Friday, December 26, 2008
ಮತ್ತೊಂದಿಷ್ಟು ವಾಕ್ಯಗಳು.. ಕಥೆಗಳು...
ಪರೀಕ್ಷೆಯಲ್ಲಿ ಫೇಲಾದೆನೆಂದು ಗುಡ್ಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ ಅವನಿಗೆ ಬೆಟ್ಟ ಹತ್ತುವುದೇ ಕಷ್ಟವಾಗಿ ವಾಪಾಸು ಮನೆಗೆ ಮರಳಿದ...
ಪತ್ರದ ಮೂಲಕವೇ ನಡೆಯುತ್ತಿದ್ದ ಪ್ರೇಮ ವ್ಯವಹಾರ ಎಲ್ಲರಿಗೂ ತಿಳಿಯುತ್ತದೆ ಎಂಬ ಭಯದಿಂದ ಅದನ್ನು ನಿಲ್ಲಿಸಿ ಅವರಿಬ್ಬರೂ ಒಂದು ದಿನ ಮನೆ ಬಿಟ್ಟು ಓಡಿ ಹೋದರು..
ಆಫೀಸಿನ ಕೆಲಸ ಮುಗಿಸಿ ವಾಪಾಸ್ ಬರುತ್ತಿದ್ದವನಿಗೆ ಸಿನಿಮಾಗೆ ಹೋಗಲು ಕಾಯುತ್ತೇನೆ ಎಂದ ಹೆಂಡತಿಯ ನೆನಪಾಗಿ ಮನೆಯ ದಾರಿ ತಪ್ಪಿಹೋಯಿತು...
ಕೈಗೆ ಪೆಟ್ಟು ಬಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಅಂಬುಲೆನ್ಸ್ ಅಪಘಾತಕ್ಕೀಡಾದುದರಿಂದ ರೋಗಿಯೂ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ...
ಗಂಡನ ಕಾಟದಿಂದ ಕಣ್ಣಿರಲ್ಲೇ ಮೀಯುತ್ತಿಇರುವ ಸೊಸೆಯ ಕಷ್ಟ ನೋಡಲಾಗದೆ ಅತ್ತೆ ಒಂದು ದಿನ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದಳು...
ಸಾಹುಕಾರರಿಗೆ ಬಾಕಿ ಕೊಡಬೇಕಿದ್ದ ಸಾಲಕ್ಕೆ ಪ್ರತಿಯಾಗಿ ಜೀತ ಮಾಡಲೊಪ್ಪಿದ ಆತನಿಗೆ ಸಾಹುಕಾರರನ್ನು ಹೊಡೆಯುವ ಶಕ್ತಿ ಕೊನೆವರೆಗೂ ಬರಲೇ ಇಲ್ಲ...
ರಾಷ್ಟ್ರೀಯತೆ ಮತ್ತು ಕೋಮುವಾದ
ಭಾರತ ವಿಶಿಷ್ಟ ಸಂಸ್ಕೃತಿಯ ವಿರಾಟ ರಾಷ್ಟ್ರ.ನಾಗರೀಕತೆಯ ಉಗಮಕಾಲದಿಂದಲೂ ಮನುಷ್ಯನೆಂಬ ಪ್ರಾಣಿಗೆ ನೆಲೆಯಾದ ಪ್ರದೇಶ.ತದನಂತರ ವಲಸೆ ಬಂದವರಿಗೆಲ್ಲರಿಗೂ ಆಶ್ರಯ ನೀಡಿದ ದೇಶ..ಈಗ ವಿವಿಧತೆಯಲ್ಲಿ ಏಕತೆಯನ್ನು ಮೆರೆಯುತ್ತಿರುವ ಗಣರಾಜ್ಯ..ಸಕಲ ಧರ್ಮ, ಭಾಷೆ ,ಸಂಸ್ಕೃತಿ, ಆಹಾರ ವೈಚಿತ್ರ್ಯಗಳಿಗೆ ಸಾಕ್ಷಿಯಾಗಿರುವ ನಾಡಿನಲ್ಲಿರುವ ಸಾಮಾನ್ಯನಿಗೂ ಇದು ನಮ್ಮ ದೇಶ ಎಂದು ಹೇಳಿಕೊಳ್ಳುವುದು ಹೆಮ್ಮೆಯ ಸಂಗತಿ..ಆದರೆ ಯಾವ ಕಾರಣಕ್ಕೆ ಈ ರಾಷ್ಟ್ರೀಯತೆಯ ಭಾವನೆ ಅಂಕುರಿಸಿತೋ ಅದೇ ಆಧಾರದ ಮೇಲೆ ಕೋಮುವಾದ ಹುಟ್ಟಿರುವುದು ವಿಚಿತ್ರ ವಿಚಾರ.
