ.. ಅದಕ್ಕೆ..’
’ಏನಾಯ್ತು?’
’ಏನೂ ಆಗಿಲ್ಲ.. ’

ದೃಶ್ಯ ೪

’ನಮಸ್ಕಾರ ಸರ್..’
’ಏನಮ್ಮಾ? ಸಮಾಚಾರಾ?’
’ಏನಿಲ್ಲ.. ಮೂರನೇ ಪಿರಿಯಡ್ ಇದ್ಯಾ ಸರ್?’
’ಯಾಕ್ರೀ.. ಬೇಡ್ವೇನ್ರೀ?’
’ಹಾಗಲ್ಲ ಸರ್.. ಅದು..’
’ಏನದು?’
’ಏನಿಲ್ಲ ಸರ್’

ದೃಶ್ಯ ೫

’ನಾನೊಂದು ತೀರ
ನೀನೊಂದು ತೀರಾ..’
’ಕತ್ತೆ.. ಹಾಡ್ ಹೇಳಬೇಡ’
’ಯಾಕೆ?’
’ಎಲ್ಲರಿಗೂ ಕೇಳುತ್ತೆ..’

Saturday, August 21, 2010

ಮೇಲ್ಸೇತುವೆಯ ಕೆಳಗೊಂದು ಸ್ಮಶಾನ

ನಗರದ ಕೆಲಭಾಗಗಳಲ್ಲಿ
ಜೀವಂತ ಹೆಣಗಳು
ಕೈಯಲ್ಲಿ ಮೊಬೈಲು
ಹಿಡಿದು ಹೊರಟಿವೆ..

ಸಿಕ್ಕ ಸಿಕ್ಕ ನಂಬರುಗಳನ್ನು
ಒತ್ತುತ್ತಾ
ಫೋನು ಮಾಡುತ್ತಾ
’ಹಲೋ’ ಎಂದರೆ ಮಾತಾಡದೆ
ಗುಮ್ಮಗಳಾಗಿವೆ.

ಅವುಗಳನ್ನು ಹೂಳುವವರಿಲ್ಲದೆ
ಸುಡುವವರಿಲ್ಲದೆ
ಅನಾಥವಾಗಿ
ಅಲೆಯುತ್ತಿರುವುದರಿಂದ
ಟ್ರಾಫಿಕ್ ಜಾಮ್ ಆಗಿದೆ

ರಾತ್ರಿ ಹನ್ನೊಂದಾದರೂ
ಮುಚ್ಚದ
ಕೆಲ ಆಫೀಸುಗಳಿಂದ
ಇನ್ನೂ ಕೆಲವು ಹೊರಬಂದಿವೆ.

ಸ್ವರ್ಗ ಮೇಲಿದೆ ಎಂದು ಯಾರೋ
ಹೇಳಿದ್ದಾರೆ, ಅದಕ್ಕೇ
ಅವು ಫ್ಲೈಓವರ್ ಹತ್ತಿ ಹೊರಟಿವೆ

ಅರ್ಧಕಟ್ಟಿದ ಮೇಲ್ಸೇತುವೆಯ
ಇನ್ನೊಂದೆಡೆ ಬಿದ್ದು
ಸಾಯುತ್ತಿದ್ದಾವೆ.
ಅವು ಈಗ
ಸತ್ತ ಹೆಣಗಳು
ಜೀವಂತ ಭೂತಗಳು.

Friday, August 20, 2010

ಇಲ್ಲಾ ಅಪ್ಪಾ.. ಇದೇ ಬಸ್ಸಿಗೆ ಹೋಗ್ಬೇಕು

'ಓ ಶಿಟ್, ಆಲ್ರೆಡೀ ಏಯ್ಟ್ ಥರ್ಟೀ’ ಎಂದು ತನ್ನಷ್ಟಕ್ಕೇ ತಾನು ಮಾತಾಡಿಕೊಂಡು ನಿನ್ನೆಯ ಪರಿಮಳದ ಸಾಕ್ಸನ್ನು ಒಮ್ಮೆ ಮೂಸಿದಾಗ ಜುಮ್ಮೆಂದಿತು. ’ಪರವಾಗಿಲ್ಲ’ ಎಂದು ಕಾಲಿಗೊಂದರಂತೆ ಕೀಲಿಸಿ ಮನೆ ಬಿಟ್ಟಾಗ ಎಂಟೂ ಮೂವತ್ತೈದು. ಗಡಿಬಿಡಿ ದಿನದ್ದೇ ಆದರೂ ಒಂಭತ್ತೂವರೆಗೇ ಶುರುವಾಗುವ ಟ್ರೀನಿಂಗ್ ಇವತ್ತಿನ ವಿಶೇಷವಾಗಿತ್ತು.


ಬಸ್ ಸ್ಟಾಂಡಿನಲ್ಲಿ ನಿಂತಿದ್ದ ಜನರು ಬಸ್ಸಿಗಾಗಿ ಹೊಂಚುಹಾಕುತ್ತಿದ್ದಾರೆ. ಗಾಳಕ್ಕೆ ಹುಳು ಸಿಕ್ಕಿಸಿ ಮೀನಿಗಾಗಿ ದಂಡೆಯಮೇಲೆ ಕಾಯುತ್ತಿದ್ದವರಂತೆ ಕತ್ತುದ್ದ ಮಾಡಿ ಬಸ್ಸಿನ ಬರುವನ್ನು ಕಾಯುತ್ತಿದ್ದಾರೆ. ಕೆಲವೊಬ್ಬರು ಬಸ್ಸು ಈಗಾಗಲೇ ಹೊರಟು ಹೋಗಿದೆ ಎಂಬ ಅಭಿಪ್ರಾಯದಲ್ಲಿ ರಸ್ತೆಯ ಇನ್ನೊಂದು ಬದಿಗೂ ಕಣ್ಣುಹಾಯಿಸಿ ಬಸ್ಸು ಹೋಗಿರಬಹುದಾದ ಸಾಕ್ಷಿಗಳಿಗೆ ಹುಡೂಕುತ್ತಿದ್ದಾರೆ. ರಶ್ಶಿರಲಿ ಬಿಡಲಿ, ಜಾಗ ಸಿಗಲಿ ಬಿಡಲಿ ಜೋತಾಡಿಕೊಂಡಾದರೂ ಸರಿ; ಬರುವ ಬಸ್ಸಿಗೆ ಹೋಗಲೇ ಬೇಕು ಎಂಬ ತೀರ್ಮಾನದಲಿ ಸಿಗ್ನಲ್ಲಿನ ಹಿಂದುಗಡೆ ಬಸ್ ಪ್ರತ್ಯಕ್ಷವಾಗುವ ಮಹಾಪರ್ವಕ್ಕೆ ಹಪಹಪಿಸುತ್ತಿದ್ದಾರೆ. ಸ್ವಲ್ಪ ಸೆಕೆಯಾಗಿರಬೇಕು.. ಅವರಲ್ಲೊಬ್ಬ ಶರ್ಟ್ ಗುಂಡಿ ಬಿಚ್ಚಿದ್ದಾನೆ.. ಉದ್ದ ತೋಳಿನ ಅಂಗಿ ಕೈಯ ಅಂಚನ್ನು ಹಿಡಿದು ಮೇಲಕ್ಕೆಳೆದುಕೊಂಡಿದ್ದಾನೆ. ’ಬಸ್ ಬರದೇ ಇದ್ದರೆ ನಾಲ್ಕು ಬಾರಿಸಿಬಿಡುತ್ತೇನೆ’ ಎಂಬ ನಿಲುವಿನಲ್ಲಿ ಮುಂದೆ ಬಂದು ನಿಂತಿದ್ದಾನೆ. ಆದರೂ ಬಸ್ ಬರುತ್ತಿಲ್ಲ.


ಅಷ್ಟರಲ್ಲಿ ಒಂದಿಷ್ಟು ಜನ ಬಸ್ಸನ್ನೇ ಮುಖ್ಯ ಗುರಿಯಾಗಿಟ್ಟುಕೊಂಡು ಮಾತನಾಡತೊಡಗಿದ್ದಾರೆ. ಸಾರಾಂಶ್ವಾಗಿ ಬಸ್ಸು ಇವತ್ತು ಬರುವುದೇ ಇಲ್ಲ ಎಂಬ ತೀರ್ಮಾನಕ್ಕೂ ಬಂದವರಂತೆ ಕಾಣುತ್ತಿದ್ದಾರೆ. ಒಂದಿಬ್ಬರು ಆಟೋ ಹಿಡಿದು ಹೋಗುವ ಸಲಹೆ ಕೊಟ್ಟರೇ ಹೊರತು ಯಾರೂ ಹೊರಡಲಿಲ್ಲ.ಇನ್ನೋದಿಷ್ಟು ಜನ ಬಸ್ ಸ್ಟಾಂಡೀನ ಕಡೆಗೇ ಬರುತ್ತಿರುವ ಜನರನ್ನು ನೋಡಿ ’ಛೇ ಫುಲ್ ರಶ್ಶಾಗುತ್ತೆ’ ಎಂದು ಮುಖ ಸಿಂಡರಿಸಿದ್ದಾರೆ. ನಿಂತವರ ವೈಯಕ್ತಿಕ ವಿಚಾರಗಳೆಲ್ಲವೂ ಸೇರಿ ಸಾಮೂಹಿಕ ವೇದನೆಯಾಗಿ ಬಸ್ ಸ್ಟಾಂದಿನಿಂದ ಹೊರಬರುತ್ತಿವೆಯೋ ಎಂಬಷ್ಟು ಅಸಹನೀಯ ಮುಖ ಮಾಡಿ ಎಲ್ಲರೂ ನಿಂತಿದ್ದಾರೆ. ಆಗ ಬಸ್ಸು ಬರುತ್ತದೆ.


ಅದು ಸ್ವಲ್ಪ ಇಳಿಜಾರು ರಸ್ತೆ. ಇಳಿಜಾರಿನ ಪ್ರಾರಂಭದಲ್ಲಿ ಸಿಗ್ನಲ್ ಇದೆ. ಅದರ ಕೆಳಗೆ ಈಗ ಬಸ್ ನಿಂತಿದೆ. ಸಿಗ್ನಲ್ ದಾಟಿದ್ದೇ ಬಸ್ ಸ್ಟಾಂಡು.ಈಗಷ್ಟೇ ಇಲ್ಲಿ ಚಡಪಡಿಕೆ ಪ್ರಾರಂಭವಾಗಿದೆ. ಇಷ್ಟೊತ್ತು ತಮ್ಮ ಜೊತೆಗೇ ಕಾಯುತ್ತಿದ್ದ ಬ್ಯಾಗ್ ಗಳನ್ನು ಮುಟ್ಟಿ ಮುಟ್ಟಿ ಸಿದ್ಧರಾಗುತ್ತಿದ್ದಾರೆ. ಪಕ್ಕದಲ್ಲಿದ್ದವರಿಗಿಂತ ಬೇಗ ಬಸ್ ಹತ್ತಿ ಸೀಟು ಹಿಡಿದು ಕುಳಿತುಬಿಟ್ಟರೆ ಇಳಿಯುವವರೆಗೆ ತೊಂದರೆಯಿಲ್ಲ ಎಂದುಕೊಳ್ಳುತ್ತಲೇ ಸುತ್ತಮುತ್ತಲಿದ್ದವರೆಲ್ಲಾ ಶತ್ರುಪಾಳೆಯದವರಂತೆ ಕಾಣುತ್ತಿದ್ದಾರೆ. ತಮ್ಮ ತಮ್ಮ ಅಸ್ತ್ರಗಳನ್ನು ಕೈಗೆತ್ತಿಕೊಂಡು ದಾಳಿಮಾಡಲು ಸನ್ನದ್ಧರಾದ ಸೈನಿಕರ ಗುಂಪೊಂದು ಈಗ ಬಸ್ ಸ್ಟಾಂಡಿನ ಎದುರಿನ ರಸ್ತೆಯ ಅಂಚಿನಲ್ಲಿದೆ.






ಕೆಲವರಿಗೆ ಆ ಬಸ್ಸಿನ ಬೋರ್ಡು ಅಲವರಿಕೆಯನ್ನುಂಟು ಮಾಡಿದೆ. ತಮಗೆ ಬೇಕಾದ ಊರಿನ ಹೆಸರನ್ನು ಆರಿಸುವ ಕೆಲಸ ಬಂತಲ್ಲಾ ಎಂದು ಬೇಸರಿಸಿಕೊಂಡಿದ್ದಾರೆ. ಕೆಲವರು ಬೋರ್ಡಿನಲ್ಲಿರುವ ಸಂಖ್ಯೆಮಾತ್ರದಿಂದಲೇ ’ಇದು ನಮ್ಮದೇ ಬಸ್’ ಎಂದು ಕಂಡುಹಿಡೀದಿದ್ದಾರೆ. ಸ್ವಲ್ಪ ಅನುಭವಸ್ಥರಂತೆ ಕಾಣುವ ಇನ್ನೊಂದಿಬ್ಬರು ಬಸ್ಸಿನ ಬೋರ್ಡಿನ ಕಡೆ ತಿರುಗಿಯೂ ನೋಡದೇ ತಮ್ಮದೇ ಎಂಬ ನಿರ್ಧಾರಕ್ಕ್ಕೆ ಬಂದಿದ್ದಾರೆ ಹಾಗೂ ಬಸ್ಸು ಇಲ್ಲೇ ಬಂದು ನಿಲ್ಲುತ್ತದೆ ಎಂಬ ತೀವ್ರ ವಿಶ್ವಾಸದಿಂದ ಬಸ್ ಸ್ಟಾಂಡಿಗಿಂತ ಎರಡು ಹೆಜ್ಜೆ ಮುಂದೆ ಹೋಗಿ ನಿಂತಿದ್ದಾರೆ. ಉದ್ದ ಜಿಗಿತ ಸ್ಪರ್ಧೆಯ ಕೊನೆಯ ಹಂತದ ಸುತ್ತಿಗೆ,ದೂರದಿಂದ ಓಡಿಬಂದು ಗೆರೆಯ ಮೇಲೆ ನಿಂತವರಂತೆ ಇಲ್ಲಿಂದಲೇ ಬಸ್ಸಿನ ಬಾಗಿಲಿಗೆ ಜಿಗಿಯುತ್ತೇನೆ ಎನ್ನುವ ಉತ್ಸಾಹದಲ್ಲಿ ಇನ್ನೂ ಕೆಲವರಿದ್ದಾರೆ. ಬಸ್ಸು ಹಸಿರಾದ ದಾರಿ ಸಂಕೇತವನ್ನು ಹಿಂಬಾಲಿಸಿ ಮುಂದೆ ಬರುತ್ತಲಿದೆ. ಬೋರ್ಡಿನ ಕೇಸರೀ ಬಣ್ಣದ ಅಕ್ಷರಗಳು ದಿಕ್ಕೆಟ್ಟವರಂತೆ ಓಡೂತ್ತಿವೆ. ಪಕ್ಕದಲ್ಲಿ ಸ್ಥಿರವಾಗಿದ್ದ ಅಂಕೆಗಳು ಹಳೇ ಆಫೀಸಿನ ಕಾರಕೂನ ಬರೆದಿಟ್ಟ ಯಾವುದೋ ರಸೀದಿ ಸಂಖ್ಯೆಯಂತೆ ಕಾಣುತ್ತಿವೆ. ವಿಷಾದಭಾವದಲ್ಲಿ ಖೈದಿಯ ಬಿಳೀ ಬಟ್ಟೆಯ ಮೇಲಿನ ಅಪರಾಹಿ ಸಂಖ್ಯೆಯಂತೆಯೂ ಕಂಡು ’ದಾರಿ-ದಾರ್ಶನಿಕ’ರಿಗೆ ಆಹಾರವಾಗಿದೆ.


