Wednesday, December 2, 2009

ಹಂಪಿ ತೇರಿನ ಚಕ್ರಗಳ ಅಡಿಯಲ್ಲಿ ಹುಲ್ಲು ಬೆಳೆಯಿಸುತ್ತಿದ್ದಾರೆ..

ಮಲ್ಲೆಶ್ವರಂ ಕಡೆಯಿಂದ ಮೆಜೆಸ್ಟಿಕ್ ಬರುವ ಸಮಯ.. ಬೆ.ಮ.ಸಾಂಸಂ ಎಂದು ಬೆನ್ನಿಗೆ ಬರೆಯಿಸಿಕೊಂಡ ನೀಲಿಬಣ್ಣದ ಹೊಸ ಬಸ್ಸಿನಲ್ಲಿಹೋಗುವ ಸಂಜೆಯ ಹೊತ್ತು.. ಅರ್ಧ ಟಿಕೆಟ್ಟನ್ನು ಜಗಳ ಮಾಡಿ ಪಡೆದ ಅಪ್ಪನ ಪಕ್ಕದಲ್ಲಿ ಮಗು ಖುಷಿಯಲ್ಲಿ ಕುಳಿತಿದೆ. ಅಪ್ಪ ಜಗಳ ಮಾಡಿ ವಿಜಯಿಯಾದ ಉತ್ಸಾಹದಲ್ಲಿ ಕಿಡಕಿಯ ಹೊರಗೆ ನಿಂತು ನಿಂತು ಇಣುಕುತ್ತದೆ..ಅವರ ಹಿಂದಿನ ಸೀಟಿನಲ್ಲಿ ಸುಮ್ಮನೆ ಹೊರಗೆ ಕಣ್ಣು ಎಸೆದು ತಮಗೆ ಇದ್ಯಾವುದೂ ಸಂಬಂಧವಿಲ್ಲದವರಂತೆ ಕಿವಿಯಲ್ಲಿ ಮೊಬೈಲಿನ ತಂತಿ ಸಿಕ್ಕಿಸಿ ಯಾರೋ ಕುಳಿತಿದ್ದಾರೆ....ಥಟಕ್ಕನೆ ಮಗು ಕಿರುಚುತ್ತದೆ.. "ಅಪ್ಪಾ ಅಲ್ನೋಡು.. ಆನೆ".. ಹಿಂದಿದ್ದವನು ಆಗಷ್ಟೆ ನಿದ್ದೆಯಿಂದ ಎಚ್ಚರ ಆದಂತೆ, ತಪಸ್ಸಿನ ಧ್ಯಾನ ಭಂಗವಾದಂತೆ "ಎಲ್ಲಪ್ಪ ಆನೆ" ಅಂತ ಕಣ್ಣರಳಿಸುತ್ತಾನೆ"..


ಅರೆ ಹೌದು.. ಆನೆ.. ಅರೆ ಪಕ್ಕದಲ್ಲಿ ಜಿಂಕೆ.. ನವಿಲು.. ಏನದು.. ಅಲ್ಲೇ ರಸ್ತೆ ಬದಿಯಲ್ಲಿ ಶಿಲಾಬಾಲಿಕೆ ನಿಂತಿದ್ದಾಳೆ.. ಕನ್ನಡಿಯಲ್ಲಿ ಮುಖ ನೋಡುತ್ತಾ ಮೈ ಮರೆತಿದ್ದಾಳೆ. ಪಕ್ಕದಲ್ಲೇ ಹಸಿರು ವನ.. ಅದರೊಳಗೆ ಒಬ್ಬ ರಾಕ್ಷಸನ ಮುಖ.. ಅವನ ಕಣ್ಣಿನ ಕಪ್ಪು ಕಾಡಿಗೆಯಲ್ಲಿ ವಿಚಿತ್ರ ಚಿತ್ತಾರ.. ಅವನು ಭಯ ಹುಟ್ಟಿಸುವುದಿಲ್ಲ. ಮಗು ರಾಕ್ಷಸನನ್ನು ನೋಡಿ ಬೆಚ್ಚುವುದಿಲ್ಲ.. ಸ್ವಲ್ಪ ಮುಂದೆ ಯಕ್ಷಗಾನದ ಕಿರೀಟ.. ನೋಡುಗರಿಗೆ ಅರ್ಥವಾಗಲಿ ಎಂದು ಅದರ ಕೆಳಗೆ ಯಕ್ಷಗಾನ ಎಂದು ಬರೆಯಲಾಗಿದೆ. ಅದನ್ನು ಓದಲು ಮಗು ಅಪ್ಪನ ಸಹಾಯ ಪಡೆದಿದೆ..