Thursday, January 1, 2009

ಹೊಸ ಸಂವತ್ಸರ

ಮುಂಜಾನೆಯ ಮಂಜಿನಲಿ ಇಬ್ಬನಿಯ ದಿಬ್ಬದಲಿ ಬಳಿಗೆ ಬಂದಿದೆ ಹೊಸ ವರುಷ...
ಚುಮು ಚುಮು ಚಳಿಯಲ್ಲಿ ನಿಮಗೆಲ್ಲ ತರಲಿ ಬೆಚ್ಚಗಿನ ಹೊಸ ಹರುಷ...

ಹೊಸ ಸಂವತ್ಸರದ ಹಾರ್ದಿಕ ಶುಭಾಶಯಗಳು...

ನಾಳೆ ಮನೆಗೆ ಹೊರಟಿದ್ದೇನೆ.. ಇನ್ನು ಹದಿನೈದು ದಿನ ರಜಾ..

ಮತ್ತೆ ಸಿಗೋಣ....

Tuesday, December 30, 2008

ಕಾರ್ವರ್ ಬರೆದ "ಕ್ಯಾಥೆಡ್ರಲ್"

ಅಮೆರಿಕದಲ್ಲಿ ಇಪ್ಪತ್ತನೇ ಶತಮಾನದ ಪ್ರಮುಖ ಸಾಹಿತಿ ಎಂದು ಗಣಿಸಲಾಗಿರುವ "ರೇಮಂಡ್ ಕಾರ್ವರ್". ಎಂಬತ್ತರ ದಶಕದಲ್ಲಿ ಸಣ್ಣಕತೆಗಳಿಗೆ ಮತ್ತೆ ಉಸಿರು ಕೊಟ್ಟವನು ಎಂದೂ ಖ್ಯಾತ.ಇವರ ಕಥೆಯೊಂದನ್ನು ಕನ್ನಡಕ್ಕಿಳಿಸಿದ್ದಾರೆ.. ಗುರುಬಾಳಿಗ...

ಕಥೆಯನ್ನು ಒಮ್ಮೆ ಓದಿದಾಗ ಕೆಳಗಿನ ವಾಕ್ಯಗಳು ವಿಚಿತ್ರ ಸತ್ಯವೊಂದರ ತಡಕಾಟದಲ್ಲಿದ್ದಂತೆ ಭಾಸವಾಗಿದ್ದು ನನಗೆ...



"ಅದರಲ್ಲಿ ಒಬ್ಬ ಸೈನಿಕನ ಹೆಂಡತಿಯಾಗಿ ಇರುವುದು ಅಂದರೇನು ಎಂಬ ಭಾವ ಇರುವುದು ಎಲ್ಲ ಹೇಳಿದ್ದಳಂತೆ. ಬಹುಶ ಆ ಕವನವನ್ನು ಅವಳು ಪೂರ್ತಿಯೇ ಮಾಡಿಲ್ಲ.."

ಮೊದಲು ಇಷ್ಟ ಎಂದು ಒಂದಾದವರೇ ಇಷ್ಟವಿಲ್ಲದಂತಾದಾಗ ಸಂಬಂಧಗಳು ಅರ್ಥ ಕಳೆದುಕೊಂಡಿರುತ್ತವೆ.. ಮನಸ್ಸಿನ ಅಂದಿನ ಭಾವನೆಗಳು ಕೊನೆಯವರೆಗೂ ಅರ್ಥವಾಗದೇ ಉಳಿದು ಹೋಗುತ್ತದೆ...



"ಇಷ್ಟೆಲ್ಲಾ ಅವನು ಮಾಡಿದರೂ ಒಬ್ಬ ಹೆಂಗಸಿನಂಥಾ ಹೆಂಗಸು ಹೇಗಿರುತ್ತಾಳೆ ಅಂತ ಅವನು ಕಾಣಲೇ ಇಲ್ಲವಲ್ಲ. "

ಸ್ತ್ರೀ ಯ ರಹಸ್ಯದ ಬಗ್ಗೆ ಕಾಳಿದಾಸನೂ ಇದೇ ಮಾತನ್ನು ಹೇಳುತ್ತಾನೆ.. ಎಷ್ಟೋ ಕವಿಗಳೂ ಇದೇ ಅಭಿಪ್ರಾಯವನ್ನು ಮಂಡಿಸಿದ್ದಾರೆ.. ಅದು ಕೇವಲ ಕುರುಡನೊಬ್ಬನಿಗಾಗಿ ಕಥೆಯಲ್ಲಿ ಪ್ರಸ್ತಾಪಿಸಿದರೂ ಒಳಾರ್ಥದಲ್ಲಿ ಎಲ್ಲರನ್ನೂ ಕುರಿತಾಗಿದೆ ಎಂದೆನಿಸಿತು..


"ಅವಳ ಕೊನೆಯ ಯೋಚನೆ ಇದೆ ಇರಬಹುದು, ತನ್ನ ಗಂಡನಿಗೆ ತಾನು ಹೇಗಿದ್ದೆನೆಂದೂ ತಿಳಿದಿಲ್ಲವಲ್ಲ ಅಂತ. ಪಾಪ."

ಈ ವಾಕ್ಯ ಗೊಂದಲವನ್ನುಂಟುಮಾಡಿತು.. ಹೆಂಗಸರ ಮನಸ್ಸು ಸೂಕ್ಷ್ಮವಾಗಿರುತ್ತದೆ.. ಅವರ ಭಾವುಕತೆ ಕೆವಲ ಮೂರ್ತ ರೂಪಕ್ಕೆ ಸೀಮಿತವಾದುವುದಲ್ಲ.. ಹೀಗಾಗಿ ಈ ವಾಕ್ಯದ ಅಗತ್ಯವಿರಲಿಲ್ಲ ಎಂದೆನಿಸುತ್ತದೆ.. ಲೇಖಕರು ಹೆಣ್ಣಿನ ಮನಸ್ಸಿಗೆ ನ್ಯಾಯ ಸಲ್ಲಿಸಿಲ್ಲ ಎಂದೆನಿಸುತ್ತದೆ..ತನ್ನನ್ನು ಒಳಗಣ್ಣಿನಿಂದ ಅರ್ಥಮಾಡಿಕೊಂಡರೆ ಸಾಕೆನಿಸಬೇಕಿತ್ತು.. ಬಹುಶ: ಆ ದೇಶದ ಸಂಸ್ಕೃತಿಗೆ ಇದು ಸರಿಹೋಗುವುದೇನೋ..


" ಸೇದಿ ಹೊರಕ್ಕೆ ಬಿಟ್ಟ ಹೊಗೆ ಲಯಲಯವಾಗಿ ಸಾಗುವ ಲಹರಿಯನ್ನು ಅವರು ನೋಡಲಾಗುವುದಿಲ್ಲವಲ್ಲ! ಅದಕ್ಕಿರಬಹುದು "

ವಾಕ್ಯದಲ್ಲಿ ಸಿಗರೇಟು ಸೇದುವವರು ಕೆವಲ ಹೊಗೆ ಹೊರಬರುವ ಚಂದ ನೋಡಲು ಮಾತ್ರ ಸೇದುತ್ತರೇನೋ? ನಾನಂತೂ ಸೇದಿಲ್ಲಪ್ಪಾ..


