Friday, December 26, 2008

ಮತ್ತೊಂದಿಷ್ಟು ವಾಕ್ಯಗಳು.. ಕಥೆಗಳು...

ಪರಿಚಯದವರು ಸಿಕ್ಕರೆಂದು ಮಾತಾಡುತ್ತಾ ರಸ್ತೆಯಲ್ಲಿ ಬರುತ್ತಿದ್ದವಳಿಗೆ ರಸ್ತೆ ಬದಿಗೆ ಸತ್ತು ಬಿದ್ದು ಕೊಳೆತು ನಾರುತ್ತಿದ್ದ ಬೀದಿ ನಾಯಿಯ ವಾಸನೆ ಬರಲೇ ಇಲ್ಲ...

ಪರೀಕ್ಷೆಯಲ್ಲಿ ಫೇಲಾದೆನೆಂದು ಗುಡ್ಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ ಅವನಿಗೆ ಬೆಟ್ಟ ಹತ್ತುವುದೇ ಕಷ್ಟವಾಗಿ ವಾಪಾಸು ಮನೆಗೆ ಮರಳಿದ...

ಪತ್ರದ ಮೂಲಕವೇ ನಡೆಯುತ್ತಿದ್ದ ಪ್ರೇಮ ವ್ಯವಹಾರ ಎಲ್ಲರಿಗೂ ತಿಳಿಯುತ್ತದೆ ಎಂಬ ಭಯದಿಂದ ಅದನ್ನು ನಿಲ್ಲಿಸಿ ಅವರಿಬ್ಬರೂ ಒಂದು ದಿನ ಮನೆ ಬಿಟ್ಟು ಓಡಿ ಹೋದರು..

ಆಫೀಸಿನ ಕೆಲಸ ಮುಗಿಸಿ ವಾಪಾಸ್ ಬರುತ್ತಿದ್ದವನಿಗೆ ಸಿನಿಮಾಗೆ ಹೋಗಲು ಕಾಯುತ್ತೇನೆ ಎಂದ ಹೆಂಡತಿಯ ನೆನಪಾಗಿ ಮನೆಯ ದಾರಿ ತಪ್ಪಿಹೋಯಿತು...

ಕೈಗೆ ಪೆಟ್ಟು ಬಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಅಂಬುಲೆನ್ಸ್ ಅಪಘಾತಕ್ಕೀಡಾದುದರಿಂದ ರೋಗಿಯೂ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ...

ಗಂಡನ ಕಾಟದಿಂದ ಕಣ್ಣಿರಲ್ಲೇ ಮೀಯುತ್ತಿಇರುವ ಸೊಸೆಯ ಕಷ್ಟ ನೋಡಲಾಗದೆ ಅತ್ತೆ ಒಂದು ದಿನ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದಳು...

ಸಾಹುಕಾರರಿಗೆ ಬಾಕಿ ಕೊಡಬೇಕಿದ್ದ ಸಾಲಕ್ಕೆ ಪ್ರತಿಯಾಗಿ ಜೀತ ಮಾಡಲೊಪ್ಪಿದ ಆತನಿಗೆ ಸಾಹುಕಾರರನ್ನು ಹೊಡೆಯುವ ಶಕ್ತಿ ಕೊನೆವರೆಗೂ ಬರಲೇ ಇಲ್ಲ...