ಚೂಪು ಚೊಂಚಿನ ಹಕ್ಕಿಯೊಂದು ಕುಳಿತ ಕೊಂಬೆಯ ಮರ ಕಾಂಪೌಂಡು ಮುಗಿದ ಕಾರಣದಿಂದ ಅರ್ಧಕ್ಕೆ ನಿಂತುಬಿಟ್ಟಿದೆ. ಅದಕ್ಕೇನೂ ಬೇಸರ ಮಾಡಿಕೊಳ್ಳದೆ ಸಂಗೀತಗಾರನೊಬ್ಬ ವೀಣೆ ನುಡಿಸುತ್ತಲೇ ಇದ್ದಾನೆ. ಅವನ ಮುಖದಲ್ಲಿನ ಗಂಭೀರತೆ ನೋಡಿದ ನಾಟ್ಯರಾಣಿ ಹೆಜ್ಜೆ ತಪ್ಪಿದಂತೆ ಕಾಣುತ್ತಾಳೆ. ಅಪ್ಪ ಮಗನ ಎದುರು ಸೀಟಿನಲ್ಲಿ ಕೂತ ದಪ್ಪ ಕನ್ನಡಕದ ಯುವಕನೊಬ್ಬ ’ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಹುದುಗಿಸಿದ ಮುಖ ತೆಗೆದು ಆಚೀಚೆ ನೋಡಿ ಮತ್ತದರಲ್ಲೇ ಹುದುಗಿಸಿದ್ದಾನೆ.

This wall on a prominent road in Bangalore being painted by artists as part of BBMP’s drive to beautify the city. Photo: K. Gopinathan

ಹಾದಿ ಪಕ್ಕದ ಭಿತ್ತಿಗಳಲ್ಲಿ ಪತ್ರಗಳಿಲ್ಲ.. ಚಿತ್ರಗಳಿವೆ.. ಬೆಂಗಳೂರನ್ನು ಬೃಹತ್ಗೊಳಿಸಲು ಹೊರಟಿರುವ ಮಹಾನಗರಪಾಲಿಕೆ ಮೆಜೆಸ್ಟಿಕ್ಕಿನ ರಸ್ತೆಯ ಇಕ್ಕೆಲಗಳಲ್ಲಿ ಆರ್ಟ್ ಗ್ಯಾಲರಿಯೊಂದರ ನಿರ್ಮಾಣದ ಹಂತದಲ್ಲಿದೆ. ಕೆಂಪೇಗೌಡ ಬಸ್ ನಿಲ್ದಾಣ ತಲುಪುವ ಹಲವು ಹಾದಿಗಳ ಇಬ್ಬದಿಯ ಗೋಡೆಗಳ ಮೇಲೆ ಸೃಜನಾತ್ಮಕ ಕಲಾಕೃತಿಗಳನ್ನು ಬಣ್ಣಗಳಿಂದ ಬರೆಯಿಸಲಾಗಿದೆ.. ಬರೆಯಿಸಲಾಗುತ್ತಿದೆ. ಮೊದಲೆಲ್ಲಾ ಸುಣ್ಣ ಬಳಿದಿದ್ದ ಗೋಡೆಗಳು ಉಗುಳುವವರ,ಅಂಟಿಸುವವರ, ಗೀಚುವವರ ಕಾರಣ ಅಂದಗೆಟ್ಟಿದ್ದವು.. ಈಗ ಸ್ವಚ್ಛತೆಯ ಜೊತೆಗೆ ಸುಂದರತೆಯೂ ಇರಲೆಂದು ಪಾಲಿಕೆ ಈ ಕಾರ್ಯ ಕೈಗೊಂಡಿದೆ. ಹೊರಗಿನಿಂದ ಅಪರೂಪಕ್ಕೆ ಬರುವವರಿಗೆ ’ಹಿಂದಿನ ಸಲ ಬಂದಾಗ ಇದಿರಲಿಲ್ಲ’ ಅನಿಸಿದರೆ, ಬೆಂಗಳೂರಲ್ಲೇ ಇದ್ದು ಆ ಕಡೆ ಹೋದವರಿಗೆ ’ಏನೋ ಒಂದ್ ಒಳ್ಳೆ ಕೆಲ್ಸ ಆಗ್ತಾ ಇದೆ’ ಅನಿಸುತ್ತದೆ. ಉದ್ಯಾನ ನಗರಿಯ ಅಂದ ಸವಿಯಲು ಬಂದವರಿಗೆ ರಸ್ತೆಯ ಎರಡೂ ಬದಿಗಳು ಸ್ವಾಗತಿಸುತ್ತವೆ.. ಸಚಿತ್ರವಾಗಿ...