"ನನ್ನತ್ರ ಎರಡು ಟಿ.ವಿ. ಇದೆ. ಒಂದು ಕಲರ್ರು ಇನ್ನೊಂದು ಓಬಿರಾಯನ ಕಾಲದ ಬ್ಲಾಕ್ ಅಂಡ್ ವೈಟು."

ಈ ವಾಕ್ಯದಲ್ಲಿ ಹೆಳ ಹೊರಟಿರುವ ವಿಚಿತ್ರ ಅರ್ಥವಾಗಲಿಲ್ಲ.. ಕುರುಡನಿಗೇಕೆ ಎರಡು ಟಿ.ವಿ... ಅದೂ ಕಲರ್ ಮತ್ತೊಂದು ಬ್ಲಾಕ್ ಅಂಡ್ ವೈಟ್.. ನನಗನ್ನಿಸಿದ್ದು.. ಬಹುಶಃ ಕುರುಡನ ಆಶಾವಾದಕ್ಕೆ ಪೂರಕವಾಗಿ ಸೇರಿಸಿರಬಹುದು.. ಕುರುಡನಾದರೂ ಜೀವನವನ್ನು ಅತಿಯಾಗಿ ಪ್ರೀತಿಸುವಾಗ ಇಂತಹ ಅನವಶ್ಯಕ ವಿಚಾರಗಳಿಗೂ ಮನಸ್ಸು ವಿಶೇಷ ಪ್ರಾಮುಖ್ಯತೆ ಕೊಡುತ್ತದೆ...


"ನನಗೆ ಎಲ್ಲದರಲ್ಲೂ ಕಲಿಯಲು ದೊರೆಯುತ್ತೆ. ಲರ್ನಿಂಗ್ ನೆವರ್ ಎನ್ಡ್ಸ್ . ಈಗ ಕೂಡ ಏನಾದರೂ ಕಲಿಯಲು ಸಿಗಬಹುದು. ನಾನು ಕಿವಿಗೊಡುತ್ತೇನೆ"

ಇದು ಉತ್ತಮ ಪುರುಷನ ಲಕ್ಷಣಗಳಲ್ಲೊಂದು.. ಸದಾ ಕಲಿಯುವ ಹಂಬಲ..ಇತ್ಯಾದಿ ಬೇಗ ಅರ್ಥವಾಗುತ್ತದೆ..!!!


"ತಮ್ಮ ಇಡೀ ಬದುಕಿನ ಶ್ರಮವನ್ನು ಅದರಲ್ಲಿ ತೊಡಗಿಸಿ ಅವರ ಶ್ರಮದ ಫಲಿತಾಂಶ ಕಾಣಲು ಅವರು ಇರುವುದಿಲ್ಲ."

ಫಲಿತಾಂಶದ ನಿರೀಕ್ಷೆಯಿಲ್ಲದೆ ತಮ್ಮ ಕರ್ತವ್ಯವನ್ನು ಮಾಡಿ ಮುಗಿಸುವ ವ್ಯಕ್ತಿತ್ವದ ಜನರನ್ನು ಪರಿಚಯಿಸುತ್ತಾ ಕುರುಡ ಈ ಮಾತನ್ನು ಹೇಳುವಾಗ ಅವನ ಅಂತರಂಗದಿಂದ ನೋಡುವ ಪರಿಯನ್ನು ಪರಿಚಯಿಸುತ್ತದೆ...


"ಇಲ್ಲ ನನಗೆ ನಂಬಿಕೆ ಇಲ್ಲ... ಯಾವುದರಲ್ಲೂ.."

ನಿರೂಪಕರ ಈ ಗುಣ ಒಳ್ಳೆಯದಲ್ಲ.. ಇದರಿಂದ ಹೊರಬರುವುದು ಹೇಗೆ..ಎಂಬುದನ್ನ್ನು ಕುರುಡ ಕಥೆಯ ಕೊನೆಯಲ್ಲಿ ಚಿತ್ರ ಬಿಡಿಸುತ್ತಾ "ನಿನ್ನಿಂದ ಎಲ್ಲಾ ಸಾಧ್ಯ" ಎಂಬುದನ್ನು ಹೇಳಬಯಸುತ್ತಾನೆ..


"ಕೆಲವು ಮನುಷ್ಯರನ್ನೂ ಬಿಡಿಸು.. ಮನುಷ್ಯರಿಲ್ಲದೆ ಎಂತಹ ಕೆಥೆಡ್ರೆಲ್ ಅದು"

ಮಾನವರಿಲ್ಲದ ಜಾಗ ಎಂತಹ ಜಾಗವಾಗಿದ್ದರೂ ಚೆನ್ನಾಗನಿಸುವುದಿಲ್ಲಾ.. ಏಕಾಂತ ಕೆಲಸಮಯ ಮನಸ್ಸಿಗೆ ಹಿತ ಕೊದಬಹುದು.. ಆದರೆ ಮಾನವ ಸಂಬಂಧ ಸದಾ ಖುಷಿ ಕೊಡುವ ಕ್ರಿಯೆ.. ವಿಶ್ವಾಸ ನಂಬಿಕೆಗಳ ಮೇಳೆಯೇ ನಿಂತಿರುವ ನಮ್ಮ ಮೌಲ್ಯಗಳಿಗೆ ಪೂರಕವಾಗಿದೆ ಈ ವಾಕ್ಯ...


ಬಾಳಿಗರ ಸಾಹಿತ್ಯದ ಶೈಲಿ ಸ್ವಲ್ಪ ಹೊಸದಾಗಿತ್ತು...ಅನುವಾದವನ್ನು ಸಮರ್ಥವಾಗಿ ನಿಭಾಯಿಸಿದ್ದೀರಿ.. ಅಭಿನಂದನೆಗಳು...

ನೀವೂ ಓದಿ...


Saturday, December 27, 2008

ನವಿಲು ಗರಿ

ನವಿಲು ಗರಿ ಎಷ್ಟು ಚಂದ..ಚಿನ್ನದ ಫಲಕವೊಂದಕ್ಕೆ ಕಪ್ಪು ಹಸಿರು ನೀಲಿ ಬಣ್ಣಗಳನ್ನು ಬಡಿದಂತಿದೆ...

ಪ್ರಿಯೆಯ ಕಣ್ಣಿನಷ್ಟೇ ಕಾಂತಿ ಅವಕ್ಕೆ.. ಕಣ್ಣುಗಳು ನರ್ತಿಸುತ್ತವೆ.. ಸೋನೆ ಮಳೆಗೆ ಬಣ್ಣ ಹಚ್ಚುತ್ತವೆ...

ಅದು ಅವನ ಕುಂಚ... ಎಲ್ಲಾ ಬಣ್ಣಗಳನ್ನು ಒಟ್ಟೀಗೆ ಸೇರಿಸಿ ಬಳಿಯಲು ಹೊರತವ ಮರೆತು, ಬಣ್ಣಗಳು ಒಣಗಿವೆ..

