Tuesday, March 17, 2009

ನೆರಳು

ತನ್ನ ಹಿಂದೆ ಬರುತ್ತಿರುವುದು ನಾಯಿಯೋ ಬೆಕ್ಕೋ ಎಂದು ಕತ್ತಲಲ್ಲಿ ಕಾಣದೇ, ಮುಂದೆ ಹೋಗುವ ಆಕೃತಿ ಯಾವುದು ಎಂದು ಗುರುತಿಸಲಾಗದೇ ಆ ಹಿಂದಿರುವ ಪ್ರಾಣಿಯೂ ಹೀಗೆಯೇ ಯೋಚಿಸುತ್ತಿರಬಹುದೆಂದು ಭಾವಿಸಿ ನಾಗಪ್ಪ ಬಿರಬಿರನೆ ಮನೆ ಕಡೆ ಹೆಜ್ಜೆ ಹಾಕುತ್ತಿದ್ದ. ತನ್ನ ಹಾಗೆಯೇ ಇನ್ನೊಂದು ಪ್ರಾಣಿ ತನ್ನೊಡನೆ ಇದೆ ಎಂಬ ಧೈರ್ಯವೇ ಎಂದಿಂಗಿಂತ ಹೆಚ್ಚಿನ ವೇಗಕ್ಕೆ ಕಾರಣವಾಗಿತ್ತು. ಆಕ್ರಮಣ ಮಾಡುವ ಬಯಕೆಯಿದ್ದರೆ ಆ ಪ್ರಾಣಿ ಇಷ್ಟರೊಳಗಾಗಿ ತನ್ನ ಮೇಲೋ ಅಥವಾ ಮಗನಿಗಾಗಿ ಬರುವಾಗ ಕಟ್ಟಿಸಿಕೊಂಡು ತಂದ ಭಜೆಯ ಪರಿಮಳಕ್ಕೆ ಕೈ ಚೀಲದ ಮೇಲೋ ಮುಗಿಬೀಳಬಹುದಾಗಿತ್ತು. ಅಥವಾ ಬೆಳಗಿಂದ ಸಂತೆಯಲ್ಲಿ ಮೂಲಂಗಿ ಮಾರುತ್ತಾ ಕುಳಿತಿದ್ದರಿಂದ ಮೈಗಂಟಿಕೊಂಡ ಅದರ ವಾಸನೆಗೋ, ಇಲ್ಲ ಜಿಡ್ಡು ಜಿಡ್ಡಾದ ಮೈಯಿಂದ ಹರಿದು ಬರುತ್ತಿರುವ ಬೆವರಿನ ವಾಸನೆಗೋ ಹತ್ತಿರ ಬರಲೂ ಹೆದರಿರಬೇಕು ಎಂದಂದುಕೊಳ್ಳುತ್ತಾ ಕಂಕುಳೆತ್ತಿ ಮೂಸಿದ. ವಾಕರಿಕೆ ಬಂದಂತಾಗಿ ತನ್ನ ಮೇಲೇ ಅಸಹ್ಯ ಪಟ್ಟುಕೊಳ್ಳುತ್ತಾ ನಕ್ಕ. ಅಷ್ಟರಲ್ಲಿ ಕಾಲಿಗೆ ಏನೋ ತಗಲಿದಂತಾಗಿ ಹೆದರಿಕೆ ರೋಷಾವೇಷಕ್ಕೆ ತಿರುಗಿ, ಛಂಗನೆ ಪಕ್ಕಕ್ಕೆ ಜಿಗಿದು ದೊಡ್ಡ ಕಲ್ಲೆತ್ತಿಕೊಂಡು ಕಾಲ ಬುಡಕ್ಕೆ ಕೈಯಾಡಿಸಿ, ಯಾವುದೋ ಪ್ರಾಣಿ ಸಿಕ್ಕಂತಾಗಿ ಅದನ್ನು ಹಿಡಿದು ಜಜ್ಜಿ ಜಜ್ಜಿ ಅಪ್ಪಚ್ಚಿ ಮಾಡಿದ..