ರಾಷ್ಟ್ರೀಯತೆ ಮತ್ತು ಕೋಮುವಾದ

ಮನುಷ್ಯ ಸಂಘಜೀವಿ. ತಾನು ಅಸ್ತಿತ್ವಕ್ಕೆ ಬಂದಾಗಿನಿಂದ ತನ್ನ ಕನಸುಗಳನ್ನು ಬಯಕೆಗಳನ್ನು ಹಂಚಿಕೊಳ್ಳಲು ಪರಿಸರದ ಜೊತೆ ನಿಕಟ ಸಂಬಂಧವನ್ನು ಬೆಳೆಸಿಕೊಂಡು ಬಂದಿದ್ದು ಇದಕ್ಕೆ ಸಾಕ್ಷಿ. ಪರಿಸರವೂ ಸಹ ತಾನೇ ಬೆಳೆಸಿದ ಮಾನವನ ಜೊತೆಗೆ ಬದಲಾಗುತ್ತಲೇ ಬಂದಿದೆ. ಬದಲಾಗುತ್ತಲಿರುವ ಮಾನವ ಹಾಗೂ ಪರಿಸರದಲ್ಲಿ ಸಮಾಜ ಎನ್ನುವ ಪದ ಉದ್ಭವಿಸಿದ್ದು ಬಹಳ ಹಿಂದೆ. ಒಂದೇ ರೀತಿಯ ಭಾವನೆಗಳು,ಯೋಚನಾ ಲಹರಿ ಒಂದೇ ಪರಿಸರದಲ್ಲಿ ಇದ್ದಾಗ ಸಮಾಜ ನಿಮರ್ಾಣವಾಗುವುದು ಸಹಜ. ಈ ರೀತಿ ಬೆಳೆದ ಸಮಾಜಕ್ಕೆ ಮಾನವ ಹೊಂದಿಕೊಂಡು ಹೋಗುವುದನ್ನು ಕಲಿತ. ಅದರ ಇನ್ನೊಂದೆಡೆ ಬೇರೆ ಪರಿಸರದಲ್ಲಿ ಬೇರೆ ಆಲೋಚನೆಗಳಿಂದ ಬೆಳೆದ ಇನ್ನೊಂದು ಸಮಾಜವನ್ನು ದ್ವೇಷಿಸುವುದನ್ನೂ ಕಲಿತ..ಅಂದಿಗೆ ಗುಂಪು ಅಥವಾ ಕೋಮುವಾದದ ಸೃಷ್ಟಿಯಾಯಿತು..ಆಗ ಸೃಷ್ಟಿಯಾದ ಈ ವಿಚಿತ್ರವಾದ ಇಂದಿಗೂ ಬೆಂಕಿಯಂತೆ ಅದೇ ಮಾನವನ ಅದೇ ಸಮುದಾಯವನ್ನು ಸುಡುತ್ತಿರುವುದು ವಿಷಾದದ ಸಂಗತಿ.

ಭಾರತ ವಿಶಿಷ್ಟ ಸಂಸ್ಕೃತಿಯ ವಿರಾಟ ರಾಷ್ಟ್ರ.ನಾಗರೀಕತೆಯ ಉಗಮಕಾಲದಿಂದಲೂ ಮನುಷ್ಯನೆಂಬ ಪ್ರಾಣಿಗೆ ನೆಲೆಯಾದ ಪ್ರದೇಶ.ತದನಂತರ ವಲಸೆ ಬಂದವರಿಗೆಲ್ಲರಿಗೂ ಆಶ್ರಯ ನೀಡಿದ ದೇಶ..ಈಗ ವಿವಿಧತೆಯಲ್ಲಿ ಏಕತೆಯನ್ನು ಮೆರೆಯುತ್ತಿರುವ ಗಣರಾಜ್ಯ..ಸಕಲ ಧರ್ಮ, ಭಾಷೆ ,ಸಂಸ್ಕೃತಿ, ಆಹಾರ ವೈಚಿತ್ರ್ಯಗಳಿಗೆ ಸಾಕ್ಷಿಯಾಗಿರುವ ನಾಡಿನಲ್ಲಿರುವ ಸಾಮಾನ್ಯನಿಗೂ ಇದು ನಮ್ಮ ದೇಶ ಎಂದು ಹೇಳಿಕೊಳ್ಳುವುದು ಹೆಮ್ಮೆಯ ಸಂಗತಿ..ಆದರೆ ಯಾವ ಕಾರಣಕ್ಕೆ ಈ ರಾಷ್ಟ್ರೀಯತೆಯ ಭಾವನೆ ಅಂಕುರಿಸಿತೋ ಅದೇ ಆಧಾರದ ಮೇಲೆ ಕೋಮುವಾದ ಹುಟ್ಟಿರುವುದು ವಿಚಿತ್ರ ವಿಚಾರ.