ಆ ಗ್ಯಾಲರಿಗಳಲ್ಲಿ ಕರ್ನಾಟಕವಿದೆ.. ಕನ್ನಡವಿದೆ.. (ಕೆಲವೊಂದು ಕಡೆ ಸರಿಯಾಗಿಲ್ಲ!)..ಏನೇನೂ ಸಂಬಂಧವಿರದ ಹಲವು ಚಿತ್ರಗಳು ಅಕ್ಕ ಪಕ್ಕದಲ್ಲಿ ಕೂತು ಹರಟೆ ಹೊಡೆಯುತ್ತವೆ. ರಾಜಸ್ಥಾನದ ಒಂಟೆಗಳೂ ಮಂಡ್ಯದ ಕುರಿಮರಿಯೂ ಒಂದೇ ಕೆರೆಯ ನೀರು ಕುಡಿಯುತ್ತವೆ.. ಸರಣಿ ಚಿತ್ರಗಳು ರಸ್ತೆಯ ಪಕ್ಕದಲ್ಲಿ ಮಾರಾಟಕ್ಕೆ ಕೂತವರ ಆಸೆ ಕಂಗಳಂತೆ ನಮ್ಮನ್ನೇ ನೋಡುತ್ತವೆ.. ಈಗ ಒಣ ಗೋಡೆಗಳಲ್ಲಿ ಸಂತೋಷವಿದೆ.. ಪಯಣಿಗರಲ್ಲಿ, ದಾರಿಹೋಕರಲ್ಲಿ ಇವೆಲ್ಲಾ ಇಷ್ಟುದಿನ ಎಲ್ಲಿದ್ದವು ಎಂಬ ಕುತೂಹಲವಿದೆ... ಕಾರಿನ ಕಪ್ಪು ಗಾಜಿನಲ್ಲಿ ನೋಡುವ ಜನಕ್ಕೆ ಟೂರಿಗೆ ಹೋಗಿ ಇವನ್ನೆಲ್ಲಾ ನೋಡಿ ಮಜಾ ಮಾಡಲು ರಜೆ ಮಂಜೂರು ಮಾಡದಿರುವ ಮ್ಯಾನೇಜರ್ ಮೆಲೆ ಸಿಟ್ಟಿದೆ.. ಇವನ್ನೆಲ್ಲಾ ಇಂಟರ್ ನೆಟ್ ನಲ್ಲಿ ಒಂದು ಕ್ಲಿಕ್ಕಿನಲ್ಲಿ ನೋಡಬಹುದೆಂಬ ಹುಂಬತನವಿದೆ..