ಇತಿಹಾಸದ ಪುಟಗಳನ್ನು ಹಿಂತಿರುವುದಾಗ ಸ್ವತಂತ್ರ ಭಾರತದ ಪರಿಚ್ಛೇದದಲ್ಲಿ ಮೊದಲ ಸಾಲಿನಲ್ಲಿರುವುದು ಧರ್ಮದ ಆದಾರದ ಮೇಲೆ ಭಿನ್ನ ಗಣರಾಜ್ಯಗಳನ್ನಗಿಸಿದ್ದು. ನಂತರದ ಭಾಷೆಯಾಧಾರದ ಮೇಲೆ ಮತ್ತೆ ರಾಜ್ಯಗಳಾಗಿ ವಿಭಾಗಿಸಿದ್ದು. ಈ ರೀತಿ ಜನರನ್ನು, ಪರಿಸರವನ್ನು ಹಾಗೂ ಅವರ ವಿಚಾರಗಳನ್ನು ಪ್ರತ್ಯೇಕ ಮಾಡಿದ್ದೇ ಇಂದಿನ ಕೋಮುವಾದಕ್ಕೆ ನಾಂದಿಯಾಗಿದೆ ಎಂದರೆ ತಪ್ಪಾಗಲಾರದು. ಕೋಮುವಾದ ಕೇವಲ ವಾದವಾಗಿರದೆ ಯುದ್ಧಕ್ಕೆ ತಿರುಗಿ ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ತರುತ್ತಿರುವುದು ಕಳವಳಕ್ಕೆ ಕಾರಣ. ಭಾರತದ ಸಂವಿಧಾನದಲ್ಲಿ 'ಸೆಕ್ಯುಲಾರ್' ಎಂಬ ಪದ ಸೇರಿಸಿದ ಮಾತ್ರಕ್ಕೆ ಪ್ರಜೆಗಳ ಮನದಲ್ಲಿ ಬೇರೂರಿದ ಕೋಮುವಾದದ ಭಾವನೆಯನ್ನು ಕಿತ್ತು ರಾಷ್ಟ್ರೀಯತೆಯ ಬೀಜ ಬಿತ್ತುವುದು ಕಷ್ಟ.
ಭಾರತದ ಯಾವುದೋ ರಾಜ್ಯದ ಮೂಲೆಯೊಂದರಲ್ಲಿ ಮಗುವೊಂದು ಹುಟ್ಟಿದರೆ ಜನನ ಪತ್ರದಲ್ಲಿ ಮಗುವಿನ ಜಾತಿ ನಮೂದಿಸಬೇಕು..ಭಾಷೆ ನಮೂದಿಸಬೇಕು.. ಹೀಗೆ ಹುಟ್ಟಿನಿಂದಲೇ ಗುಂಪುಗಾರಿಕೆ ಪ್ರಾರಂಭವಾಗುತ್ತದೆ.ಮಗು ಬೆಳೆಯುತ್ತಿದ್ದಂತೆ ತಾನು,ತನ್ನ ಕುಟುಂಬ,ತನ್ನ ಊರು,ತನ್ನ ಜಾತಿ,ತನ್ನ ಭಾಷೆ ಎಂಬ ಭಾವನೆಯೂ ಬೆಳೆಯುತ್ತದೆ.ಇದನ್ನೇ ತನ್ನತನ ಎಂದು ಭಾವಿಸುವ ಜನರಿಗೆ ಸಮಾಜವೂ ಪುಷ್ಟಿ ನೀಡುತ್ತದೆ. ಜೀವನದ ಪ್ರತಿ ಘಟ್ಟದಲ್ಲೂ ಒಂದಲ್ಲಾ ಒಂದು ಕಾರಣಕ್ಕೆ ಪ್ರತಿಯೊಬ್ಬನೂ ಕೋಮುಭಾವನೆಯನ್ನು ಪ್ರದರ್ಶಿಸುತ್ತಾನೆ. ಹಾಗಿದೆ ನಮ್ಮ ಸಮಾಜ.