ಇತಿಹಾಸದ ಪುಟಗಳನ್ನು ಹಿಂತಿರುವುದಾಗ ಸ್ವತಂತ್ರ ಭಾರತದ ಪರಿಚ್ಛೇದದಲ್ಲಿ ಮೊದಲ ಸಾಲಿನಲ್ಲಿರುವುದು ಧರ್ಮದ ಆದಾರದ ಮೇಲೆ ಭಿನ್ನ ಗಣರಾಜ್ಯಗಳನ್ನಗಿಸಿದ್ದು. ನಂತರದ ಭಾಷೆಯಾಧಾರದ ಮೇಲೆ ಮತ್ತೆ ರಾಜ್ಯಗಳಾಗಿ ವಿಭಾಗಿಸಿದ್ದು. ಈ ರೀತಿ ಜನರನ್ನು, ಪರಿಸರವನ್ನು ಹಾಗೂ ಅವರ ವಿಚಾರಗಳನ್ನು ಪ್ರತ್ಯೇಕ ಮಾಡಿದ್ದೇ ಇಂದಿನ ಕೋಮುವಾದಕ್ಕೆ ನಾಂದಿಯಾಗಿದೆ ಎಂದರೆ ತಪ್ಪಾಗಲಾರದು. ಕೋಮುವಾದ ಕೇವಲ ವಾದವಾಗಿರದೆ ಯುದ್ಧಕ್ಕೆ ತಿರುಗಿ ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ತರುತ್ತಿರುವುದು ಕಳವಳಕ್ಕೆ ಕಾರಣ. ಭಾರತದ ಸಂವಿಧಾನದಲ್ಲಿ 'ಸೆಕ್ಯುಲಾರ್' ಎಂಬ ಪದ ಸೇರಿಸಿದ ಮಾತ್ರಕ್ಕೆ ಪ್ರಜೆಗಳ ಮನದಲ್ಲಿ ಬೇರೂರಿದ ಕೋಮುವಾದದ ಭಾವನೆಯನ್ನು ಕಿತ್ತು ರಾಷ್ಟ್ರೀಯತೆಯ ಬೀಜ ಬಿತ್ತುವುದು ಕಷ್ಟ.

ಭಾರತದ ಯಾವುದೋ ರಾಜ್ಯದ ಮೂಲೆಯೊಂದರಲ್ಲಿ ಮಗುವೊಂದು ಹುಟ್ಟಿದರೆ ಜನನ ಪತ್ರದಲ್ಲಿ ಮಗುವಿನ ಜಾತಿ ನಮೂದಿಸಬೇಕು..ಭಾಷೆ ನಮೂದಿಸಬೇಕು.. ಹೀಗೆ ಹುಟ್ಟಿನಿಂದಲೇ ಗುಂಪುಗಾರಿಕೆ ಪ್ರಾರಂಭವಾಗುತ್ತದೆ.ಮಗು ಬೆಳೆಯುತ್ತಿದ್ದಂತೆ ತಾನು,ತನ್ನ ಕುಟುಂಬ,ತನ್ನ ಊರು,ತನ್ನ ಜಾತಿ,ತನ್ನ ಭಾಷೆ ಎಂಬ ಭಾವನೆಯೂ ಬೆಳೆಯುತ್ತದೆ.ಇದನ್ನೇ ತನ್ನತನ ಎಂದು ಭಾವಿಸುವ ಜನರಿಗೆ ಸಮಾಜವೂ ಪುಷ್ಟಿ ನೀಡುತ್ತದೆ. ಜೀವನದ ಪ್ರತಿ ಘಟ್ಟದಲ್ಲೂ ಒಂದಲ್ಲಾ ಒಂದು ಕಾರಣಕ್ಕೆ ಪ್ರತಿಯೊಬ್ಬನೂ ಕೋಮುಭಾವನೆಯನ್ನು ಪ್ರದರ್ಶಿಸುತ್ತಾನೆ. ಹಾಗಿದೆ ನಮ್ಮ ಸಮಾಜ.

ಅದರ ಪರಿಣಾಮ...? 1984 ರಲ್ಲಿ ಸಿಖ್ ಸಮುದಾಯ ದಂಗೆಯೆುದ್ದಿದ್ದು...1992 ರಲ್ಲಿ ಬಾಬ್ರಿ ಮಸೀದಿ ವಿಚಾರ ...1993 ರಲ್ಲಿನ ಮುಂಬಯಿ ಸ್ಫೋಟ...ಇತ್ತೀಚಿನ ಗೋದ್ರಾ ಹತ್ಯಾಕಾಂಡ... ಇನ್ನೂ ಮನಪಟಲದಿಂದ ಮಾಸಿಲ್ಲ.. ಭಾರತ ತನ್ನೆರಡು ಪ್ರಧಾನಿಗಳನ್ನು ಕಳೆದುಕೊಂಡಿದ್ದೂ ಈ ವಿಚಾರಕ್ಕೇ... ಪ್ರತ್ಯೇಕ ರಾಜ್ಯ ಬೇಕೆಂಬ ಕೂಗು ಇನ್ನೂ ಕೇಳಿ ಬರುತ್ತಿದೆ. ಇತ್ತೀಚಿನ ಕನರ್ಾಟಕದಲ್ಲಿ ನಡೆಯುತ್ತಿರುವ ಕ್ರೈಸ್ತ ದೇವಾಲಯಗಳ ಮೇಲಿನ ದಾಳಿ ಇನ್ನೆಲ್ಲಿಗೆ ಕೊಂಡೊಯ್ಯುತ್ತದೆಯೋ ತಿಳಿಯದು.. ವಸುಧೈವ ಕುಟುಂಬಕಂ ಎಂದು ಪುರಾಣಗಳಲ್ಲಿ ಸಾರಿ ಪ್ರಪಂಚಕ್ಕೇ ಮಾದರಿಯಾದ ರಾಷ್ಟ್ರವೊಂದು ಕೋಮುವಾದ ಗರಗಸಕ್ಕೆ ಸಿಕ್ಕಿ ಚೂರಾಗುತ್ತಿದೆ ಎಂದರೆ ಆಶ್ಚರ್ಯವಾಗುವುದು ಸಹಜ.