ಅವು ಕೊಳಲಿನ ರಂಧ್ರಗಳು.. ಒಂದೊಂದು ಒಂದೊಂದು ರಾಗವಾಗಿ ವಾಯುತರಂಗದಲ್ಲಿ ತೇಲುತ್ತವೆ..

Friday, December 26, 2008

ಮತ್ತೊಂದಿಷ್ಟು ವಾಕ್ಯಗಳು.. ಕಥೆಗಳು...

ಪರಿಚಯದವರು ಸಿಕ್ಕರೆಂದು ಮಾತಾಡುತ್ತಾ ರಸ್ತೆಯಲ್ಲಿ ಬರುತ್ತಿದ್ದವಳಿಗೆ ರಸ್ತೆ ಬದಿಗೆ ಸತ್ತು ಬಿದ್ದು ಕೊಳೆತು ನಾರುತ್ತಿದ್ದ ಬೀದಿ ನಾಯಿಯ ವಾಸನೆ ಬರಲೇ ಇಲ್ಲ...

ಪರೀಕ್ಷೆಯಲ್ಲಿ ಫೇಲಾದೆನೆಂದು ಗುಡ್ಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ ಅವನಿಗೆ ಬೆಟ್ಟ ಹತ್ತುವುದೇ ಕಷ್ಟವಾಗಿ ವಾಪಾಸು ಮನೆಗೆ ಮರಳಿದ...

ಪತ್ರದ ಮೂಲಕವೇ ನಡೆಯುತ್ತಿದ್ದ ಪ್ರೇಮ ವ್ಯವಹಾರ ಎಲ್ಲರಿಗೂ ತಿಳಿಯುತ್ತದೆ ಎಂಬ ಭಯದಿಂದ ಅದನ್ನು ನಿಲ್ಲಿಸಿ ಅವರಿಬ್ಬರೂ ಒಂದು ದಿನ ಮನೆ ಬಿಟ್ಟು ಓಡಿ ಹೋದರು..

ಆಫೀಸಿನ ಕೆಲಸ ಮುಗಿಸಿ ವಾಪಾಸ್ ಬರುತ್ತಿದ್ದವನಿಗೆ ಸಿನಿಮಾಗೆ ಹೋಗಲು ಕಾಯುತ್ತೇನೆ ಎಂದ ಹೆಂಡತಿಯ ನೆನಪಾಗಿ ಮನೆಯ ದಾರಿ ತಪ್ಪಿಹೋಯಿತು...

ಕೈಗೆ ಪೆಟ್ಟು ಬಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಅಂಬುಲೆನ್ಸ್ ಅಪಘಾತಕ್ಕೀಡಾದುದರಿಂದ ರೋಗಿಯೂ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ...

ಗಂಡನ ಕಾಟದಿಂದ ಕಣ್ಣಿರಲ್ಲೇ ಮೀಯುತ್ತಿಇರುವ ಸೊಸೆಯ ಕಷ್ಟ ನೋಡಲಾಗದೆ ಅತ್ತೆ ಒಂದು ದಿನ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದಳು...

ಸಾಹುಕಾರರಿಗೆ ಬಾಕಿ ಕೊಡಬೇಕಿದ್ದ ಸಾಲಕ್ಕೆ ಪ್ರತಿಯಾಗಿ ಜೀತ ಮಾಡಲೊಪ್ಪಿದ ಆತನಿಗೆ ಸಾಹುಕಾರರನ್ನು ಹೊಡೆಯುವ ಶಕ್ತಿ ಕೊನೆವರೆಗೂ ಬರಲೇ ಇಲ್ಲ...

ರಾಷ್ಟ್ರೀಯತೆ ಮತ್ತು ಕೋಮುವಾದ

ಮನುಷ್ಯ ಸಂಘಜೀವಿ. ತಾನು ಅಸ್ತಿತ್ವಕ್ಕೆ ಬಂದಾಗಿನಿಂದ ತನ್ನ ಕನಸುಗಳನ್ನು ಬಯಕೆಗಳನ್ನು ಹಂಚಿಕೊಳ್ಳಲು ಪರಿಸರದ ಜೊತೆ ನಿಕಟ ಸಂಬಂಧವನ್ನು ಬೆಳೆಸಿಕೊಂಡು ಬಂದಿದ್ದು ಇದಕ್ಕೆ ಸಾಕ್ಷಿ. ಪರಿಸರವೂ ಸಹ ತಾನೇ ಬೆಳೆಸಿದ ಮಾನವನ ಜೊತೆಗೆ ಬದಲಾಗುತ್ತಲೇ ಬಂದಿದೆ. ಬದಲಾಗುತ್ತಲಿರುವ ಮಾನವ ಹಾಗೂ ಪರಿಸರದಲ್ಲಿ ಸಮಾಜ ಎನ್ನುವ ಪದ ಉದ್ಭವಿಸಿದ್ದು ಬಹಳ ಹಿಂದೆ. ಒಂದೇ ರೀತಿಯ ಭಾವನೆಗಳು,ಯೋಚನಾ ಲಹರಿ ಒಂದೇ ಪರಿಸರದಲ್ಲಿ ಇದ್ದಾಗ ಸಮಾಜ ನಿಮರ್ಾಣವಾಗುವುದು ಸಹಜ. ಈ ರೀತಿ ಬೆಳೆದ ಸಮಾಜಕ್ಕೆ ಮಾನವ ಹೊಂದಿಕೊಂಡು ಹೋಗುವುದನ್ನು ಕಲಿತ. ಅದರ ಇನ್ನೊಂದೆಡೆ ಬೇರೆ ಪರಿಸರದಲ್ಲಿ ಬೇರೆ ಆಲೋಚನೆಗಳಿಂದ ಬೆಳೆದ ಇನ್ನೊಂದು ಸಮಾಜವನ್ನು ದ್ವೇಷಿಸುವುದನ್ನೂ ಕಲಿತ..ಅಂದಿಗೆ ಗುಂಪು ಅಥವಾ ಕೋಮುವಾದದ ಸೃಷ್ಟಿಯಾಯಿತು..ಆಗ ಸೃಷ್ಟಿಯಾದ ಈ ವಿಚಿತ್ರವಾದ ಇಂದಿಗೂ ಬೆಂಕಿಯಂತೆ ಅದೇ ಮಾನವನ ಅದೇ ಸಮುದಾಯವನ್ನು ಸುಡುತ್ತಿರುವುದು ವಿಷಾದದ ಸಂಗತಿ.