ಅದರ ಪರಿಣಾಮ...? 1984 ರಲ್ಲಿ ಸಿಖ್ ಸಮುದಾಯ ದಂಗೆಯೆುದ್ದಿದ್ದು...1992 ರಲ್ಲಿ ಬಾಬ್ರಿ ಮಸೀದಿ ವಿಚಾರ ...1993 ರಲ್ಲಿನ ಮುಂಬಯಿ ಸ್ಫೋಟ...ಇತ್ತೀಚಿನ ಗೋದ್ರಾ ಹತ್ಯಾಕಾಂಡ... ಇನ್ನೂ ಮನಪಟಲದಿಂದ ಮಾಸಿಲ್ಲ.. ಭಾರತ ತನ್ನೆರಡು ಪ್ರಧಾನಿಗಳನ್ನು ಕಳೆದುಕೊಂಡಿದ್ದೂ ಈ ವಿಚಾರಕ್ಕೇ... ಪ್ರತ್ಯೇಕ ರಾಜ್ಯ ಬೇಕೆಂಬ ಕೂಗು ಇನ್ನೂ ಕೇಳಿ ಬರುತ್ತಿದೆ. ಇತ್ತೀಚಿನ ಕನರ್ಾಟಕದಲ್ಲಿ ನಡೆಯುತ್ತಿರುವ ಕ್ರೈಸ್ತ ದೇವಾಲಯಗಳ ಮೇಲಿನ ದಾಳಿ ಇನ್ನೆಲ್ಲಿಗೆ ಕೊಂಡೊಯ್ಯುತ್ತದೆಯೋ ತಿಳಿಯದು.. ವಸುಧೈವ ಕುಟುಂಬಕಂ ಎಂದು ಪುರಾಣಗಳಲ್ಲಿ ಸಾರಿ ಪ್ರಪಂಚಕ್ಕೇ ಮಾದರಿಯಾದ ರಾಷ್ಟ್ರವೊಂದು ಕೋಮುವಾದ ಗರಗಸಕ್ಕೆ ಸಿಕ್ಕಿ ಚೂರಾಗುತ್ತಿದೆ ಎಂದರೆ ಆಶ್ಚರ್ಯವಾಗುವುದು ಸಹಜ.
ಕೋಮುವಾದ ರಾಷ್ಟ್ರೀಯತೆಗೆ ಹೇಗೆ ಧಕ್ಕೆ ತರುತ್ತದೆ..? ಇದೆಂಥಾ ಪ್ರಶ್ನೆ.. ಎರಡು ವಿರುದ್ಧ ಪದಗಳು ಧಕ್ಕೆ ತರದೆ ಇನ್ನೇನು ಮಾಡುತ್ತವೆ? ಕೋಮುವಾದ ಜನರ ಮನಸ್ಸನ್ನು ವಿಭಜಿಸುವ ಭಾವ. ರಾಷ್ಟ್ರೀಯತೆ ಮನಗಳನ್ನು ಒಗ್ಗೂಡಿಸುವ ಭಾವ. ಕೋಮುವಾದ ಸಮಾಜದಲ್ಲಿ ಬಿರುಕನ್ನು ಉಂಟುಮಾಡುತ್ತಾ ದೇಶವೊಂದರ ಅಂತರ್ಕಲಹಕ್ಕೆ ಮುನ್ನುಡಿ ಬರೆಯುತ್ತದೆ. ದೇಶಕ್ಕೆ ಆಂತರಿಕ ಅಭದ್ರತೆಗಿಂತ ಹೆಚ್ಚಿನ ಅಪಾಯದ ಸ್ಥಿತಿ ಇನ್ನೊಂದಿಲ್ಲ..ಹೀಗೆ ಮುಂದುವರಿದರೆ ಈ ಕೋಮುವಾದ ದೇಶವನ್ನೇ ವಿಭಜಿಸುವ.. ಹೊಸರಾಷ್ಟ್ರವನ್ನೇ ಹುಟ್ಟುಹಾಕುವಂತಹ ಗಂಭೀರ ಪರಿಸ್ಥಿತಿಗೆ ಕೊಂಡೊಯ್ಯುಬಹುದು..ನಾವು ಎಚ್ಚರವಹಿಸಬೇಕಷ್ಟೆ...
ರಾಷ್ಟ್ರವೊಂದು ಬಲವಾಗಿರಬೇಕಾದರೆ ಅದರ ಪ್ರತಿಯೊಂದು ಘಟಕವೂ ಸರಿಯಾಗಿರಬೇಕು. ಭಾರತದಂತಹ ಪ್ರಜಾರಾಜ್ಯದಲ್ಲಿ ಪ್ರಜೆಗಳೇ ಪ್ರಭುಗಳಾಗಿರುವಾಗ ಕೋಮುವಾದವನ್ನು ಹತ್ತಿಕ್ಕುವುದು... ರಾಷ್ಟೀಯತೆಯನ್ನು ಬೆಳೆಸುವುದು ಜನರ ಕೈಯಲ್ಲೇ ಇದೆ. ಕವಿ ಕುವೆಂಪು ಹೇಳಿದಂತೆ ಗುಂಪುಗಾರಿಕೆ ಬಿಟ್ಟು ಚೇತನಗಳೆಲ್ಲ ಅನಿಕೇತನಗಳಾಗಬೇಕು. ಭಾಷೆಯಾವುದಾದರೇನು ವೇಷಯಾವುದಾದರೇನು ದೇಶ ಒಂದು ಎಂಬ ಭಾವನೆ ಎಲ್ಲರಲ್ಲಿ ಬಂದಾಗ ಕೋಮುವಾದ ಅದೃಶ್ಯವಾಗುವುದರಲ್ಲಿ ಸಂದೇಹವಿಲ್ಲ. ಅದೇ ರಾಷ್ಟ್ರೀಯತೆಯ ಭಾವನೆಯಲ್ಲವೇ?
Thursday, December 25, 2008
ವಾಕ್ಯವೊಂದರ ಕಥೆಗಳು
ರಸ್ತೆ ಬದಿಯ ಮನೆಯ ಬಾಗಿಲಲ್ಲಿ ನಿಂತು ಕಾಯುತ್ತಿದ್ದ ಅವಳ ಮಗು ಒಳಗಡೆ ಅಳದೆ, ದಿನದಂತೆ ಇಂದೂ ಬರುವ ಹೊಸ ಅಪ್ಪನ ನಿರೀಕ್ಷೆಯಲ್ಲೇ ನಿದ್ದೆ ಮಾಡಿತ್ತು...
ಅಪ್ಪನ ಆರೋಗ್ಯ ಸರಿ ಇಲ್ಲ ಎಂದು ಅಮೆರಿಕಾದಿಂದ ಡಾಲರ್ ಸಮೇತ ಬಂದ ಮಗನಿಗೆ ಭಾರತದ ಹವೆ ಸರಿಹೋಗದ ಕಾರಣ ಆಸ್ಪತ್ರೆಗೆ ಸೇರಿಸಬೇಕಾಯಿತು...
ಪ್ರೀತಿ ಪ್ರೀತಿ ಎಂದು ಕನವರಿಸುತ್ತಲೇ ಇದ್ದ ಪ್ರೇಮಿ ಕೊನೆಗೊಂದು ದಿನ ಪ್ರೀತಿ ಅವನೆದುರಿಗೆ ಬಂದು ನಿಂತಾಗ ಮಾತು ನಿಲ್ಲಿಸಿಬಿಟ್ಟು ಮೂಕನಾದ...