ಕೋಮುವಾದ ರಾಷ್ಟ್ರೀಯತೆಗೆ ಹೇಗೆ ಧಕ್ಕೆ ತರುತ್ತದೆ..? ಇದೆಂಥಾ ಪ್ರಶ್ನೆ.. ಎರಡು ವಿರುದ್ಧ ಪದಗಳು ಧಕ್ಕೆ ತರದೆ ಇನ್ನೇನು ಮಾಡುತ್ತವೆ? ಕೋಮುವಾದ ಜನರ ಮನಸ್ಸನ್ನು ವಿಭಜಿಸುವ ಭಾವ. ರಾಷ್ಟ್ರೀಯತೆ ಮನಗಳನ್ನು ಒಗ್ಗೂಡಿಸುವ ಭಾವ. ಕೋಮುವಾದ ಸಮಾಜದಲ್ಲಿ ಬಿರುಕನ್ನು ಉಂಟುಮಾಡುತ್ತಾ ದೇಶವೊಂದರ ಅಂತರ್ಕಲಹಕ್ಕೆ ಮುನ್ನುಡಿ ಬರೆಯುತ್ತದೆ. ದೇಶಕ್ಕೆ ಆಂತರಿಕ ಅಭದ್ರತೆಗಿಂತ ಹೆಚ್ಚಿನ ಅಪಾಯದ ಸ್ಥಿತಿ ಇನ್ನೊಂದಿಲ್ಲ..ಹೀಗೆ ಮುಂದುವರಿದರೆ ಈ ಕೋಮುವಾದ ದೇಶವನ್ನೇ ವಿಭಜಿಸುವ.. ಹೊಸರಾಷ್ಟ್ರವನ್ನೇ ಹುಟ್ಟುಹಾಕುವಂತಹ ಗಂಭೀರ ಪರಿಸ್ಥಿತಿಗೆ ಕೊಂಡೊಯ್ಯುಬಹುದು..ನಾವು ಎಚ್ಚರವಹಿಸಬೇಕಷ್ಟೆ...
ರಾಷ್ಟ್ರವೊಂದು ಬಲವಾಗಿರಬೇಕಾದರೆ ಅದರ ಪ್ರತಿಯೊಂದು ಘಟಕವೂ ಸರಿಯಾಗಿರಬೇಕು. ಭಾರತದಂತಹ ಪ್ರಜಾರಾಜ್ಯದಲ್ಲಿ ಪ್ರಜೆಗಳೇ ಪ್ರಭುಗಳಾಗಿರುವಾಗ ಕೋಮುವಾದವನ್ನು ಹತ್ತಿಕ್ಕುವುದು... ರಾಷ್ಟೀಯತೆಯನ್ನು ಬೆಳೆಸುವುದು ಜನರ ಕೈಯಲ್ಲೇ ಇದೆ. ಕವಿ ಕುವೆಂಪು ಹೇಳಿದಂತೆ ಗುಂಪುಗಾರಿಕೆ ಬಿಟ್ಟು ಚೇತನಗಳೆಲ್ಲ ಅನಿಕೇತನಗಳಾಗಬೇಕು. ಭಾಷೆಯಾವುದಾದರೇನು ವೇಷಯಾವುದಾದರೇನು ದೇಶ ಒಂದು ಎಂಬ ಭಾವನೆ ಎಲ್ಲರಲ್ಲಿ ಬಂದಾಗ ಕೋಮುವಾದ ಅದೃಶ್ಯವಾಗುವುದರಲ್ಲಿ ಸಂದೇಹವಿಲ್ಲ. ಅದೇ ರಾಷ್ಟ್ರೀಯತೆಯ ಭಾವನೆಯಲ್ಲವೇ?