ಭಾರತ ವಿಶಿಷ್ಟ ಸಂಸ್ಕೃತಿಯ ವಿರಾಟ ರಾಷ್ಟ್ರ.ನಾಗರೀಕತೆಯ ಉಗಮಕಾಲದಿಂದಲೂ ಮನುಷ್ಯನೆಂಬ ಪ್ರಾಣಿಗೆ ನೆಲೆಯಾದ ಪ್ರದೇಶ.ತದನಂತರ ವಲಸೆ ಬಂದವರಿಗೆಲ್ಲರಿಗೂ ಆಶ್ರಯ ನೀಡಿದ ದೇಶ..ಈಗ ವಿವಿಧತೆಯಲ್ಲಿ ಏಕತೆಯನ್ನು ಮೆರೆಯುತ್ತಿರುವ ಗಣರಾಜ್ಯ..ಸಕಲ ಧರ್ಮ, ಭಾಷೆ ,ಸಂಸ್ಕೃತಿ, ಆಹಾರ ವೈಚಿತ್ರ್ಯಗಳಿಗೆ ಸಾಕ್ಷಿಯಾಗಿರುವ ನಾಡಿನಲ್ಲಿರುವ ಸಾಮಾನ್ಯನಿಗೂ ಇದು ನಮ್ಮ ದೇಶ ಎಂದು ಹೇಳಿಕೊಳ್ಳುವುದು ಹೆಮ್ಮೆಯ ಸಂಗತಿ..ಆದರೆ ಯಾವ ಕಾರಣಕ್ಕೆ ಈ ರಾಷ್ಟ್ರೀಯತೆಯ ಭಾವನೆ ಅಂಕುರಿಸಿತೋ ಅದೇ ಆಧಾರದ ಮೇಲೆ ಕೋಮುವಾದ ಹುಟ್ಟಿರುವುದು ವಿಚಿತ್ರ ವಿಚಾರ.

ಇತಿಹಾಸದ ಪುಟಗಳನ್ನು ಹಿಂತಿರುವುದಾಗ ಸ್ವತಂತ್ರ ಭಾರತದ ಪರಿಚ್ಛೇದದಲ್ಲಿ ಮೊದಲ ಸಾಲಿನಲ್ಲಿರುವುದು ಧರ್ಮದ ಆದಾರದ ಮೇಲೆ ಭಿನ್ನ ಗಣರಾಜ್ಯಗಳನ್ನಗಿಸಿದ್ದು. ನಂತರದ ಭಾಷೆಯಾಧಾರದ ಮೇಲೆ ಮತ್ತೆ ರಾಜ್ಯಗಳಾಗಿ ವಿಭಾಗಿಸಿದ್ದು. ಈ ರೀತಿ ಜನರನ್ನು, ಪರಿಸರವನ್ನು ಹಾಗೂ ಅವರ ವಿಚಾರಗಳನ್ನು ಪ್ರತ್ಯೇಕ ಮಾಡಿದ್ದೇ ಇಂದಿನ ಕೋಮುವಾದಕ್ಕೆ ನಾಂದಿಯಾಗಿದೆ ಎಂದರೆ ತಪ್ಪಾಗಲಾರದು. ಕೋಮುವಾದ ಕೇವಲ ವಾದವಾಗಿರದೆ ಯುದ್ಧಕ್ಕೆ ತಿರುಗಿ ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ತರುತ್ತಿರುವುದು ಕಳವಳಕ್ಕೆ ಕಾರಣ. ಭಾರತದ ಸಂವಿಧಾನದಲ್ಲಿ 'ಸೆಕ್ಯುಲಾರ್' ಎಂಬ ಪದ ಸೇರಿಸಿದ ಮಾತ್ರಕ್ಕೆ ಪ್ರಜೆಗಳ ಮನದಲ್ಲಿ ಬೇರೂರಿದ ಕೋಮುವಾದದ ಭಾವನೆಯನ್ನು ಕಿತ್ತು ರಾಷ್ಟ್ರೀಯತೆಯ ಬೀಜ ಬಿತ್ತುವುದು ಕಷ್ಟ.

ಭಾರತದ ಯಾವುದೋ ರಾಜ್ಯದ ಮೂಲೆಯೊಂದರಲ್ಲಿ ಮಗುವೊಂದು ಹುಟ್ಟಿದರೆ ಜನನ ಪತ್ರದಲ್ಲಿ ಮಗುವಿನ ಜಾತಿ ನಮೂದಿಸಬೇಕು..ಭಾಷೆ ನಮೂದಿಸಬೇಕು.. ಹೀಗೆ ಹುಟ್ಟಿನಿಂದಲೇ ಗುಂಪುಗಾರಿಕೆ ಪ್ರಾರಂಭವಾಗುತ್ತದೆ.ಮಗು ಬೆಳೆಯುತ್ತಿದ್ದಂತೆ ತಾನು,ತನ್ನ ಕುಟುಂಬ,ತನ್ನ ಊರು,ತನ್ನ ಜಾತಿ,ತನ್ನ ಭಾಷೆ ಎಂಬ ಭಾವನೆಯೂ ಬೆಳೆಯುತ್ತದೆ.ಇದನ್ನೇ ತನ್ನತನ ಎಂದು ಭಾವಿಸುವ ಜನರಿಗೆ ಸಮಾಜವೂ ಪುಷ್ಟಿ ನೀಡುತ್ತದೆ. ಜೀವನದ ಪ್ರತಿ ಘಟ್ಟದಲ್ಲೂ ಒಂದಲ್ಲಾ ಒಂದು ಕಾರಣಕ್ಕೆ ಪ್ರತಿಯೊಬ್ಬನೂ ಕೋಮುಭಾವನೆಯನ್ನು ಪ್ರದರ್ಶಿಸುತ್ತಾನೆ. ಹಾಗಿದೆ ನಮ್ಮ ಸಮಾಜ.

ಅದರ ಪರಿಣಾಮ...? 1984 ರಲ್ಲಿ ಸಿಖ್ ಸಮುದಾಯ ದಂಗೆಯೆುದ್ದಿದ್ದು...1992 ರಲ್ಲಿ ಬಾಬ್ರಿ ಮಸೀದಿ ವಿಚಾರ ...1993 ರಲ್ಲಿನ ಮುಂಬಯಿ ಸ್ಫೋಟ...ಇತ್ತೀಚಿನ ಗೋದ್ರಾ ಹತ್ಯಾಕಾಂಡ... ಇನ್ನೂ ಮನಪಟಲದಿಂದ ಮಾಸಿಲ್ಲ.. ಭಾರತ ತನ್ನೆರಡು ಪ್ರಧಾನಿಗಳನ್ನು ಕಳೆದುಕೊಂಡಿದ್ದೂ ಈ ವಿಚಾರಕ್ಕೇ... ಪ್ರತ್ಯೇಕ ರಾಜ್ಯ ಬೇಕೆಂಬ ಕೂಗು ಇನ್ನೂ ಕೇಳಿ ಬರುತ್ತಿದೆ. ಇತ್ತೀಚಿನ ಕನರ್ಾಟಕದಲ್ಲಿ ನಡೆಯುತ್ತಿರುವ ಕ್ರೈಸ್ತ ದೇವಾಲಯಗಳ ಮೇಲಿನ ದಾಳಿ ಇನ್ನೆಲ್ಲಿಗೆ ಕೊಂಡೊಯ್ಯುತ್ತದೆಯೋ ತಿಳಿಯದು.. ವಸುಧೈವ ಕುಟುಂಬಕಂ ಎಂದು ಪುರಾಣಗಳಲ್ಲಿ ಸಾರಿ ಪ್ರಪಂಚಕ್ಕೇ ಮಾದರಿಯಾದ ರಾಷ್ಟ್ರವೊಂದು ಕೋಮುವಾದ ಗರಗಸಕ್ಕೆ ಸಿಕ್ಕಿ ಚೂರಾಗುತ್ತಿದೆ ಎಂದರೆ ಆಶ್ಚರ್ಯವಾಗುವುದು ಸಹಜ.