ದಿನವೂ ಬಾತ್ರೂಂಗಾಗಿ ಕ್ಯೂ ನಿಂತು ನಿಂತು ಬೇಸತ್ತ ಹಾಸ್ಟೆಲ್ ಹುಡುಗ ಅಂದು ಮುಂಜಾನೆ ಬೇಗ ಎದ್ದು ಬಾತ್ರೂಂ ಬಳಿ ಕ್ಯೂ ಇಲ್ಲದುದ್ದನ್ನು ನೋಡಿ ವಾಪಾಸ್ ಬಂದು ಮುಸುಕೆಳೆದುಕೊಂಡ...
ಗಿಟಾರ್ ಕಲಿಯುತ್ತೆನೆಂದು ಅಪ್ಪನ ಬಳಿ ಹಣ ಕೇಳಿದ ಮಗನಿಗೆ ಅಪ್ಪ ಹಣ ಕೊಟ್ಟು ತೋಟಕ್ಕೆ ತಂತಿ ಬೇಲಿ ಹಾಕಲು ತಂತಿ ತರುವಂತೆ ಹೇಳಿದ..
ಮೂರುವರ್ಷಗಳಿಂದ ಜೊತೆಗಿದ್ದ, ಪ್ರೀತಿಸಿದ ಹುಡುಗಿಗೆ ಮಾತು ಬರುತ್ತಿಲ್ಲ ಎಂದು ತಿಳಿದ ಮೇಲೆ ಕೈಕೊಟ್ಟ ಹುಡುಗನಿಗೆ ಕಿವಿಯೇ ಕೇಳುತ್ತಿರಲಿಲ್ಲ...
ನಮ್ಮ ಮನೆಯ ಗೋಡೆಯ ಮೇಲಿರುವ ಗೋಲಾಕಾರದ ಗಡಿಯಾರದ ಮುಳ್ಳುಗಳು ಒಬ್ಬರನ್ನೊಬ್ಬರು ಅಗಲಿರಲಾರದೆ ತಾಸಿಗೊಮ್ಮೆ ಒಂದುಗೂಡುತ್ತವೆ...
Wednesday, December 17, 2008
ಅನಾಥ ಸೋಲು
ಗೆಲ್ಲುವುದು ಸುಲಭವಲ್ಲ.. ಗೆದ್ದಮೇಲೆ ಅದನ್ನು ಅರಗಿಸಿಕೊಲ್ಲುವುದೂ ಸುಲಭವಲ್ಲ.. ಸೋಲುವುದು ಸುಲಭ.. ಆದರೆ ಸೋತದ್ದನ್ನು ಅರಗಿಸಿಕೊಳ್ಳುವುದು ಸುಲಭವಲ್ಲ.. ಹೀಗಾಗಿ ಸೋಲಿಗೂ ಗೆಲುವಿಗೂ ಜಾಸ್ತಿ ವ್ಯತ್ಯಾಸವಿಲ್ಲಾ.. ಗೆದ್ದರೆಂದ ಮಾತ್ರಕ್ಕೆ ಅದು ಗೆಲುವಲ್ಲ .. ಸೋತರೆಂದ ಮಾತ್ರಕ್ಕೆ ಸೋಲಲ್ಲ.. ಗೆದ್ದು ಸೋತವರಿರುತ್ತಾರೆ.. ಸೋತು ಗೆದ್ದವರಿರುತ್ತಾರೆ.. ಸೋಲನ್ನು ಗೆಲುವೆಂದು ತಿಳಿದವರಿರುತ್ತಾರೆ.. ಸೋಲನ್ನೇ ಗೆಲುವಿನ ಸೋಪಾನವಾಗಿಸಿಕೊಂಡವರಿರುತ್ತಾರೆ..