ಚಿತ್ರಗಳು ಮುಗಿಯುತ್ತಲೆ ಇಲ್ಲ.. ಮಗು ಕಣ್ಣುಗಳನ್ನು ದೊಡ್ಡದು ಮಾಡುತ್ತಲೇ ಇದೆ.. "ಅಪ್ಪಾ ಅದು ಆ ನೀಲಿ ಹಸಿರು ಬಣ್ಣದ ಹಕ್ಕಿ ಹೆಸರೇನು ?" ಜೀವನದಲ್ಲಿ ಕಾಗೆಯೊಂದನ್ನೇ ನೋಡಿ ಜಗತ್ತೇ ಕಪ್ಪು ಬಿಳುಪು ಎಂಬ ನಿರ್ಧಾರಕ್ಕೆ ಬಂದವನ ಹಾಗೆ ಮುಖ ಮಾಡಿ " ಯಾವ್ದೋ ಕಾಡು ಹಕ್ಕಿ" ಎನ್ನುತ್ತಾನೆ.. ಮಗು ಆ ಕಾಡು ಹಕ್ಕಿಯ ಮರೆತು ಜೋಡಿ ಚಿರತೆಗಳ ಚಿತ್ರದಲ್ಲಿ ಎರಡು ಬಾಲ ಎಲ್ಲಿದೆ ಎಂದು ಹುಡುಕತೊಡಗುತ್ತದೆ.. ಆ ಪ್ರಶ್ನೆ ಕೇಳಿಸಿಕೊಂಡ ಡ್ರೈವರ್ ಹಿಂದಿನ ಸೀಟಿನ ಹಿಂದಿನ ಇನ್ನೊಬ್ಬ ಈಗ ಆ ಹಕ್ಕಿ ಹೆಸರೇನಿರಬಹುದು ಎಂದು ಯೋಚಿಸುತ್ತಿದ್ದಾನೆ.. ಗೊತ್ತಾಗುವುದಿಲ್ಲ.. ನಾಳೆ ಆಫೀಸಿನಲ್ಲಿ ಗೂಗಲ್ ಮಾಡಿದರಾಯ್ತು ಎಂದು ಸಮಾಧಾನ ಮಾಡಿಕೊಳ್ಳುತಾನೆ ..ಕಂಡಕ್ಟರ್ ಹಿಂದಿನ ಬಸ್ ಸ್ಟಾಪಿನಲ್ಲಿ ಸರಿಯಾಗಿ ಸೀಟಿ ಊದಲಿಲ್ಲ ಎಂದು ಹೆಂಗಸೊಬ್ಬಳು ಗೊಣಗುತ್ತಾ ಮುಂದಿನ ಸ್ಟಾಪಿನಲ್ಲಿ ಇಳಿಯುತ್ತಾಳೆ. ಅವಳ ಕಂಕುಳಲ್ಲಿದ್ದ ಮಗನೂ ಭಿತ್ತಿಚಿತ್ರಗಳನ್ನು ನೋಡುವುದರಲ್ಲಿ ಮಗ್ನನಾಗಿದ್ದಾನೆ


ಮೊದಲು ಅಲ್ಲೆಲ್ಲಾ ಬೇರೆಯೇ ಇತ್ತು. ಯಾರ್ಯಾರದ್ದೋ ಹುಟ್ಟುಹಬ್ಬಕ್ಕೆ ಯಾರ್ಯಾರೋ ಶುಭಾಶಯ ಕೋರಿದ ವಿವರಗಳು.. ಅಜ್ಞಾತ ಚಿತ್ರದ ಅಜ್ಞಾತ ನಾಯಕಿಯ ಭಂಗಿಗಳಿದ್ದವು.. ಅಖಿಲ ಒಕ್ಕೂಟಗಳ ಸಕಲ ಕಾರ್ಯಕಲಾಪಗಳು, ಧರಣಿಗಳು ಗೋಡೆ ತುಂಬಿದ್ದವು.. ಹೊಸದಾಗಿ ಬಂದವರಿಗೆ ಯಾವುದೋ ಕಾಲೇಜಿನ ಕೀಲಿ ಕಳೆದು ಹೋದ ಹಳೇ ನೋಟೀಸ್ ಬೋರ್ಡಿನ ಹಾಗೆ ಕಾಣುತಿದ್ದವು.. ’ಇಲ್ಲಿ ಭಿತ್ತಿಪತ್ರ ಅಂಟಿಸಿದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು’ ಎಂಬ ವಾಕ್ಯವೇ ಸಾಕಾಗಿತ್ತು ಗೋಡೆಯ ಅಂದ ಹಾಳು ಮಾಡಲು.. ಕೆಲವಂತೂ ದೇವರ ಚಿತ್ರಗಳನ್ನು ಹೊತ್ತು ’ಹಾದಿಮೂತ್ರಿಕ’ರ ವಿರುದ್ಧ ಹೋರಾಡುತ್ತಿದ್ದವು. ಈಗ ಅದೇ ಗೋಡೆಗಳು ಹೊಸ ಮದುವೆಯಾದವರಂತೆ ಫಳಗುಡುತ್ತಿವೆ.. ತಮ್ಮ ಬಣ್ಣಗಳನ್ನು ನೋಡಿ ತಾವೇ ನಾಚಿವೆ.. ಹೋಗಿಬರುವವರೆಲ್ಲಾ ತಮ್ಮನ್ನು ನೋಡಲಿ ಎಂದು ರಸ್ತೆಯ ಅಂಚಿನವರೆಗೆ ಎದೆ ಉಬ್ಬಿಸಿ ನಿಂತಿವೆ.. ಅವುಗಳಿಗೀಗ ಪಾಲಕರಿಗೆ ತೇರಿನಲ್ಲಿ ಕಳೆದು ಹೋದ ಮಗ ಮನೆಗೆ ಬಂದಷ್ಟೇ ಸಂತಸವಾಗಿದೆ.