ಕೋಮುವಾದ ರಾಷ್ಟ್ರೀಯತೆಗೆ ಹೇಗೆ ಧಕ್ಕೆ ತರುತ್ತದೆ..? ಇದೆಂಥಾ ಪ್ರಶ್ನೆ.. ಎರಡು ವಿರುದ್ಧ ಪದಗಳು ಧಕ್ಕೆ ತರದೆ ಇನ್ನೇನು ಮಾಡುತ್ತವೆ? ಕೋಮುವಾದ ಜನರ ಮನಸ್ಸನ್ನು ವಿಭಜಿಸುವ ಭಾವ. ರಾಷ್ಟ್ರೀಯತೆ ಮನಗಳನ್ನು ಒಗ್ಗೂಡಿಸುವ ಭಾವ. ಕೋಮುವಾದ ಸಮಾಜದಲ್ಲಿ ಬಿರುಕನ್ನು ಉಂಟುಮಾಡುತ್ತಾ ದೇಶವೊಂದರ ಅಂತರ್ಕಲಹಕ್ಕೆ ಮುನ್ನುಡಿ ಬರೆಯುತ್ತದೆ. ದೇಶಕ್ಕೆ ಆಂತರಿಕ ಅಭದ್ರತೆಗಿಂತ ಹೆಚ್ಚಿನ ಅಪಾಯದ ಸ್ಥಿತಿ ಇನ್ನೊಂದಿಲ್ಲ..ಹೀಗೆ ಮುಂದುವರಿದರೆ ಈ ಕೋಮುವಾದ ದೇಶವನ್ನೇ ವಿಭಜಿಸುವ.. ಹೊಸರಾಷ್ಟ್ರವನ್ನೇ ಹುಟ್ಟುಹಾಕುವಂತಹ ಗಂಭೀರ ಪರಿಸ್ಥಿತಿಗೆ ಕೊಂಡೊಯ್ಯುಬಹುದು..ನಾವು ಎಚ್ಚರವಹಿಸಬೇಕಷ್ಟೆ...
ರಾಷ್ಟ್ರವೊಂದು ಬಲವಾಗಿರಬೇಕಾದರೆ ಅದರ ಪ್ರತಿಯೊಂದು ಘಟಕವೂ ಸರಿಯಾಗಿರಬೇಕು. ಭಾರತದಂತಹ ಪ್ರಜಾರಾಜ್ಯದಲ್ಲಿ ಪ್ರಜೆಗಳೇ ಪ್ರಭುಗಳಾಗಿರುವಾಗ ಕೋಮುವಾದವನ್ನು ಹತ್ತಿಕ್ಕುವುದು... ರಾಷ್ಟೀಯತೆಯನ್ನು ಬೆಳೆಸುವುದು ಜನರ ಕೈಯಲ್ಲೇ ಇದೆ. ಕವಿ ಕುವೆಂಪು ಹೇಳಿದಂತೆ ಗುಂಪುಗಾರಿಕೆ ಬಿಟ್ಟು ಚೇತನಗಳೆಲ್ಲ ಅನಿಕೇತನಗಳಾಗಬೇಕು. ಭಾಷೆಯಾವುದಾದರೇನು ವೇಷಯಾವುದಾದರೇನು ದೇಶ ಒಂದು ಎಂಬ ಭಾವನೆ ಎಲ್ಲರಲ್ಲಿ ಬಂದಾಗ ಕೋಮುವಾದ ಅದೃಶ್ಯವಾಗುವುದರಲ್ಲಿ ಸಂದೇಹವಿಲ್ಲ. ಅದೇ ರಾಷ್ಟ್ರೀಯತೆಯ ಭಾವನೆಯಲ್ಲವೇ?

Thursday, December 25, 2008

ವಾಕ್ಯವೊಂದರ ಕಥೆಗಳು

ರಸ್ತೆ ಬದಿಯ ಮನೆಯ ಬಾಗಿಲಲ್ಲಿ ನಿಂತು ಕಾಯುತ್ತಿದ್ದ ಅವಳ ಮಗು ಒಳಗಡೆ ಅಳದೆ, ದಿನದಂತೆ ಇಂದೂ ಬರುವ ಹೊಸ ಅಪ್ಪನ ನಿರೀಕ್ಷೆಯಲ್ಲೇ ನಿದ್ದೆ ಮಾಡಿತ್ತು...

ಅಪ್ಪನ ಆರೋಗ್ಯ ಸರಿ ಇಲ್ಲ ಎಂದು ಅಮೆರಿಕಾದಿಂದ ಡಾಲರ್ ಸಮೇತ ಬಂದ ಮಗನಿಗೆ ಭಾರತದ ಹವೆ ಸರಿಹೋಗದ ಕಾರಣ ಆಸ್ಪತ್ರೆಗೆ ಸೇರಿಸಬೇಕಾಯಿತು...

ಪ್ರೀತಿ ಪ್ರೀತಿ ಎಂದು ಕನವರಿಸುತ್ತಲೇ ಇದ್ದ ಪ್ರೇಮಿ ಕೊನೆಗೊಂದು ದಿನ ಪ್ರೀತಿ ಅವನೆದುರಿಗೆ ಬಂದು ನಿಂತಾಗ ಮಾತು ನಿಲ್ಲಿಸಿಬಿಟ್ಟು ಮೂಕನಾದ...

ದಿನವೂ ಬಾತ್ರೂಂಗಾಗಿ ಕ್ಯೂ ನಿಂತು ನಿಂತು ಬೇಸತ್ತ ಹಾಸ್ಟೆಲ್ ಹುಡುಗ ಅಂದು ಮುಂಜಾನೆ ಬೇಗ ಎದ್ದು ಬಾತ್ರೂಂ ಬಳಿ ಕ್ಯೂ ಇಲ್ಲದುದ್ದನ್ನು ನೋಡಿ ವಾಪಾಸ್ ಬಂದು ಮುಸುಕೆಳೆದುಕೊಂಡ...

ಗಿಟಾರ್ ಕಲಿಯುತ್ತೆನೆಂದು ಅಪ್ಪನ ಬಳಿ ಹಣ ಕೇಳಿದ ಮಗನಿಗೆ ಅಪ್ಪ ಹಣ ಕೊಟ್ಟು ತೋಟಕ್ಕೆ ತಂತಿ ಬೇಲಿ ಹಾಕಲು ತಂತಿ ತರುವಂತೆ ಹೇಳಿದ..