ತನ್ನ ಸೋಲಿನಿಂದ ಪಾಠ ಕಲಿತವ ಬುದ್ಧಿವಂತನಾದರೆ ಇತರರ ಸೋಲಿನಿಂದ ಪಾಠ ಕಲಿತವ ಮಹಾಬುದ್ಧಿವಂತ.. ಗೆಲುವು ಅದರ ತಂದೆ ತಾಯಿಗಳನ್ನು ತಾನೆ ಹುಟ್ಟಿಹಾಕಿ ಕೊಳ್ಳುತ್ತದೆ... ಆದರೆ ಸೋಲು ಅನಾಥ.. ಸೋಲಿಗೂ ತಂದೆ ತಾಯಿಗಳಾಗಿ.. ಸೋತವರ ಬೆನ್ನು ತಟ್ಟಿ.. ಸೋಲಿಗೊಂದು ಅರ್ಥ ಕೊಡಿ..
Wednesday, December 10, 2008
ನೋಟ.. ಕಾಟ.. ತೋಟ..
Tuesday, December 9, 2008
ಇರಿತ
ಪ್ರಿತಿಯಿದ್ದರೆ...ಮತ್ಯಾಕೆ ನನ್ನೆದೆಗೆ ಆ ಕಣ್ಣಿನಿಂದ ಹಾಗೆ ಇರಿದೆ...?
ಅವನೂ ಅವಳೂ ಹೀಗಿದ್ದರು ...
ಇಬ್ಬರೂ ಅಳುತ್ತಾರೆ...
ಮಣ್ಣಿನಲ್ಲಿ ಇಬ್ಬರೂ ಆಡುತ್ತಾರೆ... ಮೈಗೆಲ್ಲಾ ಮಣ್ಣು ಮೆತ್ತಿಕೊಳ್ಳುತ್ತಾರೆ...
ಆಟ ಮುಂದುವರಿಯುತ್ತದೆ ...
ಕಾಲೇಜಿನಲ್ಲಿ ಅವಳು ಚಿಗರೆಯಂತೆ ಓಡಾಡುತ್ತಾಳೆ... ಆತ ಪ್ರೀತಿಸುತ್ತಾನೆ...
ಅವಳು ಒಪ್ಪುತ್ತಾಳೆ...
ಆತನಿಗೆ ಸಾಕೆನಿಸುತ್ತದೆ ... ಅವಳನ್ನು ನಿರಾಕರಿಸುತ್ತಾನೆ...
ಅವಳೊಬ್ಬಳೇ ಅಳುತ್ತಾಳೆ...
ಅವನ ಮನಸ್ಸಿಗೆ ವಯಸ್ಸಾಗುತ್ತದೆ... ಕ್ಷಮೆ ಕೇಳುತ್ತಾನೆ...
ಅವಳೆದುರು ಅಳುತ್ತಾನೆ...
'ಒಂದಾಗೋಣ ಬಾ..' ಎನ್ನುತ್ತಾನೆ... 'ಕ್ಷಮಿಸಿದ್ದೇನೆ ಹೋಗು'... ಎನ್ನುತ್ತಾಳೆ...
ಮತ್ತೆ ಅವನೇ ಅಳುತ್ತಾನೆ...
ಅವನಿಗೆ 'ಅಯ್ಯೋ' ಎನ್ನುತ್ತಾರೆ ... ಆಕೆಗೆ 'ಛಿ...' ಎನ್ನುತ್ತಾರೆ...
ಅಲ್ಲಿಗೆ ಜೀವನದ ಕಥೆ ಮುಗಿದಿರುತ್ತದೆ...
Saturday, December 6, 2008
ಸಮಾಜ ಪರಿಚಯ
ಸಮಾಜ ಕನ್ನಡಿ ಇದ್ದ ಹಾಗೆ.. ನಮ್ಮನ್ನು ನಾವು ಕಂಡುಕೊಳ್ಳಲು ಸಮಾಜದ ಎದುರು ಹೋಗಿ ನಿಲ್ಲಬೇಕು.. ಹಗಲಿನ ಸಮಯದಲ್ಲಿ...
Tuesday, December 2, 2008
ಪರಿಕಲ್ಪನೆ
ಜಾಸ್ತಿ ಆಯ್ತು... ಮತ್ತೆ ಬರೆಯುತ್ತೇನೆ...