Thursday, December 25, 2008

ವಾಕ್ಯವೊಂದರ ಕಥೆಗಳು

ರಸ್ತೆ ಬದಿಯ ಮನೆಯ ಬಾಗಿಲಲ್ಲಿ ನಿಂತು ಕಾಯುತ್ತಿದ್ದ ಅವಳ ಮಗು ಒಳಗಡೆ ಅಳದೆ, ದಿನದಂತೆ ಇಂದೂ ಬರುವ ಹೊಸ ಅಪ್ಪನ ನಿರೀಕ್ಷೆಯಲ್ಲೇ ನಿದ್ದೆ ಮಾಡಿತ್ತು...

ಅಪ್ಪನ ಆರೋಗ್ಯ ಸರಿ ಇಲ್ಲ ಎಂದು ಅಮೆರಿಕಾದಿಂದ ಡಾಲರ್ ಸಮೇತ ಬಂದ ಮಗನಿಗೆ ಭಾರತದ ಹವೆ ಸರಿಹೋಗದ ಕಾರಣ ಆಸ್ಪತ್ರೆಗೆ ಸೇರಿಸಬೇಕಾಯಿತು...

ಪ್ರೀತಿ ಪ್ರೀತಿ ಎಂದು ಕನವರಿಸುತ್ತಲೇ ಇದ್ದ ಪ್ರೇಮಿ ಕೊನೆಗೊಂದು ದಿನ ಪ್ರೀತಿ ಅವನೆದುರಿಗೆ ಬಂದು ನಿಂತಾಗ ಮಾತು ನಿಲ್ಲಿಸಿಬಿಟ್ಟು ಮೂಕನಾದ...

ದಿನವೂ ಬಾತ್ರೂಂಗಾಗಿ ಕ್ಯೂ ನಿಂತು ನಿಂತು ಬೇಸತ್ತ ಹಾಸ್ಟೆಲ್ ಹುಡುಗ ಅಂದು ಮುಂಜಾನೆ ಬೇಗ ಎದ್ದು ಬಾತ್ರೂಂ ಬಳಿ ಕ್ಯೂ ಇಲ್ಲದುದ್ದನ್ನು ನೋಡಿ ವಾಪಾಸ್ ಬಂದು ಮುಸುಕೆಳೆದುಕೊಂಡ...

ಗಿಟಾರ್ ಕಲಿಯುತ್ತೆನೆಂದು ಅಪ್ಪನ ಬಳಿ ಹಣ ಕೇಳಿದ ಮಗನಿಗೆ ಅಪ್ಪ ಹಣ ಕೊಟ್ಟು ತೋಟಕ್ಕೆ ತಂತಿ ಬೇಲಿ ಹಾಕಲು ತಂತಿ ತರುವಂತೆ ಹೇಳಿದ..

ಮೂರುವರ್ಷಗಳಿಂದ ಜೊತೆಗಿದ್ದ, ಪ್ರೀತಿಸಿದ ಹುಡುಗಿಗೆ ಮಾತು ಬರುತ್ತಿಲ್ಲ ಎಂದು ತಿಳಿದ ಮೇಲೆ ಕೈಕೊಟ್ಟ ಹುಡುಗನಿಗೆ ಕಿವಿಯೇ ಕೇಳುತ್ತಿರಲಿಲ್ಲ...

ನಮ್ಮ ಮನೆಯ ಗೋಡೆಯ ಮೇಲಿರುವ ಗೋಲಾಕಾರದ ಗಡಿಯಾರದ ಮುಳ್ಳುಗಳು ಒಬ್ಬರನ್ನೊಬ್ಬರು ಅಗಲಿರಲಾರದೆ ತಾಸಿಗೊಮ್ಮೆ ಒಂದುಗೂಡುತ್ತವೆ...