ಮೂರುವರ್ಷಗಳಿಂದ ಜೊತೆಗಿದ್ದ, ಪ್ರೀತಿಸಿದ ಹುಡುಗಿಗೆ ಮಾತು ಬರುತ್ತಿಲ್ಲ ಎಂದು ತಿಳಿದ ಮೇಲೆ ಕೈಕೊಟ್ಟ ಹುಡುಗನಿಗೆ ಕಿವಿಯೇ ಕೇಳುತ್ತಿರಲಿಲ್ಲ...

ನಮ್ಮ ಮನೆಯ ಗೋಡೆಯ ಮೇಲಿರುವ ಗೋಲಾಕಾರದ ಗಡಿಯಾರದ ಮುಳ್ಳುಗಳು ಒಬ್ಬರನ್ನೊಬ್ಬರು ಅಗಲಿರಲಾರದೆ ತಾಸಿಗೊಮ್ಮೆ ಒಂದುಗೂಡುತ್ತವೆ...

Wednesday, December 17, 2008

ಅನಾಥ ಸೋಲು

ಗೆಲ್ಲುವುದು ಸುಲಭವಲ್ಲ.. ಗೆದ್ದಮೇಲೆ ಅದನ್ನು ಅರಗಿಸಿಕೊಲ್ಲುವುದೂ ಸುಲಭವಲ್ಲ.. ಸೋಲುವುದು ಸುಲಭ.. ಆದರೆ ಸೋತದ್ದನ್ನು ಅರಗಿಸಿಕೊಳ್ಳುವುದು ಸುಲಭವಲ್ಲ.. ಹೀಗಾಗಿ ಸೋಲಿಗೂ ಗೆಲುವಿಗೂ ಜಾಸ್ತಿ ವ್ಯತ್ಯಾಸವಿಲ್ಲಾ.. ಗೆದ್ದರೆಂದ ಮಾತ್ರಕ್ಕೆ ಅದು ಗೆಲುವಲ್ಲ .. ಸೋತರೆಂದ ಮಾತ್ರಕ್ಕೆ ಸೋಲಲ್ಲ.. ಗೆದ್ದು ಸೋತವರಿರುತ್ತಾರೆ.. ಸೋತು ಗೆದ್ದವರಿರುತ್ತಾರೆ.. ಸೋಲನ್ನು ಗೆಲುವೆಂದು ತಿಳಿದವರಿರುತ್ತಾರೆ.. ಸೋಲನ್ನೇ ಗೆಲುವಿನ ಸೋಪಾನವಾಗಿಸಿಕೊಂಡವರಿರುತ್ತಾರೆ..

ತನ್ನ ಸೋಲಿನಿಂದ ಪಾಠ ಕಲಿತವ ಬುದ್ಧಿವಂತನಾದರೆ ಇತರರ ಸೋಲಿನಿಂದ ಪಾಠ ಕಲಿತವ ಮಹಾಬುದ್ಧಿವಂತ.. ಗೆಲುವು ಅದರ ತಂದೆ ತಾಯಿಗಳನ್ನು ತಾನೆ ಹುಟ್ಟಿಹಾಕಿ ಕೊಳ್ಳುತ್ತದೆ... ಆದರೆ ಸೋಲು ಅನಾಥ.. ಸೋಲಿಗೂ ತಂದೆ ತಾಯಿಗಳಾಗಿ.. ಸೋತವರ ಬೆನ್ನು ತಟ್ಟಿ.. ಸೋಲಿಗೊಂದು ಅರ್ಥ ಕೊಡಿ..

ಭಾವ

ಮದುವೆಗೂ ಮುಂಚೆ
ಹುಡುಗಿಯ
ಹಾವಭಾವಕ್ಕೆ
ಮರುಳಾದ
ಆತ,
ಮದುವೆಯ ನಂತರ
ಅದೇ ಹುಡುಗಿಯ
'ಹಾವ'
ಭಾವಕ್ಕೆ
ಹೆದರಿ ನಡುಗಿದ..

Wednesday, December 10, 2008

ನೋಟ.. ಕಾಟ.. ತೋಟ..

ಈ ಮೇಲಿನ ಮೂರು ಶಬ್ದಗಳಲ್ಲಿ ಹೆಚ್ಚಿನ ವ್ಯತ್ಯಾಸವಿರದಿದ್ದರೂ ವ್ಯತ್ಯಾಸವಿರುವುದಂತೂ ಸತ್ಯ.. 'ನೋಡುವುದು' ನಮ್ಮ ಪ್ರಯತ್ನದಿಂದ.. 'ತೋರುವುದು' ನಮ್ಮದಲ್ಲದ ಪ್ರಯತ್ನದಿಂದ.. ಮತ್ತು 'ಕಾಣುವುದು' ಯಾವುದೇ ಪ್ರಯತ್ನವಿಲ್ಲದೆ... ನಮಗೆ ನಮ್ಮ ಹತ್ತಿರವಿರುವವರೂ ಕಾಣುತ್ತಿಲ್ಲ ಅಂತಾದರೆ ನಾವು ನೋಡುತ್ತಿಲ್ಲ ಅಥವಾ ಅವರು ತೋರುತ್ತಿಲ್ಲ ಎಂದು ಅರ್ಥೈಸಬಹುದು... ನಮ್ಮ ದೃಷ್ಟಿಗೆ ನೇರವಾಗಿ ನೋಡಿದರೆ ನಮಗೆ ಕಾಣುವುದು ಒಂದೇ ರೀತಿ ಇರಬಹುದು... ಅದನ್ನೇ ಸತ್ಯ ಎಂದು ಇತರರಿಗೆ ತೋರುವುದು ತಪ್ಪು... ನೋಟದ ಇನ್ನೊಂದು ಮುಖದಲ್ಲಿಯೂ ಇರಬಹುದಾದ ಸತ್ಯವನ್ನು ನಾವು ನೋಡಬೇಕು.. ಪ್ರತ್ಯಕ್ಷವಾಗಿ ಕಾಣುವುದು ಪ್ರಮಾಣ ಅಲ್ಲ.. ಅದನ್ನು ಪ್ರಮಾಣಿಸಿ ನೋಡಬೇಕು.. ಪ್ರಮಾಣವಾದ ಸತ್ಯವನ್ನು ಜಗತ್ತಿಗೆ ತೋರಬೇಕು... ಆ ನಿಟ್ಟಿನಲ್ಲಿ ನಾವು ನೋಡೋಣ.. ಕಂಡರೆ ತೋರೋಣ..

Tuesday, December 9, 2008

ಇರಿತ

ಹುಡುಗೀ...ನಿನ್ನ ಮೊನಚು ಕಣ್ಣುಗಳು ನನ್ನ ನೋಡದೆ ಇರದೇ..?
ಪ್ರಿತಿಯಿದ್ದರೆ...ಮತ್ಯಾಕೆ ನನ್ನೆದೆಗೆ ಆ ಕಣ್ಣಿನಿಂದ ಹಾಗೆ ಇರಿದೆ...?

ಅವನೂ ಅವಳೂ ಹೀಗಿದ್ದರು ...

ಬಳಪಕ್ಕಾಗಿ ಅವನೂ ಅವಳೂ ಜಗಳವಾಡುತ್ತಾರೆ ...ಟೀಚರ್ ಬಯ್ಯುತ್ತಾರೆ...
ಇಬ್ಬರೂ ಅಳುತ್ತಾರೆ...

ಮಣ್ಣಿನಲ್ಲಿ ಇಬ್ಬರೂ ಆಡುತ್ತಾರೆ... ಮೈಗೆಲ್ಲಾ ಮಣ್ಣು ಮೆತ್ತಿಕೊಳ್ಳುತ್ತಾರೆ...
ಆಟ ಮುಂದುವರಿಯುತ್ತದೆ ...

ಕಾಲೇಜಿನಲ್ಲಿ ಅವಳು ಚಿಗರೆಯಂತೆ ಓಡಾಡುತ್ತಾಳೆ... ಆತ ಪ್ರೀತಿಸುತ್ತಾನೆ...
ಅವಳು ಒಪ್ಪುತ್ತಾಳೆ...

ಆತನಿಗೆ ಸಾಕೆನಿಸುತ್ತದೆ ... ಅವಳನ್ನು ನಿರಾಕರಿಸುತ್ತಾನೆ...
ಅವಳೊಬ್ಬಳೇ ಅಳುತ್ತಾಳೆ...

ಅವನ ಮನಸ್ಸಿಗೆ ವಯಸ್ಸಾಗುತ್ತದೆ... ಕ್ಷಮೆ ಕೇಳುತ್ತಾನೆ...
ಅವಳೆದುರು ಅಳುತ್ತಾನೆ...

'ಒಂದಾಗೋಣ ಬಾ..' ಎನ್ನುತ್ತಾನೆ... 'ಕ್ಷಮಿಸಿದ್ದೇನೆ ಹೋಗು'... ಎನ್ನುತ್ತಾಳೆ...
ಮತ್ತೆ ಅವನೇ ಅಳುತ್ತಾನೆ...

ಅವನಿಗೆ 'ಅಯ್ಯೋ' ಎನ್ನುತ್ತಾರೆ ... ಆಕೆಗೆ 'ಛಿ...' ಎನ್ನುತ್ತಾರೆ...
ಅಲ್ಲಿಗೆ ಜೀವನದ ಕಥೆ ಮುಗಿದಿರುತ್ತದೆ...

Saturday, December 6, 2008

ಸಮಾಜ ಪರಿಚಯ

ಮನುಷ್ಯ ಸಮಾಜವನ್ನು ನಿರ್ಮಿಸಿಕೊಂಡದ್ದು ಅವನಿಗಾಗಿ ಅಲ್ಲ... ಅದು ಸಮಾಜಕ್ಕಾಗಿಯೇ .... ಸಮಾಜದಿಂದ ದೂರವಾಗುವ ಪ್ರಯತ್ನ ಮಾಡಿದಷ್ಟೂ ಮನುಷ್ಯ ಸಮಾಜಕ್ಕೆ ಹತ್ತಿರವಾಗುತ್ತಲೇ ಬರುತ್ತನೆಯೇ ವಿನಹ ದೂರವಾಗುವುದಿಲ್ಲ.... ಹುಟ್ಟುವಾಗ ಮನುಷ್ಯ ಕಿರುಚುತ್ತಾನೆ.. ಅದನ್ನು ಸಮಾಜ ಸಹಿಸುತ್ತದೆ.... ಮತ್ತೆ ಮಣ್ಣಾದ ಮೇಲೆ ಸಮಾಜ ಅಳುತ್ತದೆ.. ಸಮಾಜ ನಗಲು ಪ್ರಾರಂಭಿಸುವುದು ಇನ್ನುಳಿದ ಸಮಯದಲ್ಲಿ.. ಸಮಾಜಕ್ಕೆ ಜೀವವಿಲ್ಲ.. ಆದರೂ ನಗುತ್ತದೆ.. ಇತರರನ್ನು ಅಳುವಂತೆ ಮಾಡುತ್ತದೆ.. ಮನುಷ್ಯ ದೂರ ಸರಿಯುವಂತೆ ಮಾಡಿ ಅವನನ್ನು ಹತ್ತಿರ ಸೆಳೆಯುತ್ತದೆ.. ಹೀಗಾಗಿ ಸಮಾಜದಿಂದ ದೂರವಾಗುವುದು ಕಷ್ಟ .. ಹತ್ತಿರವಿರುವುದನ್ನು ಕಲಿತರೆ..ಬೆರೆತರೆ ಮನುಷ್ಯ ನೆಮ್ಮದಿಯ ಜೀವನ ನಡೆಸಬಹುದು.. ಸಮಾಜಕ್ಕೆ ಹೆದರಿಸಿದರೆ ಸಮಾಜ ಹೆದರಿಸುತ್ತದೆ .. ಪ್ರೀತಿಸಿದರೆ ಪ್ರೀತಿಸುತ್ತದೆ.. ಬೈದರೆ ಬಯ್ಯುತ್ತದೆ..

ಸಮಾಜ ಕನ್ನಡಿ ಇದ್ದ ಹಾಗೆ.. ನಮ್ಮನ್ನು ನಾವು ಕಂಡುಕೊಳ್ಳಲು ಸಮಾಜದ ಎದುರು ಹೋಗಿ ನಿಲ್ಲಬೇಕು.. ಹಗಲಿನ ಸಮಯದಲ್ಲಿ...

Tuesday, December 2, 2008

ಪರಿಕಲ್ಪನೆ

ಕಲ್ಪನೆ ಎಂಬುದು ಸುಂದರ ಶಬ್ದ.. ಎಂತವರಿಗೂ ಎಂತದೋ ಅನುಭವ ಉಂಟುಮಾಡುವ ಸುಂದರ ಭಾವನೆ.. ಕಲ್ಪನೆಗೆ ಮಿತಿ ಇಲ್ಲ... ನೀವೇ ಕಲ್ಪಿಸಿಕೊಳ್ಳಿ...ನಿಮ್ಮಿಂದಾಗದ ಎಷ್ಟೋ ಕೆಲಸಗಳು ಪೂರ್ಣವಾಗುವುದು ಕಲ್ಪನೆಯಲ್ಲಿ... ಸಾಧನೆಗಳು ಪ್ರಾರಂಭವಾಗುವುದೇ ಕನಸಿನಿಂದ ಕಲ್ಪನೆಯಿಂದ ... ಕನಸಿಗೂ ಕಲ್ಪನೆಗೂ ಹತ್ತಿರದ ಸಂಬಂಧ.. ಕನಸು ಆತ್ಮದ ಕಲ್ಪನೆ.. ಮನಸಿನ ಕನಸು ಕಲ್ಪನೆ.. ಮನಸಿಗೆ ಆತ್ಮ ಅರ್ಥವಾದಾಗ ಕನಸು ಕಲ್ಪನೆಯಾಗುತ್ತದೆ.. ನನಸಾಗುತ್ತದೆ.. ನಿಮ್ಮ ಸುಂದರ ಕಲ್ಪನೆಗೆ ನೀವೇ ಹೊಣೆ.. ನಿಮ್ಮ ಕನಸಿಗೆ ನೀವೇ ಜವಾಬ್ದಾರರು.. ನಿಮ್ಮ ಪರಿಸರ ಸಂಸ್ಕೃತಿಯೇ ನಿಮ್ಮ್ಮ ಕಲ್ಪನೆಗೆ ಕನಸಿಗೆ ಕಾರಣವಾಗುತ್ತದೆ.. ನಿಮ್ಮ ಕಲ್ಪಣೆ ನಿಮ್ಮನ್ನು ಬಿಂಬಿಸುತ್ತದೆ... ನಿಮ್ಮನ್ನು ಪ್ರತಿಫಲಿಸುತ್ತದೆ.. ಹೀಗಾಗಿ ನಿಮ್ಮ ಇನ್ನೊಂದು ರೂಪವೇ ಕಲ್ಪನೆ ಎನ್ನಬಹುದು.. ನಿಮ್ಮ ಕಲ್ಪನೆಗೆ ರೂಪು ಕೊಡಿ.. ಅದರಿಂದ ಎಲ್ಲರಿಗಿಂತ ಹೆಚ್ಚಾಗಿ ಖುಷಿಯಾಗುವುದು ನಿಮಗೆ.. ನಿಮ್ಮನ್ನು ನೀವು ಸಂತೋಷವಾಗಿಡಲು ಇದೊಂದು ಮಾರ್ಗವಷ್ಟೇ.. ನಿಮ್ಮ ಕಲ್ಪನೆಗೆ ರೂಪು ಕೊಡುವುದು.. ಬಣ್ಣ ತುಂಬುವುದು..
ಜಾಸ್ತಿ ಆಯ್ತು... ಮತ್ತೆ ಬರೆಯುತ್ತೇನೆ...

Monday, November 24, 2008

ಪುಸ್ತಕಾನ್ವೇಷಣೆ ..

ನಿನ್ನೆ ಅರಮನೆ ಮೈದಾನದಲ್ಲಿ ನಡೆಯುತ್ತಿದ್ದ ಪುಸ್ತಕ ಪ್ರದರ್ಶನಕ್ಕೆ ಹೋದಾಗ ಒಂದ್ನಾಲ್ಕು ಪುಸ್ತಕ ತಂದೆ ..ತಂದಿದ್ದು ನಾನಾದರೂನಿಮಗೂ ಹೇಳ ಬೇಕು ಅನಿಸಿತು ಅದಕ್ಕೆ ಬರಿತಾ ಇದೀನಿ.. ಮೊದಲು ಪುಸ್ತಕಗಳ ಆಯ್ಕೆಗೆ ಹೋದಾಗ ನನಗೆ ಕಂಡಿದ್ದು 'ನೇಮಿಚಂದ್ರ ರವರ ಸಂಪೂರ್ಣ ಕಥೆಗಳು..'.. ಹಳದಿ ಬಣ್ಣದ ಕವರಿಗೆ ಶ್ರೀಪಾದರ ವಿನ್ಯಾಸವಿತ್ತು..ನೋಡಿದ ತಕ್ಷಣ ಮನಸಲ್ಲೇ ಒಪ್ಪಿಕೊಂಡೆ.. ಸರಿ ಸುಮಾರು ಮುನ್ನೂರು ಮಳಿಗೆಗಳಲ್ಲಿ ಪುಸ್ತಕ ಹುಡುಕಲು ಸಾಕಷ್ಟು ಕಷ್ಟವೇ ಆಯಿತು.. ನಮ್ಮ ಜಿಲ್ಲೆಯ ಶ್ರೀಧರ ಬಳೆಗಾರ ಅವರ 'ಒಂದು ಫೋಟೋದ ನೆಗೆಟಿವ್..' ಮನಸೆಳೆದ ಇನ್ನೊಂದು ಪುಸ್ತಕ..ಅಪಾರ ಅವರ ರೇಖಾಚಿತ್ರ ಮುಖಪುಟವನ್ನಲಂಕರಿತ್ತು .. ಅದನ್ನೂ ಬಿಡಲಿಲ್ಲಾ... ನನ್ನ ಜೊತೆ ಬಂದ ವಿಶಾಖ ಸಿ.ಡಿ.ಗಳನ್ನು ಹುಡುಕಿಹುಡುಕಿ ಸಾಕಾದ.. ನಾನೂ ಸಣ್ಣಕಥೆಗಳ ಪುಸ್ತಕ ಹುಡುಕುತ್ತಾ ಹುಡುಕುತ್ತಾ ಸಾಗುತ್ತಿದ್ದೆ... ದಿವಾಕರ್ ಅವರು ಸಂಗ್ರಹಿಸಿದ 'ಕನ್ನಡದಸಣ್ಣ ಕಥೆಗಳು' ನನ್ನ ಬ್ಯಾಗಿಗೆ ಬಿತ್ತು .. ಮರಳುವಾಗ ಅಚಾನಕ್ಕಾಗಿ ಸಿಕ್ಕಿ ಬಿದ್ದಿದ್ದು.. ಬೆಳಗೆರೆಯವರ 'ನಿ ಹಿಂಗ ನೋಡಬ್ಯಾಡ ನನ್ನ..' ಅವರ ಹೇಳಿ ಹೋಗು ಕಾರಣ ಓದಿ ಪ್ರಭಾವಿತನಾಗಿದ್ದ ನಾನು ಇದನ್ನೂ ಎತ್ತಿಕೊಂಡೆ.. ವಿಶಾಖ ಕೆಲವು ಸಿ.ಡಿ.ಗಳ ಜೊತೆಗೆವಕ್ರತುಂಡೋಕ್ತಿಗಳು' ಪುಸ್ತಕವನ್ನು ಚೀಲಕ್ಕೆರಿಸ್ದ .. ನಾಲ್ಕೂ ಪುಸ್ತಕಗಳು ಈಗ ಶೆಲ್ಫಿನಲ್ಲಿ ಕುಳಿತು ನಿದ್ರಿಸುತ್ತಿವೆ.. ಪರೀಕ್ಷೆ ಹತ್ತಿರಬರುತ್ತಿದ್ದುದರಿಂದ ಒದಲಾಕ್ತಾ ಇಲ್ಲ .. ಮಲಗಬೇಕಾದರೆ ಜೊತೆ ಕೊಡಲು ಮಯೂರವಿದೆ.. ಮಯೂರದಲ್ಲಿ ಸಚ್ಸಿದಾನಂದ ಹೆಗಡೆಯವರ ಅನ್ವೇಷಣೆ ಕಥೆ ಓದಿದೆ.. ಅದರ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.... ಈಗ ಇಷ್ಟು ಸಾಕು..


Saturday, November 22, 2008

ಕಾಯ ಅಂತಾರೆ ನನ್ನ

ಈ ವರೆಗೂ ನನ್ನ ಪರಿಚಯ ನಂಗೆ ಆಗಿಲ್ಲ ಅನಿಸ್ತಾ ಇದೆ..... ನಾಳೆ ಹೇಳುತ್ತೇನೆ.. ಭರವಸೆಯಿಡಿ.. ನಾಳೆಯ ಮೇಲೆ ...