ಗೋಡೆಯ ಮೇಲಿನ ಚಿತ್ರಗಳು ಸ್ಥಬ್ದವಾಗಿದ್ದರೂ ನಮ್ಮೊಡನೆ ಅವು ಚಲಿಸುತ್ತಿರುವಂತೆ ಭಾಸವಾಗುತ್ತಿದೆ. ಚಿತ್ರಮಂದಿರದ ಸಿನಿಮಾ ರೀಲುಗಳಂತೆ ಗಿರಿ ಗಿರಿ ತಿರುಗುವಂತೆ ಕಾಣುತ್ತಿವೆ. ಈಗಷ್ಟೇ ಕೆತ್ತಿಟ್ಟಿರುವ ಪ್ರತಿಮೆಗಳ ಹೊಳಾಪಿದೆ ಅವಕ್ಕೆ.. ಕೆಲವು ಅಪೂರ್ಣ ಚಿತ್ರಗಳು ಕಲಾವಿದನಿಗಾಗಿ ಕಾಯುತ್ತಿರುವಂತೆ ಕಂಡರೆ ಇನ್ನೂ ಕೆಲವು ತಮ್ಮಷ್ಟಕ್ಕೆ ತಾವೇ ಪೂರ್ಣಗೊಳ್ಳುವ ಲಕ್ಷಣಗಳನ್ನು ತೋರುತ್ತಿವೆ... ಈಗ ಬಸ್ಸು ಮೇಲ್ಸೇತುವೆ ಹತ್ತುತ್ತಿದೆ.. ಅರೆ ಇಲ್ಲಿ ಮತ್ತೆ ಚಿತ್ರಗಳು.. ಗೋಲಗುಮ್ಮಟದ ಪಕ್ಕದಲ್ಲೇ ಮೈಸೂರು, ಐಹೊಳೆಯ ಪಕ್ಕದಲ್ಲಿ ನಾಗರ ಹೊಳೆ.. ಹುಲಿಯ ಪಕ್ಕದಲ್ಲೇ ಗಿಳಿ.. ಮಗುವಿನ ಜೊತೆ ಇನ್ನೂ ಹಲವರು ಕಿಡಕಿಯ ಹೊರಗೆ ಇಣುಕುತ್ತಿದ್ದಾರೆ.. ಸರಿಯಾಗಿ ಕಾಣದ ಒಂದಿಬ್ಬರು ಕತ್ತುದ್ದ ಮಾಡುತ್ತಾ ಕಿಡಕಿಯ ಬಳಿ ಕೂತಿದ್ದವರ ಮೈಮೇಲೆ ಬಿದ್ದು ಬೈಸಿಕೊಂಡಿದ್ದಾರೆ.. ಈಗ ಕನ್ನಡದ ಕವಿಗಳು ಮದುವೆ ಮನೆಯ ಪಂಕ್ತಿ ಊಟಕ್ಕೆ ಕೂತವರಂತೆ ಸಾಲಿನಲ್ಲಿ ಆಸೀನರಾಗಿದ್ದಾರೆ. ಬೇಂದ್ರೆ ಅಜ್ಜನ ನೆರೆತ ಕಿವಿಯ ಕೂದಲುಗಳು ಕಾರ್ನಾಡರ ಮುಖಕ್ಕೆ ಕಚಗುಳಿಯಿಡುತ್ತಿವೆ.. ಇದ್ದಕ್ಕಿದ್ದಂತೆ ಅಲ್ಲಿ ಸಿದ್ಧಿ ಜನಾಂಗದ ಮಹಿಳೊಯೊಬ್ಬಳ ಆರ್ತ ಮುಖ ಪ್ರತ್ಯಕ್ಷವಾಗುತ್ತದೆ.. ರೈತನೊಬ್ಬ ಮೇಕೆಗೆ ಹುಲ್ಲು ತಿನಿಸುವ ದೃಶ್ಯ, ಜನಪದ ವಾದ್ಯವೊಂದರ ಗುಂಗಿನಲ್ಲಿ ಹೊಳೆಬದಿ ಕೂತ ಹುಡುಗನೊಬ್ಬನ ನೋಟ, ಸುಗ್ಗಿ ಕುಣಿತದ ಹಳದಿ ಕೆಂಪು ತುರಾಯಿಗಳ ತುರುಬುಗಳು ’ನಮ್ಮನ್ನು ಕಾಪಾಡಿ’ ಎಂದು ಗೋಗರೆಯುತ್ತವೆ. ಒಟ್ಟಿನಲ್ಲಿ ಫ್ಲೈ ಓವರ್ ದಾಟುವಷ್ಟರಲ್ಲಿ ಬೇರೆ ಬೇರೆ ಕಿರುಚಿತ್ರಗಳ ತುಣುಕು ಪ್ರದರ್ಶನವೊಂದರಲ್ಲಿ ಭಾಗವಹಿಸಿ ಬಂದ ಅನುಭವವಾಗುತ್ತದೆ.


ಹಂಪಿ ತೇರಿನ ಚಕ್ರಗಳ ಅಡಿಯಲ್ಲಿ ಹುಲ್ಲು ಬೆಳೆಯಿಸುತ್ತಿದ್ದಾರೆ.. ಅಲ್ಲಿ ಕನಸಿನ ಹಂಬಲವಿದೆ.. ಹೊಸ ಹುರುಪಿದೆ.. ಕಲ್ಲಾವಿದನ ಕಣ್ಣಿನ ಬಣ್ಣಗಳವು.. ಅವರ ಬದುಕಿನ ರೇಖೆಗಳು.. ಅಲ್ಲಿ ಸುಂದರ ನಗರದ ಕಲ್ಪನೆಯಿದೆ... ಸಾಮ್ರಾಜ್ಯಗಳ ವೈಭವವಿದೆ.. ತೇರಿನ ಗಲಾಟೆಯಿದೆ.. ಹಸಿರಿದೆ.. ಆ ಹಸಿರಲ್ಲಿ ಉಸಿರಾಡುವ ನಾವಿದ್ದೇವೆ.. ಬದುಕಿನ ಚಕ್ರದಡಿಯ ಗೊಂದಲಗಳಲ್ಲಿ ಕೊಸರಾಡುತ್ತಿದ್ದೇವೆ.. ಇನ್ನೂ ಉಸಿರಾಡುತ್ತಿದ್ದೇವೆ.. ಉಸಿರು ಅಮರವಾಗಲೆಂಬ ಪುಟ್ಟ ಆಶಯವಿದೆ...ಆ ಬಣ್ಣಗಳಲ್ಲಿ ಸುವಾಸನೆ ಇದೆ.. ಪೇಂಟರ್ ನ ಹಳೇ ಬ್ರಷ್ಶಿನ ಜುಮುರಿದೆ... ಅವು ಅಂಟಿಗೊಳ್ಳುತ್ತವೆ... ಗೋಡೆಯ ಬಿರುಕನ್ನೂ ತಾಜಮಹಲಿನ ಕಮ್ಮಾನು ಮಾಡುವ ಶಕ್ತಿಯಿದೆ.. ಅವು ನಮ್ಮದೇ ಆಕೃತಿಗಳು..ನಮ್ಮದೇ ಗುಣವಿದೆ ಅವಕ್ಕೆ.. ಅವು ನಮ್ಮ ಪ್ರತಿಬಿಂಬಗಳಾಗುತ್ತವೆ.. ಗೋಡೆಗಳು ಕನ್ನಡಿಗಳಾಗುತ್ತವೆ.... .. ಈ ಚಿತ್ರಗಳು ಜೀವಂತ ರೂಪಕಗಳು..