ನಿಲ್ಲುವ ಮೊದಲೇ ಟುಸ್ ಎಂದು ಹೈಡ್ರಾಲಿಕ್ ಬಾಗಿಲುಗಳು ಬೇರ್ಪಡುತ್ತಿದ್ದಂತೆಯೇ ಬಿಳೀ ಬಣ್ಣದ ಕಂಡಕ್ಟರ್ ಎದುರಾಗುತ್ತಾನೆ.ಉದ್ದ ಜಿಗಿತದವರು, ಅನುಭಸ್ಥರೆಲ್ಲಾ ಈಗಾಗಲೇ ಬಸ್ ಹತ್ತಾಗಿದೆ. ಹಿಂದಿನಸಾಲಿನ ಸೀಟೊ ಬಿಡದಂತೆ ಆಸೀನರಾಗಿದ್ದಾರೆ. ಇದು ತಮ್ಮ ಹಳೇ ತಲೆಮಾರಿನ ಬಳುವಳಿ; ಯಾರಿಗೂ ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಬಿದ್ದು ಕೂತಿರುವಂತೆ ಕಾಣುತ್ತದೆ. ಕೆಲವರಂತೂ ಎಷ್ಟೋ ವರ್ಷ ಇಲ್ಲೇ ಕುಳಿತವರಂತೆ ಕಾಣುತ್ತಾರೆ. ಬಸ್ಸು ಹೊಸದು. ’ಹೆಂಗಸರು/ಗಂಡಸರು’ ಎಂದು ಯಾವುದೇ ಸೂಚನೆ ಬರೆಯದೇ ಇದ್ದರೂ ಹಳೇ ಅಭ್ಯಾಸದಂತೆ ಹೆಂಗಸರೆಲ್ಲಾ ಮುಂದೇ ಕುಳಿತಿದ್ದಾರೆ. ಮತ್ತೆ ಟುಸ್ ಎಂದು ಬಾಗಿಲುಗಳು ಮುಚ್ಚುತ್ತಿದಂತೆಯೇ ಓಡಿ ಬಂದ ಒಬ್ಬ.. ’ಇದು ಮಾರೇನಹಳ್ಳಿ ಫ್ಲೈ ಓವರ್ ಮೇಲೆ ಹೋಗುತ್ತಾ?..."
ಎಂದು ಕೇಳುತ್ತಿದ್ದಾನೆ. ಮುಚ್ಚಿಕೊಳ್ಳುತ್ತಿದ್ದ ಬಾಗಿಲುಗಳು ಅವನ ಪ್ರಶ್ನೆ ಒಂದು ಪ್ರಶ್ನೆಯೇ ಅಲ್ಲ ಎಂಬರ್ಥದಲ್ಲಿ ವರ್ತಿಸುತ್ತಾ ಹೊರಗಿನ ಧ್ವನಿಯನ್ನು ಕ್ಷೀಣ ಗೊಳಿಸಿ ಕೊನೆಗೊಮ್ಮೆ ಮಾಯ ಮಾಡಿವೆ. ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಕೊನೇ ಪ್ರಶ್ನೆಯೊಂದಕ್ಕೆ ಉತ್ತರ ಸಿಗದವನಂತೆ ಮುಖಮಾಡಿ ನಿಂತವನ ಹಿಂದಿಕ್ಕಿ ಬಸ್ಸು ಹೊರಟಾಗ ಪ್ರಯಾಣಿಕರು ಹೊರಜಗತ್ತಿನ ಕೊಂಡಿಯೊಂದರಿಂದ ಸಂಪೂರ್ಣವಾಗಿ ಕತ್ತರಿಸಲ್ಪಡುತ್ತಾರೆ.


ಈ ಹೊಸಾ ಬಸ್ಸಿನ ಬಾಗಿಲುಗಳು ಜಾಸ್ತಿ ಶಬ್ದ ಮಾಡುವುದಿಲ್ಲ. ಸೀಟಿಗಿನ್ನೂ ಎಣ್ಣೆ ವಾಸನೆ ಹಿಡಿದಿಲ್ಲ. ನಿಂತವರು ಜೋತಾಡಲು ಇರುವ ಗಳುಗಳೆಲ್ಲ ಗಟ್ಟಿಮುಟ್ಟಾಗಿವೆ. ಅದಲ್ಲದೆ ರಸ್ತೆ ಕ್ಯಾಮರಾಗಳ ನೇರಪ್ರಸಾರ ಮಾಡುವ ಟೀವಿಯೊಂದುತನ್ನ ಕ್ಯಾಬಿನ್ನಿನೊಳಗೇ ಬಂಧಿಯಾದ ಚಾಲಕನ ಎದುರಿನಲ್ಲಿದೆ. ಕಂಡಕ್ಟರನ ಕೈಯಲ್ಲಿ ಟಿಕೆಟ್ ಕೊಡುತ್ತಾ ಸುರುಳಿ ಬಿಚ್ಚುವ ಪೆಟ್ಟಿಗೆ, ಬೇಡವೆಂದರೂ ನಿಲ್ಲಿಸದ ಎಫ್.ಎಂ ರೇಡಿಯೋ, ಅಗಲ ಗಾಜಿನ ಒಮ್ಮುಖ ಪಾರದರ್ಶಕ ಗೋಡೆಗಳು, ಅವೇ ಬಸ್ಸಿನ ಕಿಟಕಿಗಳು.. ಹವನಿಯಂತ್ರಿತ ವಾತಾವರಣ, ತಮ್ಮ ತಲೆಗೆ ಮಾತ್ರ ಗಾಳಿ ಬಿಟ್ಟಿಕೊಳ್ಳಲು ಪ್ರತಿ ಸೀಟಿನ ಮೇಲೆ ತಂಪು ಪಂಕಗಳ ವ್ಯವಸ್ಥೆ..ಇನ್ನೂ ಏನೇನೋ.. ಡ್ರೈವರ್ ಈಗ ಕಂಡಕ್ಟರನ ಹತ್ತಿರ ಮಾತಾಡುತ್ತಲೇ ಮುಂದಿನ ಸಿಗ್ನಲ್ನಲ್ಲಿ ಬಸ್ಸನ್ನು ನಿಲ್ಲಿಸುತ್ತಾನೆ. ಸಿಗ್ನಲ್ಲ್ನಲ್ಲಿ ಬಂದು ಬಾಗಿಲು ಬಡಿಯುವವರಿಗೆ ’ತೆಗೆಯುವುದಿಲ್ಲ’ ಎಂಬಂತೆ ಕೈಸನ್ನೆ ಮಾಡಿ ತನಗಿರುವ ಅಧಿಕಾರವನ್ನು ಅಥವಾ ಸಾಧ್ಯತೆಯೊಂದನ್ನು ಪ್ರಯೋಗ ಮಾಡಿದ ಕೃಥಾರ್ಥ ಭಾವನೆಗೆ ಗುರಿಯಾದ ವ್ಯಕ್ತಿಯಂತೆ ಚಾಲಕ ಕಾಣುತ್ತಾನೆ.


ಇನ್ನು ಹತ್ತಿದವರಿಗೆ ಸೀಟಿಲ್ಲ. ಕುಳಿತವರೆಲ್ಲಾ ತಪಸ್ವಿಗಳಂತೆ, ಏನನ್ನೋ ಜಪಿಸುತ್ತಿರುವಂತೆ ಭಾಸವಾಗುತ್ತಿದೆ. ಯಾರೂ ಸಹ ಯಾರ ಮುಖವನ್ನೂ ನೋಡುತ್ತಿಲ್ಲ. ಪುಸ್ತಕಗಲಲ್ಲೋ, ಪತ್ರಿಕೆಗಳಲ್ಲೋ ಮುಖ ಹುದುಗಿಸಿ, ತಾವು ಯಾರಿಗೂ ಕಾಣುತ್ತಿಲ್ಲ ಎಂಬ ಬಧ್ರತೆಯನ್ನು ಅನುಭವಿಸುತ್ತಿರುವಂತೆ ತೋರುತ್ತದೆ. ನಿಂತವರಲ್ಲಿ ಕೆಲವರು ನಿಂತಿದ್ದೇವಲ್ಲ ಎಂಬ ಕಾರಣಕ್ಕೆ ಹೊರಗಡೆ ದೃಷ್ಟಿ ಹಾಯಿಸಿದ್ದಾರೆ. ಇನ್ನು ಸ್ವಲ್ಪ ಮಂದಿ ತಮ್ಮ ಚೀಲಗಳನ್ನು ಆ ಹೆಗಲಿನಿಂದ ಈ ಹೆಗಲಿಗೆ ವರ್ಗಾಯಿಸುತ್ತಾ ಕಾಲ ಕಳಿಯುತ್ತಿದ್ದಾರೆ. ಕೈಯಲ್ಲಿ ಬ್ಯಾಗ್ ಹಿಡಿದವರು ಕಂಡಕ್ಟರ್ ಬಂದು ಟಿಕೆಟ್ ಅಂದಾಗ ಹಣ ತೆಗೆಯಲು ಪರ್ಸಿಗೆ ಯಾವ ಕೈ ಹಾಕಬೇಕೆಂದು ಗೊತಾಗದೇ ಗೊಂದಲಕ್ಕೀಡಾಗಿದ್ದಾರೆ.’ಬ್ಯಾಗ್ ಅಲ್ ಮೇಲ್ ಇಡಿ.. ಇಲ್ಲಾಂದ್ರೆ ಕೂತವರ ಕೈಗೆ ಕೊಡಿ’ ಅಂದರೆ ಕೇಳುತ್ತಿಲ್ಲ. ಆ ಬ್ಯಾಗುಗಳಲ್ಲಿ ಅವರ ಹೊರಗಿಣುಕಿ ನೋಡುವ ಫೈಲುಗಳಿವೆ.. ಕನ್ನಡ ಶಾಲೆ ಮಾಸ್ತರ್ರು ಅಥವಾ ಅವರವರ ಅಪ್ಪಂದಿರು ಕೊಟ್ಟ ಹಳೇ ಇಂಕ್ ಪೆನ್ ಇದೆ.. ಅಥವಾ ಇರಬಹುದು. ಮನೆಯಿಂದ ಪಂದ ಟಿಫನ್ ಕ್ಯಾರಿಯರ್ ಗಳಿರಬಹುದು. ಅದರಲ್ಲಿ ಬಿಸಿ ಬಿಸಿ ಪುಳಿಯೋಗರೆ ಗೊಜ್ಜಿರಬಹುದು. ಈಗ ಸ್ವಲ್ಪ ತಣ್ಣಗಾಗಿರಬಹುದು. ಅಥವಾ ಬ್ಯಾಗ್ ಖಾಲಿಯೂ ಇರಬಹುದು. ಖಾಲಿತನವಿರಲಿ ಬಿಡಲಿ, ಒಟ್ಟಿನಲ್ಲಿ ಹಿಡೀದವನ ಮನಸ್ಸಿಗೆ ಜೊತೆಯಲ್ಲಿದ್ದೇನೆ ಎಂಬ ನೆಮ್ಮದಿ ಕೊಡುವ ಬ್ಯಾಗುಗಳನ್ನು ಬಿಟ್ಟು ಅವರು ಇರಲಾರರು. ಅದಕ್ಕೇ ಒಂದು ಕೈಲಿ ಬ್ಯಾಗ್ ಹಿಡಿದೇ ಸಾಹಸ ಮಾಡುತ್ತಿದ್ದಾರೆ.


ಬಸ್ಸಲ್ಲಿ ಕುಳಿತವರೆಲ್ಲರೂ ಮೂಕವಿಸ್ಮಿತರು. ಬಸ್ ಹತ್ತುವಾಗ ಮಾತಾಡುತ್ತಿದ್ದವರೂ ಸಹ ಬಸ್ ಹತ್ತಿದ ಮೇಲೆ ಮಾತುಕಳೆದುಕೊಂಡವರಂತೆ, ಪಕ್ಕದಲ್ಲಿದ್ದವ್ರೂ ಅಪರಿಚಿತರಂತೆ ವರ್ತಿಸುತ್ತಿದ್ದಾರೆ. ಕಂಡಕ್ಟರ್ ಮಾತ್ರ ಆಗಾಗ ಅದೂ ಇದೂ ಅಂತ ಬಡಬಡಾಯಿಸುತ್ತಿದ್ದಾನೆ. ’ಎಲ್ಲಿಗೆ? ಪಾಸು ತೆಗಿರ್ರೀ’ ಎಂದೆಲ್ಲಾ ಮೂಕಿಜನರ ಬಾಯಿಬಿಡಿಸಲು ಪ್ರಯತ್ನಿಸುತ್ತಿದ್ದಾನೆ ಶಾಲಾ ಪರೀಕ್ಷೆ ಕೋಂಎಯಲ್ಲಿ ಪರಿವೀಕ್ಷಕರು ತಿರುಗಿದಂತೆ ಬಸ್ಸಿನ ಉದ್ದಗಲಕ್ಕೂ ಒಮ್ಮೆ ತಿರುಗಿ ಬಂದು ಮತ್ತೆ ಆಸೀನನಾಗುತ್ತಾನೆ. ಈ ಪ್ರಕ್ರಿಯೆ ಬಹಳ ಸಾರಿ ನಡೆದರೂ ಪ್ರತಿ ಸಲವೂ ಹೀಗೆ ಏಕೆ ನಡೆಯುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಗೊತ್ತಿಲ್ಲದವನಂತೆಯೇ ಇತ್ತು ಅವನ ಮುಖಭಾವ.


ಹಳೇ ಬಸ್ಸುಗಳಂತೆ ಈ ಬಸ್ಸಿಗೆ ಕಿಟಕಿಗಳೇ ಇಲ್ಲ.. ಕಿಟಕಿ ಸರುಗಳೂ ಇಲ್ಲ.. ಎಲ್ಲಾ ಗಾಜಿನ ಗೋಡೆಗಳು.. ಅದರ ಮೇಲೆ ಅಂಟಿಸಿದ ಬಣ್ಣಬಣ್ಣದ ಅರೆಪಾರದರ್ಶಕ ಜಾಹೀರಾತುಗಳು.. ಒಳಗೆ ಕೂತ ಯಾರಿಗೂ ಈ ಬಣ್ಣಗಳು ಕಾಣುವುದೇ ಇಲ್ಲ..ಇವೆಲ್ಲವನ್ನೂ ಮೊದಲೇ ನೋಡಿದ್ದೇನೆ.. ಏನೂ ವಿಶೇಷವಿಲ್ಲ ಎಂಬಂತಿರುವ ಅವರುಗಳು ನೋಡುವ ಪ್ರಯತ್ನವನ್ನೂ ಮಾಡುತ್ತಿಲ್ಲ. ಆಸಕ್ತಿ ತೋರಬಯಸುವ ಮನಸುಗಳೂ ದಾಕ್ಷಿಣ್ಯ ತೋರುತ್ತಿದ್ದಾವೆ... ನಟಿಸುತ್ತಿದ್ದಾವೆ..ಮಾತನಾಡಲು ಕಾರಣವಿದ್ದೂ ಮಾತನಾಡಿದರೆ ಎಲ್ಲಿ ತಪ್ಪಾಗುತ್ತದೋ ಎಂದು ಮೌನವ್ರತ ವಹಿಸಿದ್ದಾವೆ.. ಪಕ್ಕದವರ ಪುಸ್ತಕದಲ್ಲಿ ಅಥವಾ ಪತ್ರಿಕೆಯ ಒಳಗೆ ಹಣಕಲು ಅವಕಾಶವಿದ್ದೂ ವಿಚಿತ್ರ ಹಿನ್ನೆಡೆ ಅನುಭವಿಸಿದ್ದಾವೆ. ಎಲ್ಲಿ ಮಾತಾಡಿಬಿಡುತ್ತೇನೋ ಅಥವಾಇಲ್ಲಿ ಇತರರು ಮಾತಾಡಿದ್ದು ಕೇಳಿಬಿಡುತ್ತದೋ ಎಂದು ಭಯಪಟ್ಟಿದ್ದಾವೆ.. ಈ ಭಯವೇ ಕೂತವರ ದಾಕ್ಷಿಣ್ಯವಾಗಿ ಮಾರ್ಪಟ್ಟೀದೆ. ಮುಖದಲ್ಲಿ ಯಾವ ಭಾವನೆಯೂ ಇಲ್ಲದೆ, ಮನೆಯಿಂದ ಬರುವಾಗ ಬಿಸಿ ಬಿಸಿ ಕಾದ ಇಸ್ತ್ರಿಪೆಟ್ಟಿಗೆಯಿಂದ ಮುಖಕ್ಕೆ ಇಸ್ತ್ರಿ ಹಾಕಿಕೊಂಡು ಬಂದವರಂತೆ ಕೂತುಬಿಟ್ಟಿದ್ದಾರೆ. ಎಫ್.ಎಮ್ ಮಾತ್ರ ತನಗೆ ಬೆಕಾದ ಹಾಡನ್ನು ತನ್ನ ಪಾಡಿಗೆ ತಾನು ಗುನುಗಿಕೊಳ್ಳುತ್ತಿದೆ. ಆರ್ ಜೆಗಳ ಧ್ವನಿಗಳು ಅಡಕೊತ್ತಿನಲ್ಲಿ ಸಿಕ್ಕಿಕೊಂಡ ಅಡಿಕೆಯಿಂದ ಮಧ್ಯೆ ಮಧ್ಯೆ ತೂರಿಬರುತ್ತಿವೆ. ಯಾವುದೇ ಭಾಷೆಯ ಯಾವುದೇ ಹಾಡು ಬಂದರೂ ಜನರದ್ದು ಒಂದೇ ಭಾವ. ಸ್ಥಿತಪ್ರಜ್ಞ ಗಂಭೀರವದನಗಳಿಂದ ಅಲಂಕೃತರಾದ ಪ್ರಯಾಣಿಕರು ಯಾವ ಸಂಗತಿಗಳು ಜರ್ಗಿದರೂ ತಾವಿರುವುದು ಹೀಗೇ ಎಂದು ಕುಳಿತ ರಸ್ತೆ ಬದಿಯ ವಿಗ್ರಹಗಳಿಗೆ ಉಪಮೆಯಾಗುತ್ತಾರೆ.


ಮುಂದಿನ ಸರ್ಕಲ್ಲಿನಲ್ಲಿ ಮತ್ತೆ ಸಿಗ್ನಲ್ಲು.. ಹಸಿರಿಂದ ಕೆಂಪಗಾಗುವ ಹಂತದಲ್ಲಿ.. ಬಸ್ಸಿನ ವೇಗೋತ್ಕರ್ಷ ಹೆಚ್ಚುತ್ತಿದೆ. ರೊಯ್ಯನೆ ಸರ್ಕಲ್ ದಾಟುತ್ತಿದ್ದಂತೆಯೇ ಎದುರಿಗೆ ಮೋಟರ್ ಬೈಕ್ ಸವಾರನೊಬ್ಬ ಅಡ್ಡ ಬಂದ.. ಬಸ್ಸಿಗೆ ಬಡಿದೇ ಬಿಟ್ಟ ಎಂಬಷ್ಟರಲ್ಲಿ ಹಾರಿಕೊಂಡ.. ಬಿದ್ದ.. ಬಸ್ಸಿನಲ್ಲಿ ಕೆಲವು ಜನ ಎದ್ದು ನಿಂತಿದ್ದಾರೆ.. ಗೋಡೆಗಳಂತಿದ್ದ ಕಿಟಕಿಯಲ್ಲಿ ಕಣ್ಣಿಟ್ಟಿದ್ದಾರೆ. ಬಿದ್ದವನ ಬಳಿ ಗುಂಪು ಸೇರಿತು.. ಬಿದ್ದವ ಈಗ ಏಳುತ್ತಿದ್ದಾನೆ.. ಬಸ್ ಬಳಿಗೇ ದುರುಗುಟ್ಟಿ ನೋಡುತ್ತಿದ್ದಾನೆ.. ಏನೋ ಕೂಗುತ್ತಿದ್ದಾನೆ.. ಸಿಟ್ಟಿನಲ್ಲಿ ತುಟಿಗಳು ಅದುರುತ್ತಿವೆ.. ಕೈ ಮೇಲೆತ್ತಿ ಬಸ್ ನಿಲ್ಲಿಸಲು ಕಿರುಚುತ್ತಾ ಬರುತ್ತಿದ್ದಾನೆ.. ಅವನು ಕೂಗಿದ್ದು ಮಾತ್ರ ಬಸ್ಸಿನಲ್ಲಿರಿವ ಯಾರಿಗೂ ಕೇಳುತ್ತಿಲ್ಲ.. ಬಯ್ಯುತ್ತಿರಬೇಕು ಅಂದುಕೊಂಡಿರಬೇಕು.. ಮೂಕಿ ಚಿತ್ರ ನೋಡಿದಂತೆ ಅವರವರ ಮನಸ್ಸಿಗೆ ಬಂದಂತೆ ಅಂದುಕೊಂಡು ಅಯ್ಯೋ ಪಾಪ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಡ್ರೈವರ್ ಮಾತ್ರ ಹೆದರಿಕೆಯಿಂದ ವೇಗವನ್ನು ಇನ್ನೂ ಹೆಚ್ಚಿಸುತ್ತಲೇ ಇದ್ದಾನೆ.. ಬಿದ್ದವ ಸಣ್ಣವನಾಗುತ್ತಾ ಆಗುತ್ತಾ ಕೊನೆಗೊಮ್ಮೆ ಮಾಯವಾಗುವ ಹೊತ್ತಿಗೆ ಬಸ್ಸು ದಿನವೂ ಹೊಗುವ ದಾರಿ ಬಿಟ್ಟು ಯಾವುದೋ ಒಳ ದಾರಿ ಹಿಡಿದು ನುಗ್ಗಿತ್ತು.


ಸ್ವಲ್ಪ ಮುಂದೆ ಹೋಗುವಷ್ಟರಲ್ಲಿ ಕೆಂಪು ಧ್ವಜ ಸಿಕ್ಕಿಸಿದ ಬೈಕುಗಳಲ್ಲಿ ಹಿಂಬಾಲಿಸುತ್ತ ಬಂದ ಹಲವರಲ್ಲಿ ಬಿದ್ದವನೂ ಇದ್ದಾನೆ!! ಚಾಲಕನ ಎದೆ ಧಸ್ ಎನ್ನುತ್ತದೆ. ಧಸ್ ಎಂದದ್ದು ಎಲ್ಲರಿಗೂ ಕೇಳಿದಂತೆ ಕುಳಿತವರೆಲ್ಲಾ ಕಂಗಾಲಾಗುತ್ತಾರೆ. ರೋಷಾವೇಷಗಳಿಂದ ತನ್ನನ್ನು ಬೀಳಿಸಿದ ಬಸ್ಸನ್ನು ಮುತ್ತಲು ಬರುವ ಉಮೇದಿಯಲ್ಲಿ ಅವನ ಮುಖ ಕೆಂಪಾಗಿದೆ. ಇಷ್ಟು ಹೊತ್ತು ತಟಸ್ಥವಾಗಿದ್ದ ಬಸ್ಸಿನ ಒಳಗಿನ ಲೋಕದಲ್ಲಿ ತಣ್ಣನೆಯ ಹೆದರಿಕೆಯ ಅಲೆಯೊಂದು ಎದ್ದು ಕೂತಿದೆ. ಅಕ್ಕ ಪಕ್ಕದವರ ಮುಖ ನೋಡಿ ಭಯವನ್ನೂ ಆತಂಕವನ್ನೂ ಹಸ್ತಾಂತರಿಸುತ್ತಾ ಅದರಲ್ಲೇ ನೆಮ್ಮದಿ ಕಂಡಂತೆಲ್ಲಾ ಆಗುವ ಭಾವನೆ ಎಲ್ಲರ ಮುಖವನ್ನು ಅಲಂಕರಿಸಿದೆ. ಬಸ್ಸಿನ ವೇಗವನ್ನು ಹೆಚ್ಚಿಸುತ್ತಾನೆ ಚಾಲಕ. ಗುಂಪು ಹಿಂಬಾಲಿಸುತ್ತಲೇ ಇದೆ. ಬಲಗಡೆಯ ಕ್ರಾಸಿನಲ್ಲಿ ಬಸ್ ತಿರುಗುತ್ತಿದ್ದಂತೆ ದೊಡ್ಡದೊಂದು ಕಲ್ಲು ಬಸ್ಸಿಗೆ ಬಡಿಯುತ್ತದೆ. ಗಾಜು ಪುಡಿಪುಡಿಯಾಗಿ ಕಲ್ಲು ಒಳನುಗ್ಗುತ್ತದೆ.. ಚಾಲಕ ಇನ್ನೂ ವೇಗ ಹೆಚ್ಚಿಸಿದ್ದಾನೆ.. ಗುಂಪು ನಿಧಾನವಾಗಿ ದೂರವಾಗುತ್ತಿದೆ.. ಬಿದ್ದ ಕಲ್ಲು ಬಸ್ಸಿನ ಒಳ ಜಗತ್ತಿನ ಪರಿಚಯವಿಲ್ಲದೆ ಸುಮ್ಮನೆ ಬಿದ್ದುಕೊಂಡಿದೆ.







ಕಲ್ಲು ಬಿದ್ದದ್ದೇ ತಡ ಇಷ್ಟೊತ್ತಿಲ್ಲದ ಹೊರ ಜಗತ್ತು ಒಡೆದ ಕಿಟಕಿಯಲ್ಲೇ ಒಳನುಗ್ಗುತ್ತದೆ.ಮತ್ತೆ ಆಫೀಸಿನ,ಫೈಲುಗಳ,ಬ್ಯಾಗುಗಳ,ಪೆನ್ನುಗಳ,ಟಿಫಿನ್ ಕ್ಯಾರಿಯರ್ ಗಳ ವಿಚಾರಗಳ ಆವರಣವನ್ನು ಛೇದಿಸಿ ಹೊರಗಿನ ಸದ್ದೆಲ್ಲವೂ ಒಳಗೆ ತುಂಬಿಕೊಳ್ಳುತ್ತಾ ಹೋಗುತ್ತದೆ. ’ಸಧ್ಯ ಕಲ್ಲು ಯಾರಿಗೂ ಬಡಿಯಲಿಲ್ಲ’ ಎಂದು ಸಮಾಧಾನದಿಂದ ಪಕ್ಕದವರ ಮುಖ ನೋಡುತ್ತಾರೆ. ’ಅರೆ ಇಷ್ಟೊತ್ತು ಇಲ್ಲಿ ಕೂತಿದ್ದು ನೀವೇನಾ,, ಗೊತ್ತೇ ಆಗಲಿಲ್ಲ’ ಎಂಬ ಭಾವನೆ ಇಬ್ಬರಲ್ಲೂ ಮೂಡುತ್ತದೆ. ಕೆಲವೊಬ್ಬರು ಮೊಬೈಲು ಕಿವಿಗಿಟ್ಟು ಜೋರಾಗಿ ಯಾರ ಜೊತೆಯೋ ನಡೆದ ಘಟನೆಯ ವಾರ್ತಾಪ್ರಸಾರ ನಡೆಸಿದ್ದಾರೆ.ಒಟ್ಟಿನಲ್ಲಿ ಯಾವುದೋ ವರ ಸಿಗುತ್ತಿರುವ ಹಾಗೆ ಪದೇ ಪದೇ ಆ ಒಡೆದ ಕಿಟಕಿ ಗಾಜನ್ನೇ ನೋಡುತ್ತಿದ್ದಾರೆ. ಪುಸ್ತಕಗಳಲ್ಲಿ ತಲೆ ಹುದುಗಿಸಿದವರೆಲ್ಲರೂ ಎಫ್.ಎಂ ಹಾಡಿಗೆ ತಲೆ ತೂಗುತ್ತಿದ್ದಾರೆ. ತಮ್ಮ ಬ್ಯಾಗುಗಳನ್ನು ಹೆಚ್ಚು ಒತ್ತಿಕೊಂಡು ನಿಂತಿದ್ದವರು ಕೂತವರ ಕೈಗೆ ಕೊಟ್ಟು ’ಸ್ವಲ್ಪ ಹಿಡ್ಕೊಳ್ಳಿ’ ಅಂದಿದ್ದಾರೆ. ಕುಳಿತವರು ’ಏನೋ ಆಗುತ್ತದೆ ಅಂದುಕೊಂಡಿದ್ದೆವು.. ಸದ್ಯ ಏನೂ ಆಗಲಿಲ್ಲ’ ಎನ್ನುತ್ತಾ ಬ್ಯಾಗು ಇರಿಸಿಕೊಂಡಿದ್ದಾರೆ. ಬ್ಯಾಗುಗಳ ಆತ್ಮೀಯತೆ ಅವರಿಗೂ ಇಷ್ಟವಾಗುತ್ತದೆ. ’ಯಾರೂ ಹೆದ್ರಬೇಡಿ.. ಏನೂ ಅಗಿಲ್ಲ’ ಎಂದು ಕಂಡಕ್ಟರ್ ಮಾತನ್ನು ಹಾರಿಸುವ ಯತ್ನದಲ್ಲಿದ್ದಾನೆ. ಆಗಲೇ ಕಂಡಕ್ಟರ ನೆರಮನೆಯ ಸಂಬಂಧಿಕನಂತೆ ಕಾಣುತ್ತದೆ. ವೇಗವನ್ನು ಹೆಚ್ಚಿಸುತ್ತಲೇ ಇದ್ದ ಚಾಲಕ ನೂರು ಮೀಟರ್ ಓಟಕ್ಕೆ ಮೊದಲು ಸೂಚನೆಗಾಗಿ ಕಾಯುತ್ತಿರುವವರಂತೆ ಮೈ ಬಗ್ಗಿಸಿ ಗಾಡಿ ಓಡಿಸುತ್ತಿದ್ದಾನೆ. ಬಸ್ಸು ಈಗ ಹಳೇ ಪರಿಚಯದ ಗೆಳೆಯನ ಮನೆಯಂತೆ ಕಾಣುತ್ತಿದೆ. ಆತಂಕ, ಗಾಬರಿ,ಕೋಪಗಳೆಲ್ಲಾ ಹೊಸ ಉಲ್ಲಾಸವಾಗಿ ನಗು ಬರುತ್ತಿದೆ. ಗಾಜು ಚೂರಾಗಿ ನಿರ್ಮಾಣವಾದ ಕಿಟಕಿಯಿಂದ ಸೂರ್ಯ ಬಿಸಿಲು ಕೋಲನ್ನು ನುಗ್ಗಿಸಿದ್ದಾನೆ. ಬಿಸಿಗಾಳಿ ಒಳಬರುತ್ತಿದೆ. ಅದರ ಬೆಚ್ಚನೆಯ ಅನುಭಾವಕ್ಕೆ ನೈಸರ್ಗಿಕ ಅನಿಲದ ಆಸ್ವಾದನೆಗೆ ಮುಖ ಕೊಟ್ಟವರು ಹಲವರು.


ಬಸ್ಸು ಕೊನೆಗೂ ತಿರುಗಿ ತಿರುಗಿ ತನ್ನ ಹಳೇ ಹಾದಿಗೆ ಬರುತ್ತದೆ. ದಾರಿಯನ್ನು ವೇಳೆಯಲ್ಲಿ ಅಳೆಯುವವರು ಹತ್ತು ನಿಮಿಷ ಲೇಟಾಯ್ತು ಅಂದಿದ್ದಾರೆ. ಆ ಕಿಡಿಗೇಡಿಗಳ ಗುಂಪು ದೂರಾಗಿರುವುದನ್ನು ಧೃಢಪಡಿಸಿಕೊಂಡ ಚಾಲಕ ನಿಧಾನವಾಗಿ ಸಮಚಿತ್ತಕ್ಕೆ ಮರಳುತ್ತಿದ್ದಾನೆ. ಮುಂದಿನ ಶ್ತಾಪಿನಲ್ಲಿ ಬಸ್ ನಿಲ್ಲಿಸಿ ಬಾಗಿಲು ತೆರೆಯುತ್ತಾನೆ.’ಟುಸ್’ ಎಂದ ಬಾಗಿಲುಗಳು ಈಗ ಮಹತ್ವವನ್ನು ಕಳೆದುಕೊಂಡಿವೆ. ಕುಳಿತವರು,ನಿಂತವರು,ಜೋತುಬಿದ್ದವರಿಗೆಲ್ಲಾ ಬೆಕಾದ ಹೊರಸಂಪರ್ಕ ಒಡೆದ ಕಿಟಕಿಯಿಂದಲೇ ಲಭ್ಯವಾಗಿದೆ. ಈಗ ಬಾಗಿಲ ಹೊರಗೆ ಸಿಮೆಂಟ್ ಚೀಲವನ್ನು ಹಿಡಿದ ಅಪ್ಪ, ಪುಟ್ಟ ಮಗನೊಡನೆ ನಿಂತಿದ್ದಾನೆ. ಗಾರೆ ಕೆಲಸಕ್ಕೆ ಬೆಕಾದ ಕೆಲವು ಪರಿಕರಗಳು ಚೀಲದ ಹರುಕು ಬದಿಯಿಂದ ಹೊರಗಿಣುಕುತ್ತಿವೆ. ’ಎಲೆಕ್ಟ್ರಾನಿಕ್ ಸಿಟಿ..? ಎಷ್ಟು?’ ಅಪ್ಪ ಕೇಳುತ್ತಾನೆ. ಮಗ ಒಳನುಗ್ಗಲು ಒಂದು ಕಾಲು ಫೂಟ್ ಬೋರ್ಡಿನ ಮೇಲೆ ಇಟ್ಟಾಗಿದೆ. ’ಇಪ್ಪತ್ತೈದು’ ಕಂಡಕ್ಟರ್ ಎನ್ನುವಷ್ಟರಲ್ಲೇ ಡ್ರೈವರ್ ಬಾಗಿಲು ಮುಚ್ಚಿದ್ದಾನೆ. ಅಪ್ಪ ಮಗನನ್ನು ಹೊರಗೆಳೆದುಕೊಳ್ಳುತ್ತಾನೆ. ಬಸ್ ವೇಗ ಗಳಿಸುತ್ತಿದೆ. ’ ಅದಕ್ಕೆ ಇಪ್ಪತ್ತೈದಂತೆ.. ಬೇರೆ ಬಸ್ಸಿಗೆ ಹೋಗೋಣ..’ ’ಇಲ್ಲಾ ಅಪ್ಪಾ.. ಇದೇ ಬಸ್ಸಿಗೆ ಹೋಗ್ಬೇಕು’ ಮಗು ಹಠಹಿಡಿದಂತೆ ಕಾಣುತ್ತಿದೆ.. ಅಪ್ಪ ಬರುತ್ತಿಲ್ಲ.. ಮಗನನ್ನೂ ಬಿಡುತ್ತಿಲ್ಲ. ಅಪ್ಪನ ಕೈಯಿಂದ ತಪ್ಪಿಸಿಕೊಂಡು ಬಸ್ ಹಿಂದೆಯೇ ಮಗ ಓಡಿ ಬರುತ್ತಿರುವುದನ್ನು ಬಸ್ಸಿನಲ್ಲಿ ಯಾರೋ ನೋಡಿದ್ದಾರೆ.. ಮತ್ತು ಎಲ್ಲರಿಗೂ ತೋರಿಸಿದ್ದಾರೆ. ’ನಾನೂ ಬರ್ತೀನಿ’ ಎಂದು ಕೂಗುತ್ತಾ ಬರುತ್ತಿರವ ಅವನನ್ನು ಬಾ ಬಾ ಎಂದು ಕೂಗುತ್ತಿದ್ದಾರೆ. ಅವನು ಕೈ ಮೇಲೆ ಮಾಡಿ ಬಸ್ಸನ್ನು ಸಮೀಪಿಸುತ್ತಿದ್ದಂತೆಯೇ ಜನ ಒಡಕು ಕಿಟಕಿಯಲ್ಲಿ ಕೈ ಹಾಕಿ ಅವನನ್ನು ಎತ್ತಿ ಒಳಕ್ಕೆಳೆದುಕೊಳ್ಳುತ್ತಾರೆ. ಬಸ್ಸಿನೊಳಗಿಂದಲೇ, ಅದೇ ರಂಧ್ರದಲ್ಲಿ ತಲೆ ಹೊರಗೆ ಹಾಕಿ ಅಪ್ಪನನ್ನೂ ಕರೆಯುತ್ತಿದ್ದಾನೆ. ನಡೆಯುತ್ತಿದ್ದ ಘಟನೆ ನೋಡಿ ದಂಗಾದ ಅಪ್ಪ ಈಗ ಬಸ್ಸಿನ ಹಿಂದೆಯೇ ಓಡಿ ಬರುತ್ತಿದ್ದಾನೆ...

Monday, June 7, 2010

ನಯನಯುಗ್ಮಗಳು

ಸುಬ್ರಹ್ಮಣ್ಯಪುರಂ ಅಂತ ತಮಿಳಿನಲ್ಲಿ ಒಂದು ಚಲನಚಿತ್ರವಿದೆ. ಆದರಲ್ಲಿ ಒಂದು ಹಾಡು ಇದೆ. ಚೆನ್ನಾಗಿದೆ. ಸಂಪದದಲ್ಲಿ ಸುಪ್ರೀತ್ ತೋರಿಸಿದ್ದು.


ಕೊಂಡಿಯನ್ನು ಕ್ಲಿಕ್ಕಿಸಿ ನೀವೂ ಕೇಳಿ :
http://www.youtube.com/watch?v=42StQLxlXFY&feature=player_embedded


ಅದರ ಭಾವಾನುವಾದ ಅದೆ ರಾಗದಲ್ಲಿ..

(ವಿ.ಸೂ: ನನಗೆ ತಮಿಳು ಬರುವುದಿಲ್ಲ. ಅದರ ಇಂಗ್ಲಿಷ್ ಅನುವಾದವನ್ನು ಓದಿ ಕನ್ನಡೀಕರಿಸಿದ್ದೇನಷ್ಟೇ..)


ನನ್ನ ಸೆಳೆವೆ ನೀ ನನ್ನ ಸೆಳೆವೆ
ಆ ಜೋಡಿ ಕಣ್ಣ ನೋಟದಿಂದ ಬಳಿಗೆಳೆವೆ
ಮಾಯವಾಗುವೆ ನೀ ಓಡಿಹೋಗುವೆ
ಆ ತುಂಟ ಮುದ್ದು ನಗುವಿನಿಂದ ದೂಡಿಹೋಗುವೆ

ಬಳಿ ಓಡಿ ಬಂದಿಹೆನು ನಾ ನಿನ್ನಾ ಧ್ವನಿಗೆ..
ಕ್ಷಣ ನೋಡಿ ನಿನ್ನ ಮುಖವಾ ಹೊರಟೇ ನನಗಿಷ್ಟೇ ಸಾಕೆಂದು... ಪ

ನನ್ನ ನಯನ ಜೊತೆ ನಿನ್ನ ನಯನ
ಸೇರಿ ಬಣ್ಣದಲ್ಲಿ ಮೂಡಿ ಒಂದು ಪ್ರೇಮಕವನ
ಸುದ್ದಿಯಿಲ್ಲವು ಯಾವ ಸದ್ದೂ ಇಲ್ಲವು
ಈಗ ಎರಡೂ ಕಣ್ಣು ಕತ್ತಲಲ್ಲೂ ಓದಬಲ್ಲವು ಪ

ಹಗಲೂ ಕಳೆದಂತ ಇರುಳೂ ಬರದಂತ ಸಂಜೆ ಹೊತ್ತಿನಲಿ ಸಿಗುವೆಯಾ?
ಸುಳಿವೂ ಇರದಂತ ಅಂತರ ಅಳೆವಂತ ಅಳತೆಯೀಗ ತುಸು ಕಡಿಮೆಯಾ?

ಕನಸಿಗೆ ಬೇಕಿದೆ ಗೆಳೆತನ
ಮನಸಿಗೆ ಧೈರ್ಯದ ಬಡತನ
ಪರಿಚಯವಿಲ್ಲದ ಈ ಪ್ರೇಮ ಹೊಸತನ ೧

ನನ್ನ ಸೆಳೆವೆ ನೀ ನನ್ನ ಸೆಳೆವೆ
ಆ ಜೋಡಿ ಕಣ್ಣ ನೋಟದಿಂದ ಬಳಿಗೆಳೆವೆ
ಮಾಯವಾಗುವೆ ನೀ ಓಡಿಹೋಗುವೆ
ಆ ತುಂಟ ಮುದ್ದು ನಗುವಿನಿಂದ ದೂಡಿಹೋಗುವೆ ಪ

ಗಾಳಿಯ ಹಿಡಿದಂತ ತೆರೆಯನು ಬಡಿದಂತ ಹೃದಯದ ಕವಾಟ ತೆರೆಸಿದೆ
ಕಾಯವೇ ಕಳೆದಂತ ನೀನಿಜ ಭಗವಂತ ನನ್ನೊಳು ನಿನ್ನನೆ ಬೆರೆಸಿದೆ

ದಿನವಿಡಿ ನಿನ್ನದೇ ಯೋಚನೆ
ಮುಗಿದಿದೆ ಸ್ವಂತದ ಭಾವನೆ
ಸಾವಲುಜೊತೆಯಿರುವೆ ಅದುವೇ ಅರಮನೆ ೨

ನನ್ನ ನಯನ ಜೊತೆ ನಿನ್ನ ನಯನ
ಸೇರಿ ಬಣ್ಣದಲ್ಲಿ ಮೂಡಿ ಒಂದು ಪ್ರೇಮಕವನ
ಸುದ್ದಿಯಿಲ್ಲವು ಯಾವ ಸದ್ದೂ ಇಲ್ಲವು
ಈಗ ಎರಡೂ ಕಣ್ಣು ಕತ್ತಲಲ್ಲೂ ಓದಬಲ್ಲವು

ಬಳಿ ಓಡಿ ಬಂದಿಹೆನು ನಾ ನಿನ್ನಾ ಧ್ವನಿಗೆ..
ಕ್ಷಣ ನೋಡಿ ನಿನ್ನ ಮುಖವಾ ಹೊರಟೇ ನನಗಿಷ್ಟೇ ಸಾಕೆಂದು... ಪ

ನನ್ನ ಸೆಳೆವೆ ನೀ ನನ್ನ ಸೆಳೆವೆ
ಆ ಜೋಡಿ ಕಣ್ಣ ನೋಟದಿಂದ ಬಳಿಗೆಳೆವೆ
ಮಾಯವಾಗುವೆ ನೀ ಓಡಿಹೋಗುವೆ
ಆ ತುಂಟ ಮುದ್ದು ನಗುವಿನಿಂದ ದೂಡಿಹೋಗುವೆ ಪ

Saturday, June 5, 2010

ಕರೆ

ಗೂಡಲ್ಲಿ ಮರಿಯಗಿ
ಬಾನಲ್ಲಿ ಗರಿಯಾಗಿ
ಕಾನಲ್ಲಿ ಝರಿಯಾಗಿ
ಗಿರಿ ಗಿರಿ ಗಿರಿ ಗಿರಿ ತಿರುಗುವ ಬಾ


ವೈಚಾರಿಕ ಗುಂಪು ಸಂತೆಲಿ ಸಾಧ್ಯತೆಗಳ ಸಂಪು ನಡೆದಿದೆ
ಗರಿಬಿಚ್ಚಿದ ಗುಬ್ಬಿ ಜೀವವು ಕದಮುಚ್ಚಿಯೆ ಒಳಗೆ ಮಲಗಿದೆ


ನೋಡುತ್ತಲೇ ಬೆರಗಾಗಿ
ಕಾಡುತ್ತಿರೋ ಗುರಿಯಾಗಿ
ಆಗಸದಿ ಸೆರೆಯಾಗಿ
ಮಿರಿ ಮಿರಿ ಮಿರಿ ಮಿರಿ ಮಿನುಗುವ ಬಾ


ಸುದ್ದಿಕಟ್ಟೆಯ ಮರವು ಕೂಡಾ ವಿದ್ಯಮಾನದ ಗುರುತು ಮರೆತಿದೆ
ಶಶಿಯ ವದನದ ಕಲೆಗಳಿಂದು ನಿದ್ದೆ ಮಾಡದೆ ಎದ್ದು ಕುಳಿತಿವೆ


ದೈವದತ್ತ ವರವಾಗಿ
ಭವಿತವ್ಯದ ಪರವಾಗಿ
ಕೊನೆಯಿಲ್ಲದ ಸಿರಿಯಾಗಿ
ಸರಿ ಸರಿ ಸರಿ ಸರಿ ಕರಗುವ ಬಾ

Wednesday, April 7, 2010

ನೀನಿಲ್ಲದೆ...



ಭಾರವಾಗಿದೆ ಭಾವಗೀತೆ

ರಾಮನಿಲ್ಲದೆ ನೊಂದ ಸೀತೆ

ವಿರಹದಲ್ಲಿ ವಿವರದೊಂದಿಗೆ ಹಾಡಿದಂತಿದೆ

ನಿನ್ನ ಸೇರುವ ದಿನದ ತನಕ

ಒಂಟಿ ಜೀವದ ಮನದ ತವಕ

ಕಡಲ ಯಾತ್ರೆಯ ನದೀಪಾತ್ರದ ಜಾಡಿನಂತಿದೆ

ಉರಿದು ಸುಡುತಿಹ ಇರದ ಬೇನೆ

ದಿವಸ ಕೊಲ್ಲುವ ಕನಸ ಸೇನೆ

ಧೂಳು ಎಬ್ಬಿಸಿ ದಾಳಿ ಮಾಡುವ ನಿಟ್ಟಿನಲ್ಲಿದೆ

ಕಾಲವಾಯಿತು ಸೇರಿ ನಾವು

ಮುಳ್ಳು ಗಿಡದಲಿ ನಿಂತ ಹೂವು

ಕಂಪ ಬೀರದೆ ರಂಪ ಮಾಡುತ ಸಿಟ್ಟಿನಲ್ಲಿದೆ

ಎದೆಯ ಸಾಗರದಲೆಯು ಉಕ್ಕಿ

ಮಾರುವೇಷದ ಬಯಕೆ ಹಕ್ಕಿ

ಜಾಗ ಕೊಟ್ಟರೆ ಗೂಡು ಕಟ್ಟುವ ಹಂತದಲ್ಲಿದೆ

ಎಂದು ಎಲ್ಲಿ ನಮ್ಮ ಭೇಟಿ?

ನಿನ್ನ ಗೀತೆಗೆ ನನ್ನ ಧಾಟಿ

ಕಾದು ಕುಳಿತ ಪ್ರೇಮಗೀತೆ ಕಂಠದಲ್ಲಿದೆ


Thursday, February 18, 2010

ಕಣ್ಣಿನ ಶಬ್ದ


ನೋಡು ಅಲ್ಲಿ ಒಂದು ಕನಸಿನ
ಕಳೇಬರವ ಹೂಳಲಾಗಿದೆ
ಮೋಡ ಚೆಲ್ಲಿ ಇಂದು ಬಿರುಸಿನ
ಮಳೇಬರುವ ವೇಳೆಯಾಗಿದೆ

ಬಿದ್ದ ರಭಸಕೆ
ಎದ್ದು ಕೂತು
ಸುದ್ದಿ ಮಾಡುವುದೇ ಈ ಸ್ವಪ್ನ?

ಖಾಲಿಪುಟದಲಿ ಗೀತೆಯೊಂದನು
ಬರೆದು ಬರೆದು ಅಳಿಸಲಾಗಿದೆ
ಬಾನಿನಂಚಲಿ ನೋಡುತಿದ್ದೆನು
ಕವನವೊಂದು ಮಿಂಚಿ ಹೋಗಿದೆ

ಗೀಚಿದ ಸಾಲಿನ
ಸೂಚಿತ ಅರ್ಥಕೆ
ಈಚೆಗೆ ಬರಬಹುದೇ ಈ ರಾಗ?

ಶಶಿಯ ವದನದ ಕಲೆಯ ಕಾಂತಿಯು
ಮೂಕಮನದಲಿ ಸ್ತಬ್ಧವಾಗಿದೆ
ಋಷಿಯ ಮೂಲದ ಮೂಲೆಯಲ್ಲಿ
ಕರಿಯ ಗುಡುಗಿನ ಶಬ್ಧವಾಗಿದೆ

ಕೇಳದ ಸಿಡಿಲಿಗೆ
ಏಳುವ ಅಣಬೆಯ
ಬಾಳನು ತೋರುವುದೇ ಈ ಭಾವ?

ವರ್ಣರಂಜಿತ ಮನದ ಪುಟಗಳ
ತಿಕ್ಕಿ ತಿಕ್ಕಿ ತೊಳೆಯಲಾಗಿದೆ
ವರುಣನಿಂಗಿತ ಅರಿತ ಮೇಘವು
ಬಿಕ್ಕಿ ಬಿಕ್ಕಿ ಅಳುವ ಹಾಗಿದೆ

ಸಣ್ಣ ಹನಿಯೂ
ಬಣ್ಣವಾಗಿ
ಕಣ್ಣ ಸೇರುವುದೇ ಈ ಚಿತ್ರ?

ಸ್ವಪ್ನದ ಲೋಕದ ರಾಗದ ಭಾವಕೆ ಕಣ್ಣಿನ ಶಬ್ದಕೆ

ಮಳೆಯಾಗಿದೆ
ಮಿಂಚಾಗಿದೆ
ಗುಡುಗಾಗಿದೆ..

ಅಂತೂ ಇಳೆ ಹಸಿಯಾಗಿದೆ, ಜೀವ ಖುಷಿಯಾಗಿದೆ.

Monday, January 11, 2010

ಕುರಿಯಾಗುವುದೆಂದರೆ....


ನಿಜವಾದ ಸಾಪೇಕ್ಷದಲ್ಲಿ
ಸುಳ್ಳೆಲ್ಲವೂ
ಸತ್ಯ
ನಿರಪೇಕ್ಷ ಗೆದ್ದರೂ
ಸಾಪೇಕ್ಷಕ್ಕೇ ಜಯ
ಏಕೆಂದರೆ ನಿರಪೇಕ್ಷ
ಗೆದ್ದಿರುವುದೂ
ಸಾಪೇಕ್ಷತೆಯಲ್ಲೇ..

ಗೀತಾಚಾರ್ಯ ಹೇಳಿದ್ದೂ ಅದನ್ನೇ.
ಅಪ್ರಿಯವಾದ
ಸತ್ಯವೆಲ್ಲಾ
ಸುಳ್ಳು
ಬಹುಜನ ಪ್ರಿಯ ಸುಳ್ಳಿನಲ್ಲೇ
ಸತ್ಯದ ಜನನ

***

ಬೆಳಗ್ಗೆ ಬಂದ ಮಿಥ್ಯ
ಕರೆಯೊಂದಕ್ಕೆ
ಮರುಳಾಗಿ
ಕುರಿಯಾಗುವುದು
ಸುಳ್ಳಲ್ಲ.
ಆ ಮಿಥ್ಯಕ್ಕೆ ಹಚ್ಚಿದ ಬಣ್ಣ
ಕದಡುವವರೆಗೂ
ಸುಳ್ಳೂ ಸತ್ಯವೇ..

ಕದಡಿದ ನಂತರ
ಓಕುಳಿ.

***

ಕರೆ ಮಾಡಿ ಕುರಿಮಾಡಿದವನ
ಮಿಥ್ಯ ಸಂತೋಷಕ್ಕಿಂತ
ಕುರಿಯಾದವನ
ಬಣ್ಣಗಳೇ
ಹೆಚ್ಚು
ವರ್ಣಮಯ

ಕುರಿಮಾಡಿದವನ
ಕ್ಷಮೆಯಾಚನೆಗಿಂತ
ಆ ದಿನದ
ಸತ್ಯವಾದ
ಮಿಥ್ಯ ಸಂಭ್ರಮದ
ಕುರಿತಾಗಿ
ಕುರಿಯಾದವ
ಅರ್ಪಿಸಿದ ಧನ್ಯವಾದಕ್ಕೇ ಹೆಚ್ಚು
ಬೆಲೆ.

Wednesday, December 2, 2009

ಪ್ರೇಮ ಪ್ರಕಾಶನ

ನಿನ್ನ ಮನಸಿನ ಪುರವಣಿಗೆ ನಾನು ತಾನೇ ಸಂಪಾದಕ
ಕಣ್ಣ ನೋಟದ ಬರವಣಿಗೆ ಭಾರೀ ಮಧುರ ಮೋಹಕ

ಭಾವ ಪುಟದ ಬಲತುದಿಗೆಲ್ಲಾ ನಿನ್ನ ಹೆಸರ ಅಂಕಿತ
ಸಣ್ಣ ಹಟದ ಪ್ರತಿಕೊನೆಯಲ್ಲೂ ಚಂದ ನಗುವ ಇಂಗಿತ

ಪರಿವಿಡಿಯ ಭಾಗಗಳೆಲ್ಲಾ ಬರೀ ಕನಸಿಗೆ ಮೀಸಲು
ಇರುಳಿಡಿಯ ರಾಗಗಳೆಲ್ಲಾ ನನ್ನ ನಿದಿರೆಗೆ ಕಾವಲು

ಒಂದುಕಡೆಯೂ ಪ್ರಯೋಗವಿಲ್ಲ ಬಳಸಿದಂತ ಪದಗಳ
ಇನ್ನೂಕೂಡಾ ಸುಯೋಗವಿಲ್ಲ ನನ್ನ ಹೃದಯ ಕಳವಳ

ಸುದ್ದಿಯೆಲ್ಲಾ ಮಾಡುವುದಿದೆ, ಮೊದಲು ಇದರ ಹಂಚಿಕೆ
ಸಧ್ಯದಲ್ಲೇ ಬಿಡುಗಡೆಗಿದೆ ಈ ಅಧರದಂಚಿನ ಸಂಚಿಕೆ

ಹಂಪಿ ತೇರಿನ ಚಕ್ರಗಳ ಅಡಿಯಲ್ಲಿ ಹುಲ್ಲು ಬೆಳೆಯಿಸುತ್ತಿದ್ದಾರೆ..

ಮಲ್ಲೆಶ್ವರಂ ಕಡೆಯಿಂದ ಮೆಜೆಸ್ಟಿಕ್ ಬರುವ ಸಮಯ.. ಬೆ.ಮ.ಸಾಂಸಂ ಎಂದು ಬೆನ್ನಿಗೆ ಬರೆಯಿಸಿಕೊಂಡ ನೀಲಿಬಣ್ಣದ ಹೊಸ ಬಸ್ಸಿನಲ್ಲಿಹೋಗುವ ಸಂಜೆಯ ಹೊತ್ತು.. ಅರ್ಧ ಟಿಕೆಟ್ಟನ್ನು ಜಗಳ ಮಾಡಿ ಪಡೆದ ಅಪ್ಪನ ಪಕ್ಕದಲ್ಲಿ ಮಗು ಖುಷಿಯಲ್ಲಿ ಕುಳಿತಿದೆ. ಅಪ್ಪ ಜಗಳ ಮಾಡಿ ವಿಜಯಿಯಾದ ಉತ್ಸಾಹದಲ್ಲಿ ಕಿಡಕಿಯ ಹೊರಗೆ ನಿಂತು ನಿಂತು ಇಣುಕುತ್ತದೆ..ಅವರ ಹಿಂದಿನ ಸೀಟಿನಲ್ಲಿ ಸುಮ್ಮನೆ ಹೊರಗೆ ಕಣ್ಣು ಎಸೆದು ತಮಗೆ ಇದ್ಯಾವುದೂ ಸಂಬಂಧವಿಲ್ಲದವರಂತೆ ಕಿವಿಯಲ್ಲಿ ಮೊಬೈಲಿನ ತಂತಿ ಸಿಕ್ಕಿಸಿ ಯಾರೋ ಕುಳಿತಿದ್ದಾರೆ....ಥಟಕ್ಕನೆ ಮಗು ಕಿರುಚುತ್ತದೆ.. "ಅಪ್ಪಾ ಅಲ್ನೋಡು.. ಆನೆ".. ಹಿಂದಿದ್ದವನು ಆಗಷ್ಟೆ ನಿದ್ದೆಯಿಂದ ಎಚ್ಚರ ಆದಂತೆ, ತಪಸ್ಸಿನ ಧ್ಯಾನ ಭಂಗವಾದಂತೆ "ಎಲ್ಲಪ್ಪ ಆನೆ" ಅಂತ ಕಣ್ಣರಳಿಸುತ್ತಾನೆ"..


ಅರೆ ಹೌದು.. ಆನೆ.. ಅರೆ ಪಕ್ಕದಲ್ಲಿ ಜಿಂಕೆ.. ನವಿಲು.. ಏನದು.. ಅಲ್ಲೇ ರಸ್ತೆ ಬದಿಯಲ್ಲಿ ಶಿಲಾಬಾಲಿಕೆ ನಿಂತಿದ್ದಾಳೆ.. ಕನ್ನಡಿಯಲ್ಲಿ ಮುಖ ನೋಡುತ್ತಾ ಮೈ ಮರೆತಿದ್ದಾಳೆ. ಪಕ್ಕದಲ್ಲೇ ಹಸಿರು ವನ.. ಅದರೊಳಗೆ ಒಬ್ಬ ರಾಕ್ಷಸನ ಮುಖ.. ಅವನ ಕಣ್ಣಿನ ಕಪ್ಪು ಕಾಡಿಗೆಯಲ್ಲಿ ವಿಚಿತ್ರ ಚಿತ್ತಾರ.. ಅವನು ಭಯ ಹುಟ್ಟಿಸುವುದಿಲ್ಲ. ಮಗು ರಾಕ್ಷಸನನ್ನು ನೋಡಿ ಬೆಚ್ಚುವುದಿಲ್ಲ.. ಸ್ವಲ್ಪ ಮುಂದೆ ಯಕ್ಷಗಾನದ ಕಿರೀಟ.. ನೋಡುಗರಿಗೆ ಅರ್ಥವಾಗಲಿ ಎಂದು ಅದರ ಕೆಳಗೆ ಯಕ್ಷಗಾನ ಎಂದು ಬರೆಯಲಾಗಿದೆ. ಅದನ್ನು ಓದಲು ಮಗು ಅಪ್ಪನ ಸಹಾಯ ಪಡೆದಿದೆ..ಚೂಪು ಚೊಂಚಿನ ಹಕ್ಕಿಯೊಂದು ಕುಳಿತ ಕೊಂಬೆಯ ಮರ ಕಾಂಪೌಂಡು ಮುಗಿದ ಕಾರಣದಿಂದ ಅರ್ಧಕ್ಕೆ ನಿಂತುಬಿಟ್ಟಿದೆ. ಅದಕ್ಕೇನೂ ಬೇಸರ ಮಾಡಿಕೊಳ್ಳದೆ ಸಂಗೀತಗಾರನೊಬ್ಬ ವೀಣೆ ನುಡಿಸುತ್ತಲೇ ಇದ್ದಾನೆ. ಅವನ ಮುಖದಲ್ಲಿನ ಗಂಭೀರತೆ ನೋಡಿದ ನಾಟ್ಯರಾಣಿ ಹೆಜ್ಜೆ ತಪ್ಪಿದಂತೆ ಕಾಣುತ್ತಾಳೆ. ಅಪ್ಪ ಮಗನ ಎದುರು ಸೀಟಿನಲ್ಲಿ ಕೂತ ದಪ್ಪ ಕನ್ನಡಕದ ಯುವಕನೊಬ್ಬ ’ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಹುದುಗಿಸಿದ ಮುಖ ತೆಗೆದು ಆಚೀಚೆ ನೋಡಿ ಮತ್ತದರಲ್ಲೇ ಹುದುಗಿಸಿದ್ದಾನೆ.

This wall on a prominent road in Bangalore being painted by artists as part of BBMP’s drive to beautify the city. Photo: K. Gopinathan

ಹಾದಿ ಪಕ್ಕದ ಭಿತ್ತಿಗಳಲ್ಲಿ ಪತ್ರಗಳಿಲ್ಲ.. ಚಿತ್ರಗಳಿವೆ.. ಬೆಂಗಳೂರನ್ನು ಬೃಹತ್ಗೊಳಿಸಲು ಹೊರಟಿರುವ ಮಹಾನಗರಪಾಲಿಕೆ ಮೆಜೆಸ್ಟಿಕ್ಕಿನ ರಸ್ತೆಯ ಇಕ್ಕೆಲಗಳಲ್ಲಿ ಆರ್ಟ್ ಗ್ಯಾಲರಿಯೊಂದರ ನಿರ್ಮಾಣದ ಹಂತದಲ್ಲಿದೆ. ಕೆಂಪೇಗೌಡ ಬಸ್ ನಿಲ್ದಾಣ ತಲುಪುವ ಹಲವು ಹಾದಿಗಳ ಇಬ್ಬದಿಯ ಗೋಡೆಗಳ ಮೇಲೆ ಸೃಜನಾತ್ಮಕ ಕಲಾಕೃತಿಗಳನ್ನು ಬಣ್ಣಗಳಿಂದ ಬರೆಯಿಸಲಾಗಿದೆ.. ಬರೆಯಿಸಲಾಗುತ್ತಿದೆ. ಮೊದಲೆಲ್ಲಾ ಸುಣ್ಣ ಬಳಿದಿದ್ದ ಗೋಡೆಗಳು ಉಗುಳುವವರ,ಅಂಟಿಸುವವರ, ಗೀಚುವವರ ಕಾರಣ ಅಂದಗೆಟ್ಟಿದ್ದವು.. ಈಗ ಸ್ವಚ್ಛತೆಯ ಜೊತೆಗೆ ಸುಂದರತೆಯೂ ಇರಲೆಂದು ಪಾಲಿಕೆ ಈ ಕಾರ್ಯ ಕೈಗೊಂಡಿದೆ. ಹೊರಗಿನಿಂದ ಅಪರೂಪಕ್ಕೆ ಬರುವವರಿಗೆ ’ಹಿಂದಿನ ಸಲ ಬಂದಾಗ ಇದಿರಲಿಲ್ಲ’ ಅನಿಸಿದರೆ, ಬೆಂಗಳೂರಲ್ಲೇ ಇದ್ದು ಆ ಕಡೆ ಹೋದವರಿಗೆ ’ಏನೋ ಒಂದ್ ಒಳ್ಳೆ ಕೆಲ್ಸ ಆಗ್ತಾ ಇದೆ’ ಅನಿಸುತ್ತದೆ. ಉದ್ಯಾನ ನಗರಿಯ ಅಂದ ಸವಿಯಲು ಬಂದವರಿಗೆ ರಸ್ತೆಯ ಎರಡೂ ಬದಿಗಳು ಸ್ವಾಗತಿಸುತ್ತವೆ.. ಸಚಿತ್ರವಾಗಿ...


ಆ ಗ್ಯಾಲರಿಗಳಲ್ಲಿ ಕರ್ನಾಟಕವಿದೆ.. ಕನ್ನಡವಿದೆ.. (ಕೆಲವೊಂದು ಕಡೆ ಸರಿಯಾಗಿಲ್ಲ!)..ಏನೇನೂ ಸಂಬಂಧವಿರದ ಹಲವು ಚಿತ್ರಗಳು ಅಕ್ಕ ಪಕ್ಕದಲ್ಲಿ ಕೂತು ಹರಟೆ ಹೊಡೆಯುತ್ತವೆ. ರಾಜಸ್ಥಾನದ ಒಂಟೆಗಳೂ ಮಂಡ್ಯದ ಕುರಿಮರಿಯೂ ಒಂದೇ ಕೆರೆಯ ನೀರು ಕುಡಿಯುತ್ತವೆ.. ಸರಣಿ ಚಿತ್ರಗಳು ರಸ್ತೆಯ ಪಕ್ಕದಲ್ಲಿ ಮಾರಾಟಕ್ಕೆ ಕೂತವರ ಆಸೆ ಕಂಗಳಂತೆ ನಮ್ಮನ್ನೇ ನೋಡುತ್ತವೆ.. ಈಗ ಒಣ ಗೋಡೆಗಳಲ್ಲಿ ಸಂತೋಷವಿದೆ.. ಪಯಣಿಗರಲ್ಲಿ, ದಾರಿಹೋಕರಲ್ಲಿ ಇವೆಲ್ಲಾ ಇಷ್ಟುದಿನ ಎಲ್ಲಿದ್ದವು ಎಂಬ ಕುತೂಹಲವಿದೆ... ಕಾರಿನ ಕಪ್ಪು ಗಾಜಿನಲ್ಲಿ ನೋಡುವ ಜನಕ್ಕೆ ಟೂರಿಗೆ ಹೋಗಿ ಇವನ್ನೆಲ್ಲಾ ನೋಡಿ ಮಜಾ ಮಾಡಲು ರಜೆ ಮಂಜೂರು ಮಾಡದಿರುವ ಮ್ಯಾನೇಜರ್ ಮೆಲೆ ಸಿಟ್ಟಿದೆ.. ಇವನ್ನೆಲ್ಲಾ ಇಂಟರ್ ನೆಟ್ ನಲ್ಲಿ ಒಂದು ಕ್ಲಿಕ್ಕಿನಲ್ಲಿ ನೋಡಬಹುದೆಂಬ ಹುಂಬತನವಿದೆ..


ಚಿತ್ರಗಳು ಮುಗಿಯುತ್ತಲೆ ಇಲ್ಲ.. ಮಗು ಕಣ್ಣುಗಳನ್ನು ದೊಡ್ಡದು ಮಾಡುತ್ತಲೇ ಇದೆ.. "ಅಪ್ಪಾ ಅದು ಆ ನೀಲಿ ಹಸಿರು ಬಣ್ಣದ ಹಕ್ಕಿ ಹೆಸರೇನು ?" ಜೀವನದಲ್ಲಿ ಕಾಗೆಯೊಂದನ್ನೇ ನೋಡಿ ಜಗತ್ತೇ ಕಪ್ಪು ಬಿಳುಪು ಎಂಬ ನಿರ್ಧಾರಕ್ಕೆ ಬಂದವನ ಹಾಗೆ ಮುಖ ಮಾಡಿ " ಯಾವ್ದೋ ಕಾಡು ಹಕ್ಕಿ" ಎನ್ನುತ್ತಾನೆ.. ಮಗು ಆ ಕಾಡು ಹಕ್ಕಿಯ ಮರೆತು ಜೋಡಿ ಚಿರತೆಗಳ ಚಿತ್ರದಲ್ಲಿ ಎರಡು ಬಾಲ ಎಲ್ಲಿದೆ ಎಂದು ಹುಡುಕತೊಡಗುತ್ತದೆ.. ಆ ಪ್ರಶ್ನೆ ಕೇಳಿಸಿಕೊಂಡ ಡ್ರೈವರ್ ಹಿಂದಿನ ಸೀಟಿನ ಹಿಂದಿನ ಇನ್ನೊಬ್ಬ ಈಗ ಆ ಹಕ್ಕಿ ಹೆಸರೇನಿರಬಹುದು ಎಂದು ಯೋಚಿಸುತ್ತಿದ್ದಾನೆ.. ಗೊತ್ತಾಗುವುದಿಲ್ಲ.. ನಾಳೆ ಆಫೀಸಿನಲ್ಲಿ ಗೂಗಲ್ ಮಾಡಿದರಾಯ್ತು ಎಂದು ಸಮಾಧಾನ ಮಾಡಿಕೊಳ್ಳುತಾನೆ ..ಕಂಡಕ್ಟರ್ ಹಿಂದಿನ ಬಸ್ ಸ್ಟಾಪಿನಲ್ಲಿ ಸರಿಯಾಗಿ ಸೀಟಿ ಊದಲಿಲ್ಲ ಎಂದು ಹೆಂಗಸೊಬ್ಬಳು ಗೊಣಗುತ್ತಾ ಮುಂದಿನ ಸ್ಟಾಪಿನಲ್ಲಿ ಇಳಿಯುತ್ತಾಳೆ. ಅವಳ ಕಂಕುಳಲ್ಲಿದ್ದ ಮಗನೂ ಭಿತ್ತಿಚಿತ್ರಗಳನ್ನು ನೋಡುವುದರಲ್ಲಿ ಮಗ್ನನಾಗಿದ್ದಾನೆ


ಮೊದಲು ಅಲ್ಲೆಲ್ಲಾ ಬೇರೆಯೇ ಇತ್ತು. ಯಾರ್ಯಾರದ್ದೋ ಹುಟ್ಟುಹಬ್ಬಕ್ಕೆ ಯಾರ್ಯಾರೋ ಶುಭಾಶಯ ಕೋರಿದ ವಿವರಗಳು.. ಅಜ್ಞಾತ ಚಿತ್ರದ ಅಜ್ಞಾತ ನಾಯಕಿಯ ಭಂಗಿಗಳಿದ್ದವು.. ಅಖಿಲ ಒಕ್ಕೂಟಗಳ ಸಕಲ ಕಾರ್ಯಕಲಾಪಗಳು, ಧರಣಿಗಳು ಗೋಡೆ ತುಂಬಿದ್ದವು.. ಹೊಸದಾಗಿ ಬಂದವರಿಗೆ ಯಾವುದೋ ಕಾಲೇಜಿನ ಕೀಲಿ ಕಳೆದು ಹೋದ ಹಳೇ ನೋಟೀಸ್ ಬೋರ್ಡಿನ ಹಾಗೆ ಕಾಣುತಿದ್ದವು.. ’ಇಲ್ಲಿ ಭಿತ್ತಿಪತ್ರ ಅಂಟಿಸಿದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು’ ಎಂಬ ವಾಕ್ಯವೇ ಸಾಕಾಗಿತ್ತು ಗೋಡೆಯ ಅಂದ ಹಾಳು ಮಾಡಲು.. ಕೆಲವಂತೂ ದೇವರ ಚಿತ್ರಗಳನ್ನು ಹೊತ್ತು ’ಹಾದಿಮೂತ್ರಿಕ’ರ ವಿರುದ್ಧ ಹೋರಾಡುತ್ತಿದ್ದವು. ಈಗ ಅದೇ ಗೋಡೆಗಳು ಹೊಸ ಮದುವೆಯಾದವರಂತೆ ಫಳಗುಡುತ್ತಿವೆ.. ತಮ್ಮ ಬಣ್ಣಗಳನ್ನು ನೋಡಿ ತಾವೇ ನಾಚಿವೆ.. ಹೋಗಿಬರುವವರೆಲ್ಲಾ ತಮ್ಮನ್ನು ನೋಡಲಿ ಎಂದು ರಸ್ತೆಯ ಅಂಚಿನವರೆಗೆ ಎದೆ ಉಬ್ಬಿಸಿ ನಿಂತಿವೆ.. ಅವುಗಳಿಗೀಗ ಪಾಲಕರಿಗೆ ತೇರಿನಲ್ಲಿ ಕಳೆದು ಹೋದ ಮಗ ಮನೆಗೆ ಬಂದಷ್ಟೇ ಸಂತಸವಾಗಿದೆ.


ಗೋಡೆಯ ಮೇಲಿನ ಚಿತ್ರಗಳು ಸ್ಥಬ್ದವಾಗಿದ್ದರೂ ನಮ್ಮೊಡನೆ ಅವು ಚಲಿಸುತ್ತಿರುವಂತೆ ಭಾಸವಾಗುತ್ತಿದೆ. ಚಿತ್ರಮಂದಿರದ ಸಿನಿಮಾ ರೀಲುಗಳಂತೆ ಗಿರಿ ಗಿರಿ ತಿರುಗುವಂತೆ ಕಾಣುತ್ತಿವೆ. ಈಗಷ್ಟೇ ಕೆತ್ತಿಟ್ಟಿರುವ ಪ್ರತಿಮೆಗಳ ಹೊಳಾಪಿದೆ ಅವಕ್ಕೆ.. ಕೆಲವು ಅಪೂರ್ಣ ಚಿತ್ರಗಳು ಕಲಾವಿದನಿಗಾಗಿ ಕಾಯುತ್ತಿರುವಂತೆ ಕಂಡರೆ ಇನ್ನೂ ಕೆಲವು ತಮ್ಮಷ್ಟಕ್ಕೆ ತಾವೇ ಪೂರ್ಣಗೊಳ್ಳುವ ಲಕ್ಷಣಗಳನ್ನು ತೋರುತ್ತಿವೆ... ಈಗ ಬಸ್ಸು ಮೇಲ್ಸೇತುವೆ ಹತ್ತುತ್ತಿದೆ.. ಅರೆ ಇಲ್ಲಿ ಮತ್ತೆ ಚಿತ್ರಗಳು.. ಗೋಲಗುಮ್ಮಟದ ಪಕ್ಕದಲ್ಲೇ ಮೈಸೂರು, ಐಹೊಳೆಯ ಪಕ್ಕದಲ್ಲಿ ನಾಗರ ಹೊಳೆ.. ಹುಲಿಯ ಪಕ್ಕದಲ್ಲೇ ಗಿಳಿ.. ಮಗುವಿನ ಜೊತೆ ಇನ್ನೂ ಹಲವರು ಕಿಡಕಿಯ ಹೊರಗೆ ಇಣುಕುತ್ತಿದ್ದಾರೆ.. ಸರಿಯಾಗಿ ಕಾಣದ ಒಂದಿಬ್ಬರು ಕತ್ತುದ್ದ ಮಾಡುತ್ತಾ ಕಿಡಕಿಯ ಬಳಿ ಕೂತಿದ್ದವರ ಮೈಮೇಲೆ ಬಿದ್ದು ಬೈಸಿಕೊಂಡಿದ್ದಾರೆ.. ಈಗ ಕನ್ನಡದ ಕವಿಗಳು ಮದುವೆ ಮನೆಯ ಪಂಕ್ತಿ ಊಟಕ್ಕೆ ಕೂತವರಂತೆ ಸಾಲಿನಲ್ಲಿ ಆಸೀನರಾಗಿದ್ದಾರೆ. ಬೇಂದ್ರೆ ಅಜ್ಜನ ನೆರೆತ ಕಿವಿಯ ಕೂದಲುಗಳು ಕಾರ್ನಾಡರ ಮುಖಕ್ಕೆ ಕಚಗುಳಿಯಿಡುತ್ತಿವೆ.. ಇದ್ದಕ್ಕಿದ್ದಂತೆ ಅಲ್ಲಿ ಸಿದ್ಧಿ ಜನಾಂಗದ ಮಹಿಳೊಯೊಬ್ಬಳ ಆರ್ತ ಮುಖ ಪ್ರತ್ಯಕ್ಷವಾಗುತ್ತದೆ.. ರೈತನೊಬ್ಬ ಮೇಕೆಗೆ ಹುಲ್ಲು ತಿನಿಸುವ ದೃಶ್ಯ, ಜನಪದ ವಾದ್ಯವೊಂದರ ಗುಂಗಿನಲ್ಲಿ ಹೊಳೆಬದಿ ಕೂತ ಹುಡುಗನೊಬ್ಬನ ನೋಟ, ಸುಗ್ಗಿ ಕುಣಿತದ ಹಳದಿ ಕೆಂಪು ತುರಾಯಿಗಳ ತುರುಬುಗಳು ’ನಮ್ಮನ್ನು ಕಾಪಾಡಿ’ ಎಂದು ಗೋಗರೆಯುತ್ತವೆ. ಒಟ್ಟಿನಲ್ಲಿ ಫ್ಲೈ ಓವರ್ ದಾಟುವಷ್ಟರಲ್ಲಿ ಬೇರೆ ಬೇರೆ ಕಿರುಚಿತ್ರಗಳ ತುಣುಕು ಪ್ರದರ್ಶನವೊಂದರಲ್ಲಿ ಭಾಗವಹಿಸಿ ಬಂದ ಅನುಭವವಾಗುತ್ತದೆ.


ಹಂಪಿ ತೇರಿನ ಚಕ್ರಗಳ ಅಡಿಯಲ್ಲಿ ಹುಲ್ಲು ಬೆಳೆಯಿಸುತ್ತಿದ್ದಾರೆ.. ಅಲ್ಲಿ ಕನಸಿನ ಹಂಬಲವಿದೆ.. ಹೊಸ ಹುರುಪಿದೆ.. ಕಲ್ಲಾವಿದನ ಕಣ್ಣಿನ ಬಣ್ಣಗಳವು.. ಅವರ ಬದುಕಿನ ರೇಖೆಗಳು.. ಅಲ್ಲಿ ಸುಂದರ ನಗರದ ಕಲ್ಪನೆಯಿದೆ... ಸಾಮ್ರಾಜ್ಯಗಳ ವೈಭವವಿದೆ.. ತೇರಿನ ಗಲಾಟೆಯಿದೆ.. ಹಸಿರಿದೆ.. ಆ ಹಸಿರಲ್ಲಿ ಉಸಿರಾಡುವ ನಾವಿದ್ದೇವೆ.. ಬದುಕಿನ ಚಕ್ರದಡಿಯ ಗೊಂದಲಗಳಲ್ಲಿ ಕೊಸರಾಡುತ್ತಿದ್ದೇವೆ.. ಇನ್ನೂ ಉಸಿರಾಡುತ್ತಿದ್ದೇವೆ.. ಉಸಿರು ಅಮರವಾಗಲೆಂಬ ಪುಟ್ಟ ಆಶಯವಿದೆ...ಆ ಬಣ್ಣಗಳಲ್ಲಿ ಸುವಾಸನೆ ಇದೆ.. ಪೇಂಟರ್ ನ ಹಳೇ ಬ್ರಷ್ಶಿನ ಜುಮುರಿದೆ... ಅವು ಅಂಟಿಗೊಳ್ಳುತ್ತವೆ... ಗೋಡೆಯ ಬಿರುಕನ್ನೂ ತಾಜಮಹಲಿನ ಕಮ್ಮಾನು ಮಾಡುವ ಶಕ್ತಿಯಿದೆ.. ಅವು ನಮ್ಮದೇ ಆಕೃತಿಗಳು..ನಮ್ಮದೇ ಗುಣವಿದೆ ಅವಕ್ಕೆ.. ಅವು ನಮ್ಮ ಪ್ರತಿಬಿಂಬಗಳಾಗುತ್ತವೆ.. ಗೋಡೆಗಳು ಕನ್ನಡಿಗಳಾಗುತ್ತವೆ.... .. ಈ ಚಿತ್ರಗಳು ಜೀವಂತ ರೂಪಕಗಳು..


ಎಲ್ಲರೂ ಬಸ್ಸು ಇಳಿಯುವ ಆತುರದಲ್ಲಿದ್ದಾರೆ.. ಓಡುವ ಬಸ್ಸಿನಿಂದ ಇಳಿದು ಮುಗ್ಗರಿಸಿದಂತಾಗಿ, ಅಲ್ಲೇ ಸುಧಾರಿಸಿಕೊಂಡು ಯಾರಾದರೂ ನೋಡಿಬಿಟ್ಟರೋ ಎಂದು ಸುತ್ತ ಮುತ್ತ ಕಣ್ಣಾಯಿಸಿ ತಮ್ಮ ಪಾಡಿಗೆ ಹೋಗುತ್ತಿದ್ದಾರೆ.. ಅವರೆಲ್ಲರೂ ಇನ್ಯಾವುದೋ ಬಸ್ ಹತ್ತಿ ಮನೆಗೆ ಹೋಗುವ ತರಾತುರಿಯಲ್ಲಿದ್ದಾರೆ.. ಹಾಗೆ ಹೋಗುವಾಗ ಮತ್ತೆ ಈ ಚಿತ್ರಸಂತೆಯಲ್ಲಿ ಓಡಾಡುವ ಖುಷಿಯಲ್ಲಿದ್ದಾರೆ.. ಕೆಲವರು ಟಿಕೆಟಿನ ಹಿಂಬದಿಯ ಕಂಡಕ್ಟರ ಬ್ರಹ್ಮ ಲಿಪಿ ಓದಲಾಗದೆ ಅವನು ಕೊಟ್ಟಷ್ಟು ಕಿಸೆಯಲ್ಲಿ ಹಾಕಿಕೊಂಡು ಬಡಬಡ ನಡೆಯುತ್ತಿದ್ದಾರೆ. ಅದನ್ನೂ ಮರೆತ ಇನ್ನೂ ಕೆಲವರು ಹತ್ತಿರದ ಎ.ಟಿ.ಎಂ ಗೆ ನುಗ್ಗಿ ಮಿನಿ ಸ್ಟೇಟ್ ಮೆಂಟ್ ತೆಗೆದು ಪದೇ ಪದೇ ಓದುತ್ತಿದ್ದಾರೆ.. ಅಪ್ಪ ಮಗ ಇಬ್ಬರೂ ಓವರ್ ಬ್ರಿಡ್ಜಿನ ಮೆಟ್ಟಿಲೇರುತ್ತಿದ್ದಾರೆ. ಕೆಂಪು ಲಂಗ ತೊಟ್ಟ ಹೆಂಗಸೊಬ್ಬಳು ಧಡಾರನೆ ಅವರ ಮುಂದೆ ಬಿದ್ದು ಒದ್ದಾಡುತ್ತಾಳೆ.. ’ಅಯ್ಯಾ ಅಮ್ಮಾ’ ಎಂದು ಕೈ ಮುಂದೆ ಮಾಡುತ್ತಾಳೆ.. ಬ್ರಿಡ್ಜಿನ ಆ ತುದಿಗೆ ಕಲಾವಿದನೊಬ್ಬ ಈಗಷ್ಟೇ ಬಂದು ಕೂತು ಹೊಸ ಚಿತ್ರದ ರಚನೆಯಲ್ಲಿದ್ದಾನೆ.. ಅವನ ಕುಂಚಗಳಲ್ಲಿ ಈಗ ಆ ಹೆಂಗಸಿನ ಮುಖ ಮೂಡಬಹುದೆಂಬ ಆಸೆಯಿಂದ ಆ ಪೋರ ಅರ್ಧದಾರಿಯಲ್ಲೇ ನಿಂತು ಮಿಕಿ ಮಿಕಿ ನೋಡುತ್ತಿದ್ದಾನೆ.

Saturday, April 25, 2009

ಗಡ್ಡ

ಸ್ಲೀಪರ್ ಕೋಚಿನ
ಅರ್ಧ ತೆರೆದ ಕಿಟಕಿಯಲ್ಲಿ
ಬಿಕ್ಕಳಿಸುವ ನಕ್ಷತ್ರಗಳು ಬಸ್ಸಿನಷ್ಟೇ
ವೇಗವಾಗಿ ಬರುತ್ತಿವೆ..

ಪಕ್ಕದ ಕರೀ ಟೀ-ಶರ್ಟಿನ,
ಇನ್ನೂ ಗಡ್ಡ ಸರಿಯಾಗಿ ಬರದ
ಮುಖದ
ಮೇಲೆ ಗುಮಾನಿ
ನನ್ನ
ಜೀನ್ಸ್ ಪ್ಯಾಂಟಿನ ಜೇಬಲ್ಲಿದ್ದ ಪರ್ಸ್
ಅಂಗಿ ಕಿಸೆಗೆ ಬರುವಷ್ಟು

ಅವನ ಹೆಡ್ ಫೋನಿನ
ಧ್ವನಿ ಬೇಡ ಬೇಡವೆಂದರೂ ಕಿವಿಗೆ
ಬಡಿದು
ಅಲವರಿಕೆಯಾಗುತ್ತಿದೆ, ಯಾವುದೋ
ಹಾಳು ಪದ್ಯ

ಗಾಳಿಗೆಂದು ಸರಿಸಿದ
ಕಿಟಕಿಯ ಕೆಂಪು ಕರ್ಟನ್
ಬಿಳೀ ಟ್ಯೂಬ್ ಲೈಟ್ಗಳ
ಬೆಳಕು ಹೀರಿ ವಾತಾವರಣವನ್ನು
ಉಗ್ರವಾಗಿಸಿದೆ...

ಊಟಕ್ಕೆ ನಿಲ್ಲಿಸಿದ
ಬಸ್ಸಿನಿಂದಿಳಿದ ಅವನ
ಸೀಟನ್ನು
ಪದೇ ಪದೇ ನೋಡುತ್ತಿದ್ದೆ.
ಅವನ ಬ್ಯಾಗು, ಒಂದು ಕರ್ಚೀಪು
ಒಂದು ಬಿಸ್ಲೇರಿ ಬಾಟಲಿ

ಮತ್ತೆ ಕಾಲು ನೀಡುವಾಗ
ತಾಗಿದ ಅವನ ಬೆರಳು
ಸುಮಾರು ದಿನವಾದರೂ
ಕತ್ತರಿಸದ ಅವನ ಬೆರಲನ್ನು
ಪರಿಚಯಿಸಿತು..

ನನ್ನ ದೊಡ್ಡ
ಬ್ಯಾಗಿನ ಮೇಲೆ, ಅಡಿಡಾಸ್ ಶೂಗಳ
ಮೇಲೆ ಕಣ್ಣಿಟ್ಟೇ
ರೊಯ್ಯನೆ ಒಳಬರುವ ಗಾಇಗೆ ಕಿವಿ
ಮುಚ್ಚಿದೆ..

ಬೆಳಗಾಯಿತು..
ಅವನೆದ್ದ..
ನಾನಲ್ಲೇ ಇದ್ದೆ..
ಅವನ ಸೀಟಿನಿಂದ
ಐನೂರರ ನೋಟೆತ್ತಿಕೊಂಡಿದ್ದು
ಅದರಲ್ಲಿರುವ ಗಾಂಧೀಜಿ
ಫೋಟೋ ನೋಡೀ ಮಾತ್ರ..

ತೇರಿಗೆಂದು ಊರಿಗೆ ಹೊರಟ
ನನಗೆ ತೇರಿನಲ್ಲಿ
ಎಷ್ಟೋ ಜನ ಸಿಕ್ಕರು..
ಅವನೂ ಸಿಗಬಹುದು..
ಈಗ ಗಡ್ಡ ಬಂದಿರಬಹುದು..
ಅದು ನನಗೆ ಚುಚ್ಚಬಹುದು..

Wednesday, April 8, 2009

ಅರ್ಥ

ನಾಗಪ್ಪನ ಬಾಲ್ಯವೇನೂ ರೋಚಕತೆಗಳಿಂದ ಕೂಡಿರದಿದ್ದರೂ ನಿರಸವೇನೂ ಆಗಿರಲಿಲ್ಲ. ಶಾಲೆಗೆ ಹೋಗುವ ಸಂದರ್ಭಗಳೇ ಸೃಷ್ಟಿಯಾಗದ ಆ ಕಾಲದಲ್ಲಿ, ದಿನವೂ ಹಾಲು ಕೊಡಲು ಮಾಸ್ತರ ಮನೆಗೆ ಹೋಗುತ್ತಿದ್ದ ನಾಗಪ್ಪ ಮುಚ್ಚಳದ ಅಂಚಿನಿಂದ ಹಾಲುಚೆಲ್ಲದಂತೆ ಹಾಲಿನ ಉಗ್ಗವನ್ನು ಹಿಡಿದುಕೊಂಡು ಹೋಗುವುದೇ ತನ್ನ ಪ್ರತಿಭೆ ಎಂದುಕೊಂಡು ಬಿಗುತ್ತಿದ್ದ. ಮಾಸ್ತರರೂ ಹೆಚ್ಚೇನೂಹೇಳದೆ ತಂದ ಹಾಲು ಸರಿ ಇದೆಯೋ ಗಮನಿಸಿ ಉಗ್ಗ ತೊಳೆದು ಕೊಟ್ಟಾಗ ಅದನ್ನು ವಾಪಸ್ ತೆಗೆದುಕೊಂಡು ಹೋಗಿ ಅಮ್ಮನ ಕೈಮುಟ್ಟಿಸಿದರೆ ಮತ್ತೆ ದಿನವಿಡೀ ನಾಗಪ್ಪ ಏನೂ ಮಾಡುತ್ತಿರಲಿಲ್ಲ. ಮಾಸ್ತರರ ಮನೆಗೆ ನಿತ್ಯವೂ ಹೋಗುತ್ತಿದ್ದ ನಾಗಪ್ಪ, ಮಾಸ್ತರಬಳಿಯಿದ್ದ ಗಡಿಯಾರದ ನೋಡಿ, ಗಂಟೆ ನೋಡುವುದನ್ನು ಕಲಿಯಬೇಕು ಅಂತ ಮಾಸ್ತರ ಬಳಿ ದುಂಬಾಲು ಬಿದ್ದ. ' ಗಂಟೆನೋಡಲು ಬಂದರೆ ಮಾತ್ರ ಈ ಸಲದ ತೇರಿನಲ್ಲಿ ವಾಚು ' ಅಂತ ಅಪ್ಪ ಹೇಳಿದ ಮಾತುಗಳು ಇದಕ್ಕೆ ಕಾರಣವಾದರೂ ಮಾಸ್ತರರಮನೆ ಗಡಿಯಾರ ಪ್ರೇರಣೆಯಾಯಿತು. ಗಡಿಯಾರದಲ್ಲಿ ಎರಡು ಮುಳ್ಳುಗಳನ್ನು ಬಿಟ್ಟರೆ ಉಳಿದ ಸಂಖ್ಯೆಗಳ್ಯಾವುದನ್ನೂಗುರುತಿಸಲು ಬಾರದ ನಾಗಪ್ಪನಿಗೆ ಗಂಟೆ ನೋಡುವುದನ್ನು ಕಲಿತಿದ್ದು ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಇದಾದ ವಾರದೊಳಗೆಮಾಸ್ತರರ ಬಳಿ ಬಂದು ಅವನು 'ಮಾಸ್ತರರೇ, ನಮ್ಮ ಒಡೆಯರ ಮನೆ ಗಡಿಯಾರದಲ್ಲಿ ಇರೂದು ನಾಲ್ಕೇ ಅಂಕಿ .. ೧೨.. ೩.. ೬.. ಮತ್ತೆ ೯... ನಿಮ್ಮನೆಲ್ಯಾಕೆ ಅಷ್ಟೆಲ್ಲಾ ಅದೆ?' ಅಂತ ಕೇಳಿಯೇ ಬಿಟ್ಟ.. ಇಂತಹ ಪ್ರಶ್ನೆಯನ್ನು ನಿರೀಕ್ಷಿಸಿರದ ಮಾಸ್ತರರುಗೊಂದಲಕ್ಕೊಳಗಾದದ್ದನ್ನು ತೋರಗೊಡದೆ ' ಅದೆಲ್ಲಾ ನಂಗೊತ್ತಿಲ್ಲ ... ನಾನು ತ್ರಿಕಾಲಜ್ಞಾನಿ ಅಲ್ಲ .. ನನ್ನ ತಲೆ ತಿನ್ಬೇಡ ' ಅಂದುಬಿಟ್ಟರು. ಮಾಸ್ತರರಿಗೆ ಗೊತ್ತಿಲ್ಲದದ್ದೆನನ್ನೋ ತಾನು ಕೇಳಿಬಿಟ್ಟೆ ಎಂದುಕೊಂಡು ನಾಗಪ್ಪನಿಗೆ ಖುಷಿಯಾಗಿ ಮಾಸ್ತರರ ಮೇಲಿದ್ದಅಭಿಮಾನವೂ ಒಂದು ಸ್ವಲ್ಪ ಕಡಿಮೆಯಾಗಿ ಏನು ಮಾಡಬೇಕೆಂದು ತಿಳಿಯದೆ ಚಡಪಡಿಸಿಬಿಟ್ಟ . ಅದಾದ ಮೇಲೆ ತ್ರಿಕಾಲ ಜ್ಞಾನಅಂದರೇನು ಎಂಬ ಪ್ರಶ್ನೆ ಹೊಸತಾಯಿತಾದರೂ , ಮಾಸ್ತರರ ಮನೆಯ ಗಡಿಯಾರಕ್ಕೆ ದಿನದ ಸಮಯ ಜಾಸ್ತಿ ಯಾಕೆ..? ಅಂತಮಾತ್ರ ಅರ್ಥವಾಗಲಿಲ್ಲ.

Tuesday, April 7, 2009

ವಿಯೋಗ

ಗಿಡಮರಗಳ ನಡುವೆಲ್ಲೋ ಚಿಲಿಪಿಲಿಗಳನ್ನು ಕೇಳುತ್ತಾ ಮನೆಕಡೆ ಹೋಗುತ್ತಿದ್ದ ನಾಗಪ್ಪ ತನ್ನವರ ಬಗ್ಗೆ ತನ್ನ ಮನೆಯವರ ಬಗ್ಗೆ ಯೋಚಿಸತೊಡಗಿದ.. ನಾಗಪ್ಪನಿಗೆ ಸತ್ತ ಹೆಂಡತಿಯ ನೆನಪು ಅಷ್ಟೇನೂ ಕಾಡದಿದ್ದರೂ,ಶಾಲೆಯ ಮೂರನೇ ಕ್ಲಾಸಿನ ಹಾಜರಿ ಪುಸ್ತಕದಲ್ಲಿ ಮಾತ್ರ ಸಿಗುವ ತನ್ನ ಮಗನ ಕುರಿತು ಅಗತ್ಯಕ್ಕಿಂತ ಹೆಚ್ಚೇ ಯೋಚಿಸುತ್ತಿರುತ್ತಿದ್ದ.ಶಾಲೆ ತಪ್ಪಿಸುವುದು ಮೊದಮೊದಲು ಬಾಲಿಶವೆಂದುಕೊಂಡರೂ ಈಗೀಗ ಸೋಮಣ್ಣನ ಚಾ ಅಂಗಡಿಯ ಮುಂದೆ ಆಕಾಶ ದಿಟ್ಟಿಸಿತ್ತಾ ಗುಮ್ಮನಂತೆ ಕುಳಿತಿರುತ್ತಿದ್ದ ಮಗನ ಬಗ್ಗೆ ಸಿಟ್ಟು ಬರುತ್ತಿತ್ತು.ಹೇಳುವಷ್ಟೂ ಹೇಳಾಗಿತ್ತು. ನಿನ್ನೆ ಯಾವುದೋ ಶಕ್ತಿ ಆವೇಶವಾದಂತೆ ಮಗನಿಗೆ ಯದ್ವಾ ತದ್ವಾ ಬೈದು ಮನೆಯ ಹೊರಗೇ ರಾತ್ರಿ ಕಳೆವಂತೆ ಮಾಡಿದ್ದ. ಒಂದೂ ಮಾತಾಡದೇ ಮಗನೂ ಹೊರಗೇ ಮಲಗಿದ್ದು ವಿಶೇಷವಾಗಿ ಕಂಡಿತಾದರೂ, ಅಪ್ಪನ ಎದುರು ಉಸಿರೆತ್ತದ ಮಗನ ಗುಣ ಸಮಾಧಾನ ಮಾಡಿತ್ತು. ಲೋಕದ ಜಂಜಾಟಗಳನ್ನೆಲ್ಲಾ ಬಿಟ್ಟು ಸನ್ಯಾಸಿಯಾಗುವ ಬುದ್ಧಿ ಬಂದಂತೆ ಆಡುವ ಆ ಚಿಕ್ಕ ವಯಸ್ಸಿನ ಮಗನ ಬಗ್ಗೆ ಸ್ವಲ್ಪ ಭಯ ಹುಟ್ಟಿದ್ದು ಆಗಲೇ...ಅದಾದ ಮೇಲೆ ಅಪಶಕುನಗಳು ನಡೆದಿದ್ದೇ ಹೆಚ್ಚೋ ಅಥವಾ ನಡೆದ ಘಟನೆಗಳಿಗೆಲ್ಲ ವಿಚಿತ್ರ ಅರ್ಥ ಕಲ್ಪಿಸುವ ವಿಚಾರಗಳು ಬಂದಿದ್ದು ಹೆಚ್ಚೋ ನಾಗಪ್ಪನಿಗೆ ಅರ್ಥವಾಗದೆ ಚಡಪಡಿಸಿದ.ಈ ರೀತಿಯೇ ಮುಂದುವರಿದರೆ ಊರು ಕಾಯುವ ಮಾಸ್ತಿ ಗುಡಿಗೆ ಹೋಗಿ ಹೇಳಿಕೆ ಮಾಡಿಕೊಳ್ಳಬೇಕು ಅಂದುಕೊಂಡ. ಅಲ್ಲೇ ಮಠ ಮಾಡಿಕೊಂಡು ಊರನ್ನು ಹರಸುತ್ತಿರುವ ಸುಕುಮಾರೇಂದ್ರ ಸ್ವಾಮೀಜಿಗಳ ಮುಖ ಜ್ಞಾಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಂತೆಯೇ ಎಲ್ಲೋ ಗೂಗೆ ಕೂಗಿದಂತಾಗಿ, ಮಗನಿಗಾಗಿ ತಂದಿದ್ದ ಭಜೆ ಪೊಟ್ಟಣವನ್ನು ಎದೆಗವುಚಿಕೊಂಡ.

Tuesday, March 17, 2009

ನೆರಳು

ತನ್ನ ಹಿಂದೆ ಬರುತ್ತಿರುವುದು ನಾಯಿಯೋ ಬೆಕ್ಕೋ ಎಂದು ಕತ್ತಲಲ್ಲಿ ಕಾಣದೇ, ಮುಂದೆ ಹೋಗುವ ಆಕೃತಿ ಯಾವುದು ಎಂದು ಗುರುತಿಸಲಾಗದೇ ಆ ಹಿಂದಿರುವ ಪ್ರಾಣಿಯೂ ಹೀಗೆಯೇ ಯೋಚಿಸುತ್ತಿರಬಹುದೆಂದು ಭಾವಿಸಿ ನಾಗಪ್ಪ ಬಿರಬಿರನೆ ಮನೆ ಕಡೆ ಹೆಜ್ಜೆ ಹಾಕುತ್ತಿದ್ದ. ತನ್ನ ಹಾಗೆಯೇ ಇನ್ನೊಂದು ಪ್ರಾಣಿ ತನ್ನೊಡನೆ ಇದೆ ಎಂಬ ಧೈರ್ಯವೇ ಎಂದಿಂಗಿಂತ ಹೆಚ್ಚಿನ ವೇಗಕ್ಕೆ ಕಾರಣವಾಗಿತ್ತು. ಆಕ್ರಮಣ ಮಾಡುವ ಬಯಕೆಯಿದ್ದರೆ ಆ ಪ್ರಾಣಿ ಇಷ್ಟರೊಳಗಾಗಿ ತನ್ನ ಮೇಲೋ ಅಥವಾ ಮಗನಿಗಾಗಿ ಬರುವಾಗ ಕಟ್ಟಿಸಿಕೊಂಡು ತಂದ ಭಜೆಯ ಪರಿಮಳಕ್ಕೆ ಕೈ ಚೀಲದ ಮೇಲೋ ಮುಗಿಬೀಳಬಹುದಾಗಿತ್ತು. ಅಥವಾ ಬೆಳಗಿಂದ ಸಂತೆಯಲ್ಲಿ ಮೂಲಂಗಿ ಮಾರುತ್ತಾ ಕುಳಿತಿದ್ದರಿಂದ ಮೈಗಂಟಿಕೊಂಡ ಅದರ ವಾಸನೆಗೋ, ಇಲ್ಲ ಜಿಡ್ಡು ಜಿಡ್ಡಾದ ಮೈಯಿಂದ ಹರಿದು ಬರುತ್ತಿರುವ ಬೆವರಿನ ವಾಸನೆಗೋ ಹತ್ತಿರ ಬರಲೂ ಹೆದರಿರಬೇಕು ಎಂದಂದುಕೊಳ್ಳುತ್ತಾ ಕಂಕುಳೆತ್ತಿ ಮೂಸಿದ. ವಾಕರಿಕೆ ಬಂದಂತಾಗಿ ತನ್ನ ಮೇಲೇ ಅಸಹ್ಯ ಪಟ್ಟುಕೊಳ್ಳುತ್ತಾ ನಕ್ಕ. ಅಷ್ಟರಲ್ಲಿ ಕಾಲಿಗೆ ಏನೋ ತಗಲಿದಂತಾಗಿ ಹೆದರಿಕೆ ರೋಷಾವೇಷಕ್ಕೆ ತಿರುಗಿ, ಛಂಗನೆ ಪಕ್ಕಕ್ಕೆ ಜಿಗಿದು ದೊಡ್ಡ ಕಲ್ಲೆತ್ತಿಕೊಂಡು ಕಾಲ ಬುಡಕ್ಕೆ ಕೈಯಾಡಿಸಿ, ಯಾವುದೋ ಪ್ರಾಣಿ ಸಿಕ್ಕಂತಾಗಿ ಅದನ್ನು ಹಿಡಿದು ಜಜ್ಜಿ ಜಜ್ಜಿ ಅಪ್ಪಚ್ಚಿ ಮಾಡಿದ..

Friday, March 13, 2009

ವರ್ಣ

ಬೆಳಿಗ್ಗೆಯಿಂದ ಬಿಳಿ ಬಿಳೀ ಮೂಲಂಗಿಗಳನ್ನು ಮಾರುತ್ತ ಕುಳಿತಿದ್ದ ನಾಗಪ್ಪ ಸಂಜೆ ಹೊತ್ತಿಗೆ ಸುಸ್ತಾದಂತಾದರೂ, ಕೊನೆಗುಳಿದ ನಾಲ್ಕನ್ನು ಮಾರಿಯೇ ಹೋಗುವುದೆಂದು ನಿರ್ಧರಿಸಿದ್ದ. ಜನ ತನ್ನ ಬಳಿ ಸುಳಿಯದೇ ಇರುವುದನ್ನು ಗಮನಿಸಿ ನಿರಾಶೆಯಿಂದ ಮೂಲಂಗಿಗಳನ್ನು ದಿಟ್ಟಿಸಿದ. ಸಂತೆ ಪೇಟೆಯ ಧೂಳು ಮೆತ್ತಿಕೊಂಡಂತೆ ಕಂಡಿದ್ದರಿಂದ 'ಉಫ್' ಎಂದು ಊದಿನೋಡಿದ. ಮೂಲಂಗಿಗಳನ್ನು ತನ್ನ ಪಂಚೆಯಿಂದ ಒರೆಸಿದ.ಧೂಳು ಹೋಗಲಿಲ್ಲ. ಕೈಯಲ್ಲಿ ಉಜ್ಜಿದ. ಕುಡಿಯಲೆಂದು ಪಕ್ಕದಲ್ಲಿದ್ದ ತರಕಾರಿಯವ ತಂದಿಟ್ಟುಕೊಂಡಿದ್ದ ನೀರಿಂದ ತೊಳೆದ. ಆಗಲೂ ಧೂಳು ಹೋಗಲಿಲ್ಲ. ತನ್ನ ಕಣ್ಣುಗಳನ್ನೂ ತೊಳೆದುಕೊಂಡು ನೋಡಿದ. ಪಕ್ಕದ ಅಂಗಡಿಯಲ್ಲಿದ್ದ ಮೂಲಂಗಿಗಳನ್ನು ನೋಡಿದ.. ಅವು ಬೆಳ್ಳಗೇ ಇದ್ದವು.. .ಯಾವುದೋ ಶಕ್ತಿ ತನ್ನ ಹಿಂದೆ ನನಗೆ ಕಾಣದೇ ಬಂದು ನಿಂತಂತೆ ಭಾಸವಾಯಿತು.ಹಿಂತಿರುಗಲೂ ಭಯವಾಯಿತು. ದೈನ್ಯನಾಗಿ ಆಕಾಶಮುಖಿಯಾಗಿ ಬಾಯ್ತೆರೆದ. ಸೂರ್ಯನೂ ಕೆಂಪಗಾಗಿ ನಗುತ್ತಿದ್ದ.

Saturday, January 31, 2009

ರಾತ್ರಿ, ನೀನು ಮತ್ತು ನಾನು

ಅಗಣಿತ ನಕ್ಷತ್ರ
ಸಮೂಹಗಳ
ನಡುವೆಯೂ ಹೊಳೆಯುವ ನಿನ್ನ
ಕಣ್ಣುಗಳು
ರಾತ್ರಿಯಾದಂತೆ ರೆಪ್ಪೆಯನ್ನು ಹೊದ್ದು ಯಾಕೆ ಮಲಗುತ್ತವೆ?

ಅದೇ ಕಾರಣದಿಂದ ಆ
ನಕ್ಷತ್ರಗಳು
ಇನ್ನೂ ಜೋರಾಗಿ ಮಿನುಗುತ್ತಿವೆ..

ಅವು ಹಗಲಲ್ಲಿ ನಿನ್ನ ಮುಂದೆ
ಬರಲಾಗದ
ಹೇಡಿಗಳು...

ಬೆಳ್ಳಿ ಚಂದ್ರ
ತನ್ನ ಪ್ರತಿಬಿಂಬವನ್ನು
ನಿನ್ನ ಮುಖದಲ್ಲಿ ಕಾಣಲು ಪ್ರಯತ್ನಿಸುತ್ತಿದ್ದಂತೆ
ಆ ಹತ್ತಿಯ ಮೋಡಗಳು ಅವನ್ನನ್ನು ಆವರಿಸಿಬಿಡುತ್ತವೆ..

ಆ ಮೋಡಗಳಿಗೇನು
ಕೊಟ್ಟಿರುವೆ
ನಿನ್ನ ಕಾಯಲು?

ಮೋಡಗಳಿಗೆ
ಲಂಚ
ಕೊಡುತ್ತಿದ್ದ
ಚಂದ್ರ ಸಿಕ್ಕಿಬಿದ್ದು ಜೈಲಲ್ಲಿ
ಊಟವಿಲ್ಲದೆ
ದಿನವೂ ಸಣ್ಣಗಾಗುತ್ತಿದ್ದಾನೆ..

ರಾತ್ರಿಯೆಲ್ಲಾ ಮೈಯೆಲ್ಲಾ
ಕೊರೆಯುವ ಮೂಡಣದ ಚಳಿಗಾಳಿ
ನಿನ್ನ ಕಂಡೊಡನೆ
ಯಾಕೆ ಹಿತವಾಗಿ ಬೀಸುತ್ತದೆ?
ಆ ನಿನ್ನ
ಮುಂಗುರುಳಿಗೆ
ಮುತ್ತಿಕ್ಕುತ್ತಾ...

ನೀನು ಎದ್ದೇಳಬಾರದು ಎಂದಂತೆ
ನನ್ನ ಬಳಿಬಂದು
ನಿನ್ನಿಂದಾಗದು
ಎಂದು
ಹೀಯಾಳಿಸುತ್ತಿದೆ

ನಿದ್ರೆಯಿಲ್ಲದೆ
ಒದ್ದಾಡುತ್ತಿದ್ದ
ನಾನು
ಸಿಟ್ಟು ಬಂದು
ಈ ರಾತ್ರಿ
ನಾನೇನು ಮಾಡುತ್ತಿರುವೆ ಗೊತ್ತೇ?

ನಿನ್ನ
ಮನದ
ಮನೆಯ ಬಳಿಬಂದು
ಬಾಗಿಲು ಬಡಿಯುತ್ತಿರುವೆ
ಕದ
ತೆರೆಯಲಾರೆಯಾ..?