ಎಲ್ಲರೂ ಬಸ್ಸು ಇಳಿಯುವ ಆತುರದಲ್ಲಿದ್ದಾರೆ.. ಓಡುವ ಬಸ್ಸಿನಿಂದ ಇಳಿದು ಮುಗ್ಗರಿಸಿದಂತಾಗಿ, ಅಲ್ಲೇ ಸುಧಾರಿಸಿಕೊಂಡು ಯಾರಾದರೂ ನೋಡಿಬಿಟ್ಟರೋ ಎಂದು ಸುತ್ತ ಮುತ್ತ ಕಣ್ಣಾಯಿಸಿ ತಮ್ಮ ಪಾಡಿಗೆ ಹೋಗುತ್ತಿದ್ದಾರೆ.. ಅವರೆಲ್ಲರೂ ಇನ್ಯಾವುದೋ ಬಸ್ ಹತ್ತಿ ಮನೆಗೆ ಹೋಗುವ ತರಾತುರಿಯಲ್ಲಿದ್ದಾರೆ.. ಹಾಗೆ ಹೋಗುವಾಗ ಮತ್ತೆ ಈ ಚಿತ್ರಸಂತೆಯಲ್ಲಿ ಓಡಾಡುವ ಖುಷಿಯಲ್ಲಿದ್ದಾರೆ.. ಕೆಲವರು ಟಿಕೆಟಿನ ಹಿಂಬದಿಯ ಕಂಡಕ್ಟರ ಬ್ರಹ್ಮ ಲಿಪಿ ಓದಲಾಗದೆ ಅವನು ಕೊಟ್ಟಷ್ಟು ಕಿಸೆಯಲ್ಲಿ ಹಾಕಿಕೊಂಡು ಬಡಬಡ ನಡೆಯುತ್ತಿದ್ದಾರೆ. ಅದನ್ನೂ ಮರೆತ ಇನ್ನೂ ಕೆಲವರು ಹತ್ತಿರದ ಎ.ಟಿ.ಎಂ ಗೆ ನುಗ್ಗಿ ಮಿನಿ ಸ್ಟೇಟ್ ಮೆಂಟ್ ತೆಗೆದು ಪದೇ ಪದೇ ಓದುತ್ತಿದ್ದಾರೆ.. ಅಪ್ಪ ಮಗ ಇಬ್ಬರೂ ಓವರ್ ಬ್ರಿಡ್ಜಿನ ಮೆಟ್ಟಿಲೇರುತ್ತಿದ್ದಾರೆ. ಕೆಂಪು ಲಂಗ ತೊಟ್ಟ ಹೆಂಗಸೊಬ್ಬಳು ಧಡಾರನೆ ಅವರ ಮುಂದೆ ಬಿದ್ದು ಒದ್ದಾಡುತ್ತಾಳೆ.. ’ಅಯ್ಯಾ ಅಮ್ಮಾ’ ಎಂದು ಕೈ ಮುಂದೆ ಮಾಡುತ್ತಾಳೆ.. ಬ್ರಿಡ್ಜಿನ ಆ ತುದಿಗೆ ಕಲಾವಿದನೊಬ್ಬ ಈಗಷ್ಟೇ ಬಂದು ಕೂತು ಹೊಸ ಚಿತ್ರದ ರಚನೆಯಲ್ಲಿದ್ದಾನೆ.. ಅವನ ಕುಂಚಗಳಲ್ಲಿ ಈಗ ಆ ಹೆಂಗಸಿನ ಮುಖ ಮೂಡಬಹುದೆಂಬ ಆಸೆಯಿಂದ ಆ ಪೋರ ಅರ್ಧದಾರಿಯಲ್ಲೇ ನಿಂತು ಮಿಕಿ ಮಿಕಿ ನೋಡುತ್ತಿದ್ದಾನೆ.